ನಂಜನಗೂಡು: ಪತ್ರಕರ್ತ ಶ್ರೀನಿವಾಸ ಮೂರ್ತಿ ನಿಧನ

ಮೈಸೂರು,ಫೆ.18: ನಂಜನಗೂಡು ವಾರ್ತಾಭಾರತಿ ಪ್ರತಿನಿಧಿ ಶ್ರೀನಿವಾಸಮೂರ್ತಿ (74) ಹೇಮಮೂರ್ತಿ ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಮೃತರು ಪತ್ನಿ, ಓರ್ವ ಪತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ನಂಜನಗೂಡು ಸುಜಾತ ಟೆಕ್ಸ್ ಟೈಲ್ಸ್ ನಲ್ಲಿ ಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಕಾರ್ಖಾನೆ ಮುಚ್ಚಿದ ನಂತರ ಛಾಯಾಗ್ರಾಹಕ ವೃತ್ತಿ ಆರಂಭಿಸಿದರು. ನಂತರ ಪತ್ರಿಕಾ ಛಾಯಾಗ್ರಾಹಕರಾಗಿ ಕರ್ತವ್ಯ ನಿರ್ವಹಿಸಿ ನಂತರ ವಾರ್ತಾಭಾರತಿ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದರು.
ಇದರ ಸೇವೆಯನ್ನು ಪರಿಗಣಿಸಿ ನಂಜನಗುಡು ತಾಲ್ಲೂಕ ಪತ್ರಕರ್ತರ ಸಂಘ 2019 ಸಾಲಿನ ಜೆಎಸ್‍ಎಸ್ ಸಂಸ್ಥೇ ನೀಡುವ ಶ್ರೀಶಿರಾತ್ರೀಶ್ವರ ಮಾಧ್ಯಮ ಪ್ರಶಸ್ತಿಗೆ ಆಯ್ಕೆ ಮಾಡಿತ್ತು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಖಾದಿ ಗ್ರಾಮೋದ್ಯೋಗ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎನ್.ಆರ್.ಕೃಷ್ಣಪ್ಪಗೌಡ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಸುಬ್ರಮಣ್ಯ, ನಂಜನಗೂಡು ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಹದೇವಪ್ರಸಾದ್, ಕಾರ್ಯದರ್ಶಿ ಪ್ರಕಾಶ್ ಸೇರಿದಂತೆ ಹಲವರು ಮೃತರ ಅಂತಿಮ ದರ್ಶನ ಪಡೆದರು.
ಸಂಜೆ ಕಪಿಲಾ ನದಿ ತೀರದ ಲಿಂಗಾಭಟ್ಟರ ಗುಡಿ ಸಮೀಪದ ರುದ್ರಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಿತು.







