ಪ್ರಜಾಪ್ರಭುತ್ವಕ್ಕೆ ದಾರಿದೀಪವಾದ ಸ್ವತಂತ್ರ ಭಾರತದ ಪ್ರಪ್ರಥಮ ಚುನಾವಣೆ
1952ರಲ್ಲಿ ಸುಕುಮಾರ್ ಸೇನ್ ನೇತೃತ್ವದಲ್ಲಿ ನಡೆದ ಚೊಚ್ಚಲ ಲೋಕಸಭಾ ಚುನಾವಣೆ ಅತ್ಯಂತ ಮಹತ್ವದ್ದಾಗಿತ್ತು. ಯಾಕೆಂದರೆ ಅವು ಆನಂತರ ನಡೆದ ಎಲ್ಲಾ ಚುನಾವಣೆಗಳಿಗೆ ಮಾನದಂಡವೊಂದನ್ನು ರೂಪಿಸಿತು. ಸೇನ್ ಅವರು ಈ ಪ್ರಕ್ರಿಯೆಯನ್ನು ಆರಂಭಿಸುವಾಗ ಖಾಯಂ ಅಥವಾ ತಾತ್ಕಾಲಿಕವಾಗಿ ನೇಮಕಗೊಂಡ ಸಿಬ್ಬಂದಿಯೇ ಲಭ್ಯರಿರಲಿಲ್ಲ. ಮೂಲಸೌಕರ್ಯಗಳೂ ಇರಲಿಲ್ಲ. ತರಬೇತಿ ಸೌಕರ್ಯಗಳಾಗಲಿ ಅಥವಾ ಸಾಂಸ್ಥಿಕ ನೆರವಾಗಲಿ ದೊರೆತಿರಲಿಲ್ಲ. 1944ರ ವಿಧಾನಸಭಾ ಚುನಾವಣೆಯನ್ನು ಆಯೋಜಿಸಿದ್ದ ದೊಡ್ಡ ಸಂಖ್ಯೆಯ ಸಿಬ್ಬಂದಿ ಒಂದೋ ವಲಸೆ ಹೋಗಿದ್ದರು ಇಲ್ಲವೇ ಗಲಭೆಗಳಲ್ಲಿ ಮೃತಪಟ್ಟಿದ್ದರು. ಹೀಗಾಗಿ ಸೇನ್ ಅವರು ಖಾಲಿ ಸ್ಲೇಟ್‌ನಿಂದಲೇ ಆರಂಭಿಸಿದರು.
ಭಾರತದಲ್ಲಿ ಪ್ರಜಾಪ್ರಭುತ್ವವು ಅತೀವವಾದ ರಾಷ್ಟ್ರೀಯ ಹೆಮ್ಮೆಯ ಮೂಲವಾಗಿದೆ ಹಾಗೂ ದೇಶದ ಅಸ್ಮಿತೆಯ ಅಡಿಪಾಯವಾಗಿದೆ. ಆದಾಗ್ಯೂ, ಸ್ವತಂತ್ರ ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಸುಗಮವಾದ ಆರಂಭ ದೊರೆತಿರಲಿಲ್ಲ. ಆದರೂ ಪ್ರಬಲ ಹೋರಾಟ ಹಾಗೂ ರಾಷ್ಟ್ರ ನಿರ್ಮಾತೃಗಳು ಮತ್ತು ಜನತೆಯ ದೃಢವಾದ ಸಂಕಲ್ಪದಿಂದಾಗಿ ಜಗತ್ತಿನ ಎರಡನೇ ಜನಸಂಖ್ಯೆಯ ದೇಶವಾದ ಭಾರತವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿ ರೂಪುಗೊಂಡಿತು.
ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳು ಎಲ್ಲಾ ಪ್ರಜಾಪ್ರಭುತ್ವವಾದಿ ರಾಷ್ಟ್ರಗಳ ಬುನಾದಿಯಾಗಿದೆ. ಭಾರತದ ಪ್ರಪ್ರಥಮ ಚುನಾವಣೆಯು 1951ರ ಅಕ್ಟೋಬರ್ 25ರಿಂದ 1952ರ ಫೆಬ್ರವರಿ 21ರವರೆಗೆ ನಡೆಯಿತು. 17,32,12,343 ಮಂದಿ ನೋಂದಾಯಿತ ಮತದಾರರ ಪೈಕಿ 10,59,50,083 ಮಂದಿ ತಮಗೆ ಹೊಸದಾಗಿ ದೊರೆತ ಮತದಾನದ ಹಕ್ಕನ್ನು ಚಲಾಯಿಸಿದರು. ಭಾರತದ ಭೌಗೋಳಿಕ ವಿಸ್ತಾರವು ಈಗಲೂ ಕೂಡಾ ಚುನಾವಣಾ ಪ್ರಕ್ರಿಯೆಗೆ ಬಲವಾದ ಸವಾಲಾಗಿದೆ. 1950ರ ದಶಕದಲ್ಲಂತೂ ಅದು ಬಹುತೇಕ ವೀಕ್ಷಕರು ಹಾಗೂ ಪರಿಣಿತರಿಗೆ ಅತ್ಯಂತ ದುಸ್ತರವಾಗಿ ಕಂಡುಬಂದಿತ್ತು.
ಕುತೂಹಲಕರವೆಂದರೆ 1952ರ ಚುನಾವಣೆಗಳು ರಾಜಕೀಯ ಪಕ್ಷಗಳ ಆಧಾರದಲ್ಲಿ ನಡೆದ ಕಾರಣ ಅತ್ಯಂತ ವ್ಯೆಹಾತ್ಮಕವಾಗಿತ್ತು. 1947ರಲ್ಲಿ ಭಾರತವು ಸ್ವತಂತ್ರಗೊಂಡಾಗ ಅದು ಪ್ರಭುತ್ವಕ್ಕೆ ಒಳಪಟ್ಟ ದೇಶವಾಗಿಯೇ ಉಳಿಯಿತು. ಬ್ರಿಟಿಷ್ ಗವರ್ನರ್ ಜನರಲ್ ಒಬ್ಬರು ಭಾರತೀಯ ರಾಜಕೀಯ ವ್ಯವಸ್ಥೆಯ ವರಿಷ್ಠರಾಗಿ ಉಳಿದುಕೊಂಡುಬಿಟ್ಟರು. 1949ರ ನವೆಂಬರ್ 26ರಂದು ಸಂವಿಧಾನವು ರಚನೆಯಾಗಿ 1950ರ ಜನವರಿ 26ರಂದು ಅಸ್ತಿತ್ವಕ್ಕೆ ಬಂದಿತು. ಪ್ರಧಾನಿ ಜವಾಹರ ಲಾಲ್ ನೆಹರೂ ಅವರು ಸಾಧ್ಯವಾದಷ್ಟು ಬೇಗನೆ ಚುನಾವಣೆಗಳನ್ನು ನಡೆಸಲು ಕಾತರರಾಗಿದ್ದರು. ಪ್ರಜಾಪ್ರಭುತ್ವ ಹಾಗೂ ಜನತೆಯ ಇಚ್ಛೆಯ ಸ್ಥಾಪನೆ ಸ್ವಾತಂತ್ರ ಹೋರಾಟದ ಮುಖ್ಯ ಆಶಯಗಳಾಗಿದ್ದವು. ಚುನಾವಣೆಗಳು ಇಲ್ಲದೆ ಇದ್ದಲ್ಲಿ ಈ ಆಶಯವು ಈಡೇರು ತ್ತಿರಲಿಲ್ಲ. ಸ್ವತಂತ್ರ ಭಾರತದಲ್ಲಿ ಚೊಚ್ಚಲ ಚುನಾವಣೆ ನಡೆಸುವ ಮಹಾನ್ ಕಾರ್ಯದ ಹೊಣೆಹೊತ್ತ ಸುಕುಮಾರ್ ಸೇನ್ ಅವರು ಭಾರತೀಯ ಪ್ರಜಾಪ್ರಭುತ್ವದ 'ಎಲೆಮರೆಯ ಕಾಯಿಯಂತಿರುವ' ನಾಯಕನಾಗಿಯೇ ಉಳಿದುಕೊಂಡರು.
ಐಸಿಎಸ್ ಅಧಿಕಾರಿಯಾದ ಸೇನ್ ಅವರು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಯಾಗಿದ್ದರು. 1950ರ ಮಾರ್ಚ್‌ನಲ್ಲಿ ಭಾರತದ ಪ್ರಪ್ರಥಮ ಚುನಾವಣಾ ಆಯುಕ್ತರಾಗಿ ನೇಮಕಗೊಂಡರು. ಅದಾದ ಒಂದು ತಿಂಗಳ ಬಳಿಕ ಸಂಸತ್‌ನಲ್ಲಿ ಜನತಾ ಪ್ರಾತಿನಿಧ್ಯ ಕಾಯ್ದೆಯನ್ನು ಅಂಗೀಕರಿಸಲಾಯಿತು. ಆ ಮೂಲಕ ಮತದಾರ ಪಟ್ಟಿಯ ಜಾರಿಯೊಂದಿಗೆ ಚುನಾವಣೆಗೆ ಕಾರ್ಯಚೌಕಟ್ಟನ್ನು ಒದಗಿಸಲಾಯಿತು. ಒಂದು ವರ್ಷದ ಬಳಿಕ ಚುನಾವಣೆಗಳ ನಿರ್ವಹಣೆಯ ಕುರಿತಾದ ಉಳಿದ ಎಲ್ಲಾ ವಿಷಯಗಳ ನಿರ್ವಹಣೆಗೆ ಜನತಾ ಪ್ರಾತಿನಿಧ್ಯ ಕಾಯ್ದೆ-1951 ಅನ್ನು ಅಂಗೀಕರಿಸಲಾಯಿತು. ಈ ಎರಡು ಕಾಯ್ದೆಗಳಿಗೆ ಒಂದೇ ಹೆಸರನ್ನು ಯಾಕೆ ನೀಡಲಾಯಿತೆಂಬ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ.
1951ರಲ್ಲಿಯೇ ಚುನಾವಣಾ ಪ್ರಕ್ರಿಯೆಯನ್ನು ಆರಂಭಿಸಲು ನಿರ್ಧರಿಸಲಾಯಿತು. 21 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಯಾವುದೇ ಭಾರತೀಯ ಪ್ರಜೆಯು ನಿರ್ದಿಷ್ಟ ಕ್ಷೇತ್ರದಲ್ಲಿ 180ಕ್ಕೂ ಹೆಚ್ಚು ದಿನಗಳ ಕಾಲ ವಾಸಿಸದೆ ಇದ್ದಲ್ಲಿ, ಆತ ಆ ಕ್ಷೇತ್ರದಲ್ಲಿ ಮತದಾನಕ್ಕೆ ಅರ್ಹನಾಗುವುದಿಲ್ಲ.
ಭಾರತವು ಆಗ ಬಡತನದಿಂದ ಪೀಡಿತವಾಗಿದ್ದರೂ ಮತ್ತು ತೀರಾ ಹಿಂದುಳಿದಿದ್ದರೂ, ಅದು ತನ್ನ ಪ್ರಜೆಗಳಿಗೆ ಸ್ತ್ರೀಪುರುಷರೆಂಬ ಭೇದವಿಲ್ಲದೆ ಸಮಾನ ಮತದಾನದ ಹಕ್ಕುಗಳನ್ನು ನೀಡಿತ್ತು. ಆದರೆ ಜಗತ್ತಿನ ಮಹಾನ್ ಪ್ರಜಾಪ್ರಭುತ್ವವಾದಿ ರಾಷ್ಟ್ರವೆಂದು ಹೇಳಿಕೊಳ್ಳುತ್ತಿರುವ ಅಮೆರಿಕವು ಮಹಿಳೆಯರಿಗೆ ಸಮಾನವಾದ ಮತದಾನದ ಹಕ್ಕುಗಳನ್ನು ನೀಡಲು 144 ವರ್ಷಗಳನ್ನು ತೆಗೆದುಕೊಂಡರೆ, ಬ್ರಿಟನ್‌ಗೆ 100 ವರ್ಷಗಳೇ ಬೇಕಾಯಿತು.
ಸ್ವಾತಂತ್ರಗೊಂಡ ಸಂದರ್ಭ ಅಗಾಧವಾದ ಅನಕ್ಷರತೆ (ಶೇ. 84)ಯಿದ್ದ ಈ ದೇಶದಲ್ಲಿ ದೇಶವಿಭಜನೆಯ ಸಂದರ್ಭ ಭುಗಿಲೆದ್ದ ಹಿಂಸಾದಳ್ಳುರಿಯಲ್ಲಿ ಲಕ್ಷಾಂತರ ನಿವಾಸಿಗಳ ಗುರುತಿನ ದಾಖಲೆಗಳು ನಾಪತ್ತೆಯಾಗಿದ್ದವು. ಇಂತಹ ಪರಿಸ್ಥಿತಿಯಲ್ಲಿ ಚುನಾವಣೆ ನಡೆಸುವುದೇ ಒಂದು ಮಹತ್ವದ ಸವಾಲಾಗಿತ್ತು. ಪಶ್ಚಿಮದ ಅಪ್ಪಟ ಪ್ರಜಾಪ್ರಭುತ್ವವಾದಿ ರಾಷ್ಟ್ರಗಳಾದ ಅಮೆರಿಕ ಅಥವಾ ಬ್ರಿಟನ್‌ನಲ್ಲಿ ಚುನಾವಣೆಗಳು ಎರಡು ಅಥವಾ ಹೆಚ್ಚೆಂದರೆ ಮೂರು ರಾಜಕೀಯ ಪಕ್ಷಗಳ ನಡುವೆ ನಡೆಯುತ್ತಿದ್ದವು. ಆದಾಗ್ಯೂ ಭಾರತದಲ್ಲಿ ಚೊಚ್ಚಲ ಚುನಾವಣೆಯಲ್ಲಿಯೇ 53 ನೋಂದಾಯಿತ ರಾಜಕೀಯ ಪಕ್ಷಗಳು (ಅವುಗಳಲ್ಲಿ 14 ರಾಷ್ಟ್ರೀಯ ಪಕ್ಷಗಳು), ಸಂಸತ್‌ನ ಕೆಳಮನೆಯ 489 ಸ್ಥಾನಗಳಿಗೆ ಸ್ಪರ್ಧಿಸಿದ್ದವು.
ಸ್ವಾತಂತ್ರದ ಸಮಯದಲ್ಲಿ ಬ್ರಿಟಿಷ್ ಭಾರತದಲ್ಲಿ 17 ಪ್ರಾಂತಗಳಿದ್ದು, ಅವುಗಳನ್ನು ರಾಜ್ಯಗಳಾಗಿ ಮರುಸಂಘಟಿಸಲಾಗಿತ್ತು. ಅಲ್ಲದೆ 565 ಅರಸೊತ್ತಿಗೆಯ ರಾಜ್ಯಗಳಿದ್ದವು. ಅವುಗಳನ್ನು ಅಸ್ತಿತ್ವದಲ್ಲಿರುವ ಪ್ರಾಂತಗಳ ಜೊತೆ ವಿಲೀನಗೊಳಿಸಬೇಕಾಗಿತ್ತು. ಅಂತಿಮವಾಗಿ 14 ನೂತನ ರಾಜ್ಯಗಳ ಹಾಗೂ ಆರು ಕೇಂದ್ರಾಡಳಿತ ಪ್ರದೇಶಗಳು ಸ್ವತಂತ್ರ ಭಾರತದಲ್ಲಿ ರೂಪುಗೊಂಡವು. ಭಾರತೀಯ ಚುನಾವಣಾ ಆಯೋಗವು ರಚನೆಯಾಗುವುದಕ್ಕೆ ಮುನ್ನ ಮತದಾರ ಪಟ್ಟಿಯ ಸಿದ್ಧತೆಯ ಉಸ್ತುವಾರಿ ಹೊತ್ತಿದ್ದ ಸಂವಿಧಾನ ರಚನಾ ಅಸೆಂಬ್ಲಿ ಕಾರ್ಯಾಲಯಕ್ಕೆ (ಸಿಎಎಸ್) ಪ್ರಾಂತಗಳ ಪುನರ್‌ಸಂಘಟನೆಯು ಎದುರಾದ ಮೊದಲ ಸವಾಲಾಗಿತ್ತು.
ದೇಶವಿಭಜನೆಯ ಗಲಭೆಯ ಬಳಿಕ ಭಾರತವು ನಿರಾಶ್ರಿತರು ಹಾಗೂ ಅವರ ಪುನರ್ವಸತಿಯ ಸವಾಲನ್ನು ಎದುರಿಸಿತು. ಬಂಗಾಳ ಹಾಗೂ ಪಂಜಾಬ್ ಗಡಿಗಳು ವಸ್ತುಶಃ ತೆರೆದಂತಿತ್ತು. 1947ರ ಕೊನೆಯ ತಿಂಗಳುಗಳಲ್ಲಿ ಅಲ್ಲದೆ ಆನಂತರವೂ ಹೆಚ್ಚುಕಡಿಮೆ ನಿರಾಶ್ರಿತರ ಮಹಾಪೂರವೇ ಭಾರತದ ಗಡಿಯೊಳಗೆ ಹರಿದುಬರುತ್ತಿತ್ತು. ಭಾರತ ಹಾಗೂ ಪಾಕಿಸ್ತಾನದ ನಡುವಿನ ಅಂತರ್‌ರಾಷ್ಟ್ರೀಯ ಗಡಿಗಳು ನಿಖರವಾಗಿ ಎಲ್ಲಿವೆಯೆಂಬ ಬಗ್ಗೆ ಜನರು ಹಾಗೂ ಆಡಳಿತಗಾರರಲ್ಲಿ ವ್ಯಾಪಕವಾದ ಗೊಂದಲವಿತ್ತು. ಈ ಗೊಂದಲದ ನಡುವೆಯೂ ಸಿಎಎಸ್ ಸಂಸ್ಥೆಯು 17.30 ಕೋಟಿ ಮಂದಿ ನೋಂದಾಯಿತ ಮತದಾರರ ಪಟ್ಟಿಯನ್ನು ಎರಡು ವರ್ಷಗಳಲ್ಲಿ ಸಿದ್ಧಪಡಿಸುವ ಕೆಲಸವನ್ನು ಕೈಗೊಂಡಿತು. ಹೀಗಾಗಿ ಸುಕುಮಾರ್ ಸೇನ್ ಅವರಿಗೆ ಮತದಾರರ ಪಟ್ಟಿ ತಯಾರಿಸುವ ಗುರುತರವಾದ ಹೊಣೆ ಸುಲಭವಾಯಿತು. ಆಗಿನ್ನೂ ಚುನಾವಣಾ ಆಯೋಗವು ಅಸ್ತಿತ್ವಕ್ಕೆ ಬಂದಿರಲೇ ಇಲ್ಲ,
ಈ ಪ್ರಕ್ರಿಯೆಯಲ್ಲಿ ಸಂವಿಧಾನ ರಚನಾ ಸಭೆಯ ಕಾರ್ಯದರ್ಶಿ ಬಿ.ಎನ್. ರಾವ್ ನೇತೃತ್ವದ ಅಧಿಕಾರ ವರ್ಗದ ದೂರದರ್ಶಿತ್ವವನ್ನು ಕೂಡಾ ಮರೆಯುವಂತಿಲ್ಲ. ಮತದಾರ ಪಟ್ಟಿಯ ತಯಾರಿಯಲ್ಲಿ ನೇರವಾಗಿ ಹಾಗೂ ನಿರಂತರವಾಗಿ ಪಾಲ್ಗೊಂಡಿದ್ದ ಇತರ ಪ್ರಮುಖ ಸಿಬ್ಬಂದಿಯೆಂದರೆ, ಜಂಟಿ ಕಾರ್ಯದರ್ಶಿ ಎಸ್.ಎನ್.ಮುಖರ್ಜಿ, ಅಧೀನ ಕಾರ್ಯದರ್ಶಿಗಳಾದ ಕೆ.ವಿ. ಪದ್ಮನಾಭನ್ ಹಾಗೂ ಪಿ.ಎಸ್. ಸುಬ್ರಮಣಿಯಂ. ಇವರ ಪೈಕಿ ಪಿ.ಎಸ್. ಸುಬ್ರಮಣಿಯಂ ಅವರು 1948ರ ಅಂತ್ಯದ ವೇಳೆಗೆ ಸಿಎಎಸ್‌ಗೆ ಸೇರ್ಪಡೆಗೊಂಡರು, ಆನಂತರ ಬಿ.ಎನ್.ರಾವ್ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡರು. ಕುತೂಹಲಕರವೆಂದರೆ, ಸಿಎಎಸ್ ಭಾರತೀಯರನ್ನು ಪೌರರನ್ನಾಗಿ ಗುರುತಿಸುವುದಕ್ಕೂ ಮುನ್ನವೇ ಅವರನ್ನು ಮತದಾರರನ್ನಾಗಿ ಮಾಡಿಬಿಟ್ಟಿತ್ತು.
ಒಂದು ಸ್ವತಂತ್ರವಾದ ಹಾಗೂ ಸ್ವಾಯತ್ತವಾದ ಸಾಂವಿಧಾನಿಕ ಅಂಗವಾಗಿ ಭಾರತೀಯ ಚುನಾವಣಾ ಆಯೋಗವನ್ನು ಸೃಷ್ಟಿಸಲಾಯಿತು. ಸಂವಿಧಾನದ 289ನೇ ಕರಡು ವಿಧಿಯನ್ನು (ಆನಂತರ ಅದು ಸಂವಿಧಾನದ 324ನೇ ವಿಧಿಯಾಗಿ ರೂಪುಗೊಂಡಿತ್ತು) 1949ರ ಜೂನ್ 15ರಂದು ಸಂವಿಧಾನ ರಚನೆ ಅಸೆಂಬ್ಲಿಯಲ್ಲಿ ಚೇರ್‌ಮನ್ ಆಗಿದ್ದ ಬಿ.ಆರ್. ಅಂಬೇಡ್ಕರ್ ಅವರು ಸ್ವತಂತ್ರವಾದ ಕೇಂದ್ರೀಯ ಹಾಗೂ ಒಕ್ಕೂಟ ವ್ಯವಸ್ಥೆಯ ಚುನಾವಣಾ ಆಯೋಗದ ರಚನೆಯಲ್ಲಿನ ತಾರ್ಕಿಕತೆಯನ್ನು ವಿವರಿಸಿದರು.
ಹೀಗೆ ಮತದಾರರ ಪಟ್ಟಿ ರಚನೆಯ ಮೇಲ್ವಿಚಾರಣೆ, ನಿರ್ದೇಶನ ಹಾಗೂ ಲೋಕಸಭೆ, ರಾಜ್ಯವಿಧಾನಸಭೆಗಳಿಗೆ ಮತ್ತು ರಾಷ್ಟ್ರಪತಿ, ಉಪರಾಷ್ಟ್ರಪತಿ ಹುದ್ದೆಗಳ ಚುನಾವಣೆಗಳನ್ನು ನಡೆಸುವ ಹೊಣೆ ಹೊತ್ತ ಸ್ವತಂತ್ರವಾದ ಚುನಾವಣಾ ಆಯೋಗದ ರಚನೆಯಾಯಿತು.
1952ರಲ್ಲಿ ಸುಕುಮಾರ್ ಸೇನ್ ನೇತೃತ್ವದಲ್ಲಿ ನಡೆದ ಚೊಚ್ಚಲ ಲೋಕಸಭಾ ಚುನಾವಣೆ ಅತ್ಯಂತ ಮಹತ್ವದ್ದಾಗಿತ್ತು. ಯಾಕೆಂದರೆ ಅವು ಆನಂತರ ನಡೆದ ಎಲ್ಲಾ ಚುನಾವಣೆಗಳಿಗೆ ಮಾನದಂಡವೊಂದನ್ನು ರೂಪಿಸಿತು. ಸೇನ್ ಅವರು ಈ ಪ್ರಕ್ರಿಯೆಯನ್ನು ಆರಂಭಿಸುವಾಗ ಖಾಯಂ ಅಥವಾ ತಾತ್ಕಾಲಿಕವಾಗಿ ನೇಮಕಗೊಂಡ ಸಿಬ್ಬಂದಿಯೇ ಲಭ್ಯರಿರಲಿಲ್ಲ. ಮೂಲಸೌಕರ್ಯಗಳೂ ಇರಲಿಲ್ಲ. ತರಬೇತಿ ಸೌಕರ್ಯಗಳಾಗಲಿ ಅಥವಾ ಸಾಂಸ್ಥಿಕ ನೆರವಾಗಲಿ ದೊರೆತಿರಲಿಲ್ಲ. 1944ರ ವಿಧಾನಸಭಾ ಚುನಾವಣೆಯನ್ನು ಆಯೋಜಿಸಿದ್ದ ದೊಡ್ಡ ಸಂಖ್ಯೆಯ ಸಿಬ್ಬಂದಿ ಒಂದೋ ವಲಸೆ ಹೋಗಿದ್ದರು ಇಲ್ಲವೇ ಗಲಭೆಗಳಲ್ಲಿ ಮೃತಪಟ್ಟಿದ್ದರು. ಹೀಗಾಗಿ ಸೇನ್ ಅವರು ಖಾಲಿ ಸ್ಲೇಟ್‌ನಿಂದಲೇ ಆರಂಭಿಸಿದರು.
ಲೋಕಸಭೆಯ 489 ಕ್ಷೇತ್ರಗಳ ಪೈಕಿ, 314 ಏಕ ಅಭ್ಯರ್ಥಿಯ ಕ್ಷೇತ್ರಗಳಾಗಿದ್ದವು. 172 ಅವಳಿ ಸ್ಥಾನದ ಕ್ಷೇತ್ರಗಳಾಗಿದ್ದವು (ಅವಳಿ ಅಭ್ಯರ್ಥಿ ಕ್ಷೇತ್ರಗಳಲ್ಲಿ ಒಂದು ಸಾಮಾನ್ಯ ಶ್ರೇಣಿ ಹಾಗೂ ಇನ್ನೊಂದು ಎಸ್‌ಸಿ ಅಥವಾ ಎಸ್‌ಟಿ ಅಭ್ಯರ್ಥಿ ಒಳಗೊಂಡಿದ್ದವು). 533 ಪಕ್ಷೇತರರು ಸೇರಿದಂತೆ ಒಟ್ಟು 1,874 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು.
ಮತಪತ್ರಗಳನ್ನು ನಾಸಿಕ್‌ನಲ್ಲಿರುವ ಸರಕಾರಿ ಭದ್ರತಾ ಮುದ್ರಣಾಲಯದಲ್ಲಿ ಮುದ್ರಿಸಲಾಗಿತ್ತು. ಮೊದಲ ಚುನಾವಣೆಯಲ್ಲಿ ಸುಮಾರು 1,96,084 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಅವುಗಳಲ್ಲಿ 27,527 ಮತಗಟ್ಟೆಗಳನ್ನು ಮಹಿಳೆಯರಿಗಾಗಿಯೇ ಸ್ಥಾಪಿಸಲಾಗಿತ್ತು. ಪ್ರತಿಯೊಬ್ಬ ಅಭ್ಯರ್ಥಿಗೂ ಬೇರೆ ಬೇರೆ ಬಣ್ಣದ ಮತಪೆಟ್ಟಿಗೆಗಳನ್ನು ನಿಗದಿಪಡಿಸಲಾಗಿತ್ತು. ಅದರಲ್ಲಿ ಅಭ್ಯರ್ಥಿಯ ಹೆಸರು ಹಾಗೂ ಚುನಾವಣಾ ಚಿಹ್ನೆಯನ್ನು ಬರೆಯಲಾಗಿತ್ತು. ದೇಶಾದ್ಯಂತ ಒಟ್ಟಾರೆ 45.7ಶೇ. ಮತದಾನ ದಾಖಲಾಗಿತ್ತು. ಆಗಿನ ಸನ್ನಿವೇಶಕ್ಕೆ ಇಷ್ಟೊಂದು ಪ್ರಮಾಣದ ಮತದಾನ ಸಮಾಧಾನಕರವೆಂದೇ ಪರಿಗಣಿಸಲ್ಪಟ್ಟಿತ್ತು. ಆದಾಗ್ಯೂ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಶೇ.80.5 ಮತದಾನವು ದಾಖಲಾಗಿತ್ತು. ಒಟ್ಟಿನಲ್ಲಿ ತಮ್ಮ ಹಕ್ಕನ್ನು ಚಲಾಯಿಸುವಲ್ಲಿ ಭಾರತೀಯ ಜನತೆ ತೋರಿದ್ದ ಉತ್ಸಾಹಕ್ಕೆ ಈ ಚುನಾವಣೆ ಸಾಕ್ಷಿಯಾಗಿತ್ತು. ಭವಿಷ್ಯದ ಪ್ರಜಾತಾಂತ್ರಿಕ ಉಪಕ್ರಮಗಳಿಗೆ ಈ ಚುನಾವಣೆಗಳು ದಾರಿದೀಪವಾಗಿತ್ತು.
ಈ ಚುನಾವಣೆ ಸಂಪೂರ್ಣವಾಗಿ ಯಶಸ್ವಿಯಾಗುವಂತೆ ಮಾಡಲು ಪ್ರತಿಯೊಂದು ಅಂಶಗಳ ಬಗ್ಗೆಯೂ ಭಾರೀ ಕಾಳಜಿಯನ್ನು ವಹಿಸಲಾಗಿತ್ತು.
ದೇಶದ ದುರ್ಗಮ ಪ್ರದೇಶಗಳಿಗೆ ಮತಗಟ್ಟೆಗಳನ್ನು ಹಾಗೂ ಮತಗಟ್ಟೆ ಅಧಿಕಾರಿಗಳನ್ನು ಸಾಗಿಸಲು ಒಂಟೆ, ಆನೆಗಳು ಸೇರಿದಂತೆ ಎಲ್ಲಾ ವಿಧದ ಸಾರಿಗೆಗಳನ್ನು ಬಳಸಲಾಗಿತ್ತು. ಮತಪತ್ರಗಳು, ಮತಪೆಟ್ಟಿಗೆಗಳು ಹಾಗೂ ಅಳಿಸಲಾಗದ ಶಾಯಿಯನ್ನು ಸಿದ್ಧಪಡಿಸಲಾಗಿತ್ತು. ರಾಜಕೀಯ ಪಕ್ಷಗಳಿಗೆ ಚುನಾವಣಾ ಚಿಹ್ನೆಗಳನ್ನು ವಿನ್ಯಾಸಗೊಳಿಸಲಾಗಿತ್ತು ಹಾಗೂ ಬಹುತೇಕ ಅನಕ್ಷರಸ್ಥ ಮತದಾರರಿಗೆ ಚುನಾವಣಾ ಚಿಹ್ನೆಗಳ ಬಗ್ಗೆ ಮೊದಲೇ ಅರಿವು ಮೂಡಿಸಲಾಗಿತ್ತು. ಹವಾಮಾನ ಸೇರಿದಂತೆ ಎಲ್ಲಾ ರೀತಿಯ ಅಂಶಗಳ ಬಗ್ಗೆಯೂ ವ್ಯಾಪಕ ಗಮನಹರಿಸಲಾಗಿತ್ತು. ಈಗಿನ ಹಿಮಾಚಲ ಪ್ರದೇಶದ ಚಿನಿಯಂತಹ ಕೆಲವು ನಿರ್ದಿಷ್ಟ ತಹಶೀಲುಗಳಲ್ಲಿ ಸ್ಥಳೀಯರು ದೇಶದ ಉಳಿದೆಡೆಯ ಮತದಾರರಿಗಿಂತ ಮುಂಚಿತವಾಗಿಯೇ ಮತದಾನ ಮಾಡಿದ್ದರು. ಚಳಿಗಾಲವಾದ್ದರಿಂದ ಭಾರೀ ಹಿಮಸುರಿಯುವ ಕಾರಣ ಮತದಾರರಿಗೆ ಮತಗಟ್ಟೆಗಳಿಗೆ ಹೋಗುವುದು ತುಂಬಾ ಕಠಿಣವಾದ್ದರಿಂದ ಮುಂಚಿತವಾಗಿಯೇ ಮತದಾನದ ವ್ಯವಸ್ಥೆ ಮಾಡಲಾಗಿತ್ತು. ಕಿನ್ನಾನೌರ್ ಕಣಿವೆಯಲ್ಲಿರುವ ಗ್ರಾಮವಾದ ಕಲ್ಪಾದ ಯುವಕ ಶ್ಯಾಮ್ ಶರಣ್ ನೇಗಿ ದೇಶದಲ್ಲಿ ಮತದಾನ ಮಾಡಿದ ಪ್ರಪ್ರಥಮ ಮತದಾರನೆನಿಸಿಕೊಂಡ. ಆವಾಗಿನಿಂದ ಈತನಕ ಆತ ಒಂದೇ ಒಂದು ಚುನಾವಣೆಗೂ ಮತದಾನ ಮಾಡುವುದನ್ನು ತಪ್ಪಿಸಿಕೊಂಡಿಲ್ಲ. ಅಲ್ಲದೆ ಈಗ ಬದುಕಿರುವ ದೇಶದ ಅತ್ಯಂತ ಹಿರಿಯ ವಯಸ್ಸಿನ ಮತದಾರನೆಂಬ ದಾಖಲೆಗೂ ಪಾತ್ರನಾಗಿದ್ದಾನೆ.
ಆ ಕಾಲದಲ್ಲಿದ್ದ ಅಂತರ್‌ರಾಷ್ಟ್ರೀಯ ಪರಿಸ್ಥಿತಿಯ ದೃಷ್ಟಿಯಿಂದಲೂ ಭಾರತದ ಪ್ರಪ್ರಥಮ ಚುನಾವಣೆ ಹೆಚ್ಚು ಅಸಾಧಾರಣವಾದುದಾಗಿತ್ತು. 1951ರ ಅಂತ್ಯದಲ್ಲಿ ಭಾರತ ಚುನಾವಣೆಗೆ ತೆರಳಿದ ಸಂದರ್ಭ ನೆರೆಯ ಪಾಕಿಸ್ತಾನದ ಪ್ರಧಾನಿ ಲಿಯಾಕತ್ ಅಲಿ ಖಾನ್ ಅವರ ಹತ್ಯೆಯಾಗಿತ್ತು. ಇದರಿಂದಾಗಿ ಪಾಕ್ ಪ್ರಪ್ರಥಮ ಬಾರಿಗೆ ಸೇನಾಡಳಿತಕ್ಕೆ ಒಳಪಟ್ಟಿತು. ದಕ್ಷಿಣ ಆಫ್ರಿಕದಲ್ಲಿ ಅಲ್ಲಿನ ಸರಕಾರವು ಮಿಶ್ರ ಜನಾಂಗೀಯರ ಮತದಾನದ ಹಕ್ಕುಗಳನ್ನು ಕಸಿದುಕೊಂಡಿತ್ತು. ಫ್ರಾನ್ಸ್ ವಿರುದ್ಧ ವಿಯೆಟ್ನಾಮ್ ಯುದ್ಧಕ್ಕೆ ಧುಮುಕಿತ್ತು. ಇರಾನ್‌ನ ಪ್ರಧಾನಿಯ ಹತ್ಯೆ ನಡೆಯಿತು. ಜಾಗತಿಕ ಮಟ್ಟದಲ್ಲಿ ಇಷ್ಟೊಂದು ಗಲಭೆ ಹಾಗೂ ಹಿಂಸಾಚಾರಗಳು ನಡೆದಾಗ ಭಾರತವು ಪ್ರಜಾತಾಂತ್ರಿಕ ವೌಲ್ಯಗಳನ್ನು ಎತ್ತಿಹಿಡಿಯಲು ಹೋರಾಡಿತು. ವಸಾಹತುಶಾಹಿ ಆಳ್ವಿಕೆಗೊಳಗಾಗಿ ತಮ್ಮ ಸ್ವಾತಂತ್ರಕ್ಕಾಗಿ ದಶಕಗಳ ಕಾಲ ಹೋರಾಡಿದ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಲು ಹೆಜ್ಜೆಯಿಡತೊಡಗಿತು.
ಇಂದು ಕಳೆದ ಏಳು ದಶಕಗಳಲ್ಲಿ ಮಹಾನ್ ಭಾರತೀಯ ಚುನಾವಣೆಯು ಮುಕ್ತ, ನ್ಯಾಯಸಮ್ಮತ ಹಾಗೂ ವಿಶ್ವಸನೀಯ ಚುನಾವಣೆಗಳಿಗೆ ಜಾಗತಿಕ ಮಾನದಂಡಗಳಾಗಿವೆ. ಈ ಅವಧಿಯಲ್ಲಿ ಹಲವಾರು ಚುನಾವಣಾ ಸುಧಾರಣೆಗಳಾಗಿವೆಯಾದರೂ, ಅವುಗಳಲ್ಲಿ ಅತ್ಯಂತ ಪ್ರಮುಖವಾದುದೆಂದರೆ ಅಭ್ಯರ್ಥಿಗಳ ಬಣ್ಣದ ಮತಪೆಟ್ಟಿಗೆಗಳಿಂದ ಮತ್ತು ಮತಪತ್ರಗಳನ್ನು ಇಲೆಕ್ಟ್ರಾನಿಕ್ ಮತಯಂತ್ರಗಳು ತೆರವುಗೊಳಿಸಿರುವುದಾಗಿದೆ. ಬಹುಶಃ ಈಗಿರುವ ವ್ಯವಸ್ಥೆಯ ಶೇ.80ರಷ್ಟು ಚುನಾವಣಾ ಪ್ರಕ್ರಿಯೆಯು ಸೇನ್ ಅವರದೇ ಸೃಷ್ಟಿಯಾಗಿದೆ. ಸಾಮೂಹಿಕ ಮಾಧ್ಯಮಗಳ ಅನುಪಸ್ಥಿತಿಯಲ್ಲಿ ಅವರು ತನ್ನ ಕರ್ತವ್ಯವನ್ನು ಅತ್ಯಂತ ದಕ್ಷತೆಯಿಂದ ನಿರ್ವಹಿಸಿದರು. ಅವರು ಭಾರತದ ಪ್ರಜಾಪ್ರಭುತ್ವದ ಎಲೆಮರೆಯ ಕಾಯಿಯಂತಿರುವ ನಾಯಕರಾಗಿದ್ದಾರೆ.
ಕೃಪೆ: thewire.in
(ಎಸ್.ವೈ. ಖುರೈಷಿ ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತ)







