ಶೀನಾ ಬೋರಾ ಹತ್ಯೆ ಪ್ರಕರಣ: ಇಂದ್ರಾಣಿ ಮುಖರ್ಜಿ ಜಾಮೀನು ಮನವಿ ಕುರಿತು ಸಿಬಿಐ, ಮ.ಪ್ರ. ಸರಕಾರಕ್ಕೆ ಸುಪ್ರೀಂ ನೋಟಿಸ್

ಹೊಸದಿಲ್ಲಿ, ಫೆ. 17: ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಧಾನ ಆರೋಪಿಯಾಗಿರುವ ಇಂದ್ರಾಣಿ ಮುಖರ್ಜಿ ಸಲ್ಲಿಸಿರುವ ಜಾಮೀನು ಅರ್ಜಿ ಕುರಿತು ಸುಪ್ರೀಂ ಕೋರ್ಟ್ ಶುಕ್ರವಾರ ಸಿಬಿಐ ಹಾಗೂ ಮಹಾರಾಷ್ಟ್ರ ಸರಕಾರದಿಂದ ಪ್ರತಿಕ್ರಿಯೆ ಕೋರಿದೆ. ಜಾಮೀನು ನಿರಾಕರಿಸಿ ಬಾಂಬೆ ಉಚ್ಚ ನ್ಯಾಯಾಲಯ 2021 ನವೆಂಬರ್ 16ರಂದು ನೀಡಿದ ಆದೇಶ ಪ್ರಶ್ನಿಸಿ ಮುಖರ್ಜಿ ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಹಾಗೂ ಪಿ.ಎಸ್. ನರಸಿಂಹ ಅವರನ್ನು ಒಳಗೊಂಡ ಪೀಠ ಸಿಬಿಐ ಹಾಗೂ ರಾಜ್ಯ ಸರಕಾರಕ್ಕೆ ನೋಟಿಸು ಜಾರಿ ಮಾಡಿದೆ. 2015 ಆಗಸ್ಟ್‌ನಲ್ಲಿ ಬಂಧಿತರಾಗಿ ಪ್ರಸ್ತುತ ಮುಂಬೈಯ ಬೈಕುಲಾ ಮಹಿಳಾ ಕಾರಾಗೃಹದಲ್ಲಿ ಇರುವ ಮುಖರ್ಜಿ ಅವರ ಪರವಾಗಿ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರು ಹಾಜರಾಗಿದ್ದರು. ಹತ್ಯೆ ಪ್ರಕರಣದ ಕುರಿತು ವಿಚಾರಣೆ ನಡೆಸುತ್ತಿರುವ ವಿಶೇಷ ಸಿಬಿಐ ನ್ಯಾಯಾಲಯ ಹಲವು ಸಂದರ್ಭಗಳಲ್ಲಿ ಮುಖರ್ಜಿಗೆ ಜಾಮೀನು ನಿರಾಕರಿಸಿತ್ತು. ಪುತ್ರಿ ಶೀನಾ ಬೋರಾಳ ಹತ್ಯೆ ಪ್ರಕರಣದ ವಿಚಾರಣೆಯನ್ನು ಮುಖರ್ಜಿ ಎದುರಿಸುತ್ತಿದ್ದಾರೆ. ಬೋರಾ (24)ಳನ್ನು ಮುಖರ್ಜಿ, ಆಕೆಯ ಆಗಿನ ಕಾರು ಚಾಲಕ ಶ್ಯಾಮವರ್ ರಾಯ್ ಹಾಗೂ ಮಾಜಿ ಪತಿ ಸಂಜೀವ್ ಖನ್ನಾ ಕಾರಿನಲ್ಲಿ 2012 ಎಪ್ರಿಲ್‌ನಲ್ಲಿ ಕತ್ತು ಹಿಸುಕಿ ಹತ್ಯೆಗೈದಿದ್ದಾರೆ ಹಾಗೂ ಆಕೆಯ ಮೃತದೇಹವನ್ನು ಸಮೀಪದ ರಾಯಗಢ ಜಿಲ್ಲೆಯ ಅರಣ್ಯದಲ್ಲಿ ದಹನ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.





