ಗುಜರಾತ್: ಇನ್ನು ಮುಂದೆ ಸೂರತ್ ನ ಎಲ್ಲ ಮುನ್ಸಿಪಲ್ ಶಾಲೆಗಳಲ್ಲಿ ಮೋದಿ ಫೋಟೊ !

ಪ್ರಧಾನಿ ನರೇಂದ್ರ ಮೋದಿ (File Photo: PTI)
ಅಹ್ಮದಾಬಾದ್: ಗುಜರಾತಿನ ಸೂರತ್ ನಗರದ ಎಲ್ಲ ಮುನ್ಸಿಪಲ್ ಶಾಲೆಗಳ ಗೋಡೆಗಳನ್ನು ಅಲಂಕರಿಸಿರುವ ಡಾ.ಬಿ.ಆರ್.ಅಂಬೇಡ್ಕರ್, ಡಾ.ಸರ್ವಪಲ್ಲಿ ರಾಧಾಕೃಷ್ಣನ್, ಭಾರತ ಮಾತಾ ಮತ್ತು ಸರ್ದಾರ್ ಪಟೇಲ್ ಅವರ ಭಾವಚಿತ್ರಗಳ ಸಾಲಿಗೆ ಪ್ರಧಾನಿ ನರೇಂದ್ರ ಮೋದಿಯವರ ಫೋಟೊ ಶೀಘ್ರವೇ ಸೇರಲಿದೆ ಎಂದು indianexpress ವರದಿ ಮಾಡಿದೆ.
ಮುನ್ಸಿಪಲ್ ಸ್ಕೂಲ್ ಬೋರ್ಡ್ (ಎಂಎಸ್ಬಿ)ನ ಅಧ್ಯಕ್ಷ ಧನೇಶ ಶಾ ಅವರು ನಗರದಲ್ಲಿಯ ಎಲ್ಲ ಮುನ್ಸಿಪಲ್ ಶಾಲೆಗಳ ಪ್ರಾಂಶುಪಾಲರ ಕಚೇರಿಗಳಲ್ಲಿ ಐದು ಫೋಟೊ ಫ್ರೇಮ್ ಗಳನ್ನಿರಿಸುವ ಪ್ರಸ್ತಾವವನ್ನು ಮಂಡಿಸಿದ್ದಾರೆ. ಶಾಲೆಗಳಲ್ಲಿ ತೂಗು ಹಾಕಲು 400 ಫೋಟೊ ಫ್ರೇಮ್ಗಳಿಗಾಗಿ ಬೇಡಿಕೆ ಸಲ್ಲಿಸಲು ಆರು ಲ.ರೂ.ಗಳ ಹಂಚಿಕೆಗೆ ಮಂಡಳಿಯು ಅನುಮತಿಸಿದೆ.
ಬಿಜೆಪಿಯ ಹೆಚ್ಚಿನ ಚುನಾಯಿತ ಸದಸ್ಯರು ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದ್ದರೆ ಆಪ್ ನ ಏಕೈಕ ಸದಸ್ಯ ರಾಕೇಶ್ ಹಿರ್ಪಾರಾ ಅವರು ಅನಗತ್ಯ ವೆಚ್ಚವನ್ನು ವಿರೋಧಿಸಿದ್ದರು. ತನ್ಮಧ್ಯೆ ಫೋಟೊಗಳಿಗಾಗಿ ಮಂಗಳವಾರ ಖಾಸಗಿ ಸಂಸ್ಥೆಯೊಂದಕ್ಕೆ ಬೇಡಿಕೆಯನ್ನು ಸಲ್ಲಿಸಲಾಗಿದೆ ಎಂದು ವರದಿಯಾಗಿದೆ.
ತಾನು ನಗರದಲ್ಲಿಯ ಹೆಚ್ಚಿನ ಮುನ್ಸಿಪಲ್ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಮೋದಿಯವರನ್ನು ಹೊರತುಪಡಿಸಿ ಎಲ್ಲ ಶಾಲೆಗಳಲ್ಲಿ ಅಂಬೇಡ್ಕರ್, ರಾಧಾಕೃಷ್ಣನ್, ಭಾರತ ಮಾತಾ, ಸರ್ದಾರ್ ಪಟೇಲ್, ಭಗತ್ ಸಿಂಗ್ ಮತ್ತು ಮಹಾತ್ಮಾ ಗಾಂಧಿಯವರ ಭಾವಚಿತ್ರಗಳಿವೆ ಎಂದು ಸುದ್ದಿಸಂಸ್ಥೆಗೆ ತಿಳಿಸಿದ ಹಿರ್ಪಾರಾ, ಭಾರತ ಮಾತೆಯ ಚಿತ್ರದಲ್ಲಿರುವ ತ್ರಿವರ್ಣ ಧ್ವಜವನ್ನು ಕೇಸರಿ ಧ್ವಜಕ್ಕೆ ಬದಲಿಸುವ ಯೋಜನೆಯೂ ಇದೆ ಎಂದು ಆರೋಪಿಸಿದರು.
ಆದರೆ, ಈಗಿರುವ ಫೋಟೊ ಫ್ರೇಮ್ ಗಳು ಹಳೆಯದು ಮತ್ತು ಮಸುಕಾಗಿರುವುದರಿಂದ ಹೊಸ ಫೋಟೋ ಫ್ರೇಮ್ ಗಳ ಖರೀದಿ ಅಗತ್ಯವಾಗಿದೆ. ಇನ್ನೆರಡು ದಿನಗಳಲ್ಲಿ ಹೊಸ ಫೋಟೊ ಫ್ರೇಮ್ಗಳನ್ನು ತೂಗು ಹಾಕಲು ಆರಂಭಿಸಲಾಗುವುದು ಎಂದು ಎಂಎಸ್ಬಿ ಉಪಾಧ್ಯಕ್ಷೆ ಸ್ವಾತಿಬೆನ್ ಸೋಸಾ ತಿಳಿಸಿದರು.
ಎಂಎಸ್ಬಿ ಸೂರತ್ ನಗರದಾತ್ಯಂತ ವಿವಿಧ ಭಾಷಾ ಮಾಧ್ಯಮಗಳಲ್ಲಿ 321 ಮುನ್ಸಿಪಲ್ ಶಾಲೆಗಳನ್ನು ನಡೆಸುತ್ತಿದೆ.
ಇದನ್ನೂ ಓದಿ: ಐಪಿಎಸ್ ಅಧಿಕಾರಿ ಅರವಿಂದ್ ದಿಗ್ವಿಜಯ್ ನೇಗಿ ಎನ್ಐಎ ವಶಕ್ಕೆ







