2021ರಲ್ಲಿ ಕೋವಿಡ್‌ನಿಂದ ಅತ್ಯಧಿಕ ಬಾಧಿತ ರಾಜ್ಯ ಉತ್ತರಪ್ರದೇಶ

ಕಳೆದ ವರ್ಷ, ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ವಾರಣಾಸಿ ಇರುವ ಪೂರ್ವ ಉತ್ತರಪ್ರದೇಶದ ಪೂರ್ವಾಂಚಲ ವಲಯದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ಆಘಾತಕಾರಿ ಪ್ರಮಾಣದಲ್ಲಿ ಏರಿತ್ತು. ಮಾನವಹಕ್ಕುಗಳ ಸಂಘಟನೆ 'ಸಿಟಿಝನ್ಸ್ ಫಾರ್ ಜಸ್ಟೀಸ್ ಆ್ಯಂಡ್ ಪೀಸ್' ಮತ್ತು ಸ್ವತಂತ್ರ ಪರಿಣತರು ಸಂಗ್ರಹಿಸಿದ ಹಾಗೂ ವಿಶ್ಲೇಷಿಸಿದ ಅಂಕಿಅಂಶಗಳು ಇದನ್ನು ಸಾಬೀತುಪಡಿಸಿವೆ.
2020 ಜನವರಿ ಮತ್ತು 2021 ಆಗಸ್ಟ್ ನಡುವಿನ ಅವಧಿಯಲ್ಲಿ ಪೂರ್ವಾಂಚಲ ವಲಯದಲ್ಲಿ ದಾಖಲಾದ ಸಾವುಗಳು, 2019ರ ದಾಖಲೆಗಳ ಆಧಾರದಲ್ಲಿ ಈ ಅವಧಿಗೆ ನಿರೀಕ್ಷಿಸಿದ ಸಾವುಗಳ ಸಂಖ್ಯೆಗಿಂತ ಸುಮಾರು 60 ಶೇಕಡಾದಷ್ಟು ಹೆಚ್ಚಾಗಿದೆ. ಅದೂ ಅಲ್ಲದೆ, ಕೊರೋನ ವೈರಸ್ ಸಾಂಕ್ರಾಮಿಕ ಕಾಲಿಡುವ ಮುನ್ನ ರಾಜ್ಯದ ಸಾವಿನ ದರಕ್ಕೆ ಸಂಬಂಧಿಸಿದ ಸರಕಾರಿ ಅಂಕಿ-ಅಂಶಗಳಿಗೆ ಹೋಲಿಸಿದರೂ ಈ ಹೆಚ್ಚಳ ಸ್ಪಷ್ಟವಾಗಿ ಗೋಚರಿಸುತ್ತದೆ.
ಉತ್ತರ ಪ್ರದೇಶದ ಈ ಭಾಗದಲ್ಲಿ ಸಾವಿನ ಪ್ರಮಾಣದಲ್ಲಿ ಉಂಟಾದ ಹೆಚ್ಚಳವು ರಾಜ್ಯದಾದ್ಯಂತವೂ ಸಂಭವಿಸಿದರೆ, ಇಡೀ ರಾಜ್ಯದಲ್ಲಿ ಸಾಂಕ್ರಾಮಿಕದ ಅವಧಿಯಲ್ಲಿ ಸುಮಾರು 14 ಲಕ್ಷ ಹೆಚ್ಚುವರಿ ಸಾವುಗಳು ಸಂಭವಿಸಿರುವ ಸಾಧ್ಯತೆಯಿದೆ. ಇದು ಉತ್ತರ ಪ್ರದೇಶದ ಅಧಿಕೃತ ಕೋವಿಡ್-19 ಸಾವಿನ ಸಂಖ್ಯೆಯಾದ 23,000ದ 60 ಪಟ್ಟು ಆಗಿದೆ.
ಇದು ಉತ್ತರಪ್ರದೇಶವನ್ನು, ಸಾಂಕ್ರಾಮಿಕದ ಅವಧಿಯಲ್ಲಿ ದೇಶದಲ್ಲಿ ಅತಿ ಹೆಚ್ಚು ನರಳಿದ, ಆದರೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸಾವುಗಳನ್ನು ಅಧಿಕೃತವಾಗಿ ದಾಖಲೆಗೆ ಸೇರಿಸಿದ ರಾಜ್ಯಗಳ ಪೈಕಿ ಒಂದಾಗಿಸುತ್ತದೆ.
ಭಾರತದಾದ್ಯಂತ, ಕೋವಿಡ್-19 ಸಾಂಕ್ರಾಮಿಕವು ಭಾರೀ ಬಲಿಯನ್ನು ಪಡೆದುಕೊಂಡಿದೆ. ಆದರೆ, ಅಧಿಕೃತ ದಾಖಲೆಗಳು ವಾಸ್ತವಿಕ ಸಾವುಗಳ ಒಂದು ಭಾಗವನ್ನಷ್ಟೇ ತೋರಿಸುತ್ತವೆ. ಭಾರತದಲ್ಲಿ ಕೋವಿಡ್-19 ಸಾವುಗಳ ಸಂಖ್ಯೆಯನ್ನು ಅಗಾಧ ಪ್ರಮಾಣದಲ್ಲಿ ಹತ್ತಿಕ್ಕಲಾಗಿದೆ ಎನ್ನುವುದು ಹಲವು ಸ್ವತಂತ್ರ ವರದಿಗಳು ಮತ್ತು ಅಧ್ಯಯನಗಳ ಮೂಲಕ ನಮಗೀಗ ತಿಳಿದಿದೆ. ಭಾರತದಲ್ಲಿ ವಾಸ್ತವಿಕವಾಗಿ ದಾಖಲಾಗಿರುವುದಕ್ಕಿಂತ 30 ಲಕ್ಷಕ್ಕಿಂತಲೂ ಅಧಿಕ ಸಾವುಗಳು ಸಂಭವಿಸಿರುವ ಸಾಧ್ಯತೆಯಿದೆ ಎನ್ನುವುದನ್ನು ನಾಗರಿಕ ನೋಂದಣಿ ಅಂಕಿಸಂಖ್ಯೆಗಳನ್ನು ಆಧರಿಸಿದ ಅಧ್ಯಯನಗಳು ಮತ್ತು ವಿವಿಧ ಸಮೀಕ್ಷೆಗಳ ಅಂಕಿ-ಅಂಶಗಳು ಬಹಿರಂಗಪಡಿಸಿವೆ.
ಆದರೆ, ದೇಶದ ಅತಿ ದೊಡ್ಡ ರಾಜ್ಯವಾಗಿರುವ ಉತ್ತರಪ್ರದೇಶದ ಸಾವಿನ ಅಧಿಕೃತ ಅಂಕಿಸಂಖ್ಯೆಯು ಅತ್ಯಂತ ಸೀಮಿತವಾಗಿದೆ. ಆ ರಾಜ್ಯದ ಕೋವಿಡ್-19 ಸಾವುಗಳ ಅಧಿಕೃತ ಸಂಖ್ಯೆ ಸುಮಾರು 23,000. ಸಾಂಕ್ರಾಮಿಕವನ್ನು ನಿಭಾಯಿಸಲು ರಾಜ್ಯ ಸರಕಾರ ತೆಗೆದುಕೊಂಡ ಪರಿಣಾಮಕಾರಿ ಉಪಕ್ರಮಗಳಿಂದಾಗಿ ಅದು ರಾಜ್ಯದ ಮೇಲೆ ಸೀಮಿತ ಪರಿಣಾಮವನ್ನಷ್ಟೇ ಬೀರಿತು ಎಂಬುದಾಗಿ ಐಐಟಿ ಕಾನ್ಪುರದ ವರದಿಯೊಂದು ಹೇಳಿಕೊಂಡಿದೆ.
ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ಎರಡನೇ ಅಲೆಯ ವೇಳೆ, ಅಂದರೆ 2021 ಮೇ ತಿಂಗಳ ಆಸುಪಾಸಿನಲ್ಲಿ, ರಾಜ್ಯದಲ್ಲಿ ಸಂಭವಿಸಿದ ಸಾವಿನ ಸುದ್ದಿಗಳೇ ಮಾಧ್ಯಮಗಳಲ್ಲಿ ತುಂಬಿದ್ದವು. ಗಂಗಾ ನದಿಯಲ್ಲಿ ಬಾತುಕೊಂಡ ಹೆಣಗಳು ತೇಲಿ ಹೋದವು. ಆಮ್ಲಜನಕದ ಕೊರತೆಯಿಂದ ರೋಗಿಗಳು ಭಾರೀ ಸಂಖ್ಯೆಯಲ್ಲಿ ಪ್ರಾಣ ಕಳೆದುಕೊಂಡರು. ಆದರೆ, ವಾಸ್ತವಿಕವಾಗಿ ಈ ಸಾವುಗಳನ್ನು ತಡೆಯಬಹುದಾಗಿತ್ತು.
ಕೊರೋನ ವೈರಸ್ ಎರಡನೇ ಅಲೆಯ ವೇಳೆ, ಗಂಗಾ ನದಿಯ ತೀರದಲ್ಲಿ ಹೆಣಗಳನ್ನು ಆಳವಿಲ್ಲದ ಗುಂಡಿಗಳಲ್ಲಿ ಹೂಳಲಾಗಿತ್ತು. ಈ ಹೆಣಗಳು ಕೊರೋನ ವೈರಸ್ ರೋಗಿಗಳದ್ದೆಂದು ಹೇಳಲಾಗಿದೆ. ಮರಣ ದಾಖಲಾತಿಯಲ್ಲಿ ಹೆಚ್ಚಳ
ಸಾಂಕ್ರಾಮಿಕ ಆರಂಭಗೊಳ್ಳುವ ಮೊದಲೇ, ಈ ಪ್ರದೇಶಗಳ ಸಾವಿನ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗಿತ್ತು ಎನ್ನುವುದನ್ನು ನಾವು ಮೊದಲು ಗಮನಿಸಿದೆವು. 2017 ಮತ್ತು 2018ರ ನಡುವಿನ ಅವಧಿಯಲ್ಲಿ ದಾಖಲಾದ ಸಾವಿನ ಸಂಖ್ಯೆಯಲ್ಲಿ ಶೇ. 9 ಹೆಚ್ಚಳವಾಗಿತ್ತು. 2018 ಮತ್ತು 2019ರ ನಡುವಿನ ಅವಧಿಯಲ್ಲಿ ಅದು ಶೇ. 23ಕ್ಕೆ ಏರಿತು. ಸಾವುಗಳ ದಾಖಲೀಕರಣದಲ್ಲಿ ಹೆಚ್ಚಳವಾಗಿರುವುದು ಈ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿರುವ ಸಾಧ್ಯತೆಯಿದೆ ಎಂದು ವರದಿಯ ನೇತೃತ್ವ ವಹಿಸಿದ ತಂಡ ಹೇಳುತ್ತದೆ. ದಾಖಲಿತ ಸಾವುಗಳನ್ನು ಆಧರಿಸಿ ಹೇಳುವುದಾದರೆ, ಸಾಂಕ್ರಾಮಿಕಕ್ಕೂ ಮೊದಲೇ, ಅಂದರೆ 2017-2019ರ ಅವಧಿಯಲ್ಲಿ ಸಿಡಿಆರ್‌ನಲ್ಲಿ ಏರಿಕೆ ನಿಜವಾಗಿಯೂ ಕಂಡುಬಂದಿದೆ. ಇದು ಸಾವುಗಳ ದಾಖಲೀಕರಣದಲ್ಲಿ ಆಗಿರುವ ಏರಿಕೆಯನ್ನು ಸೂಚಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ, ಸಾವಿನ ಸಂಖ್ಯೆಯಲ್ಲಿ ವಾಸ್ತವಿಕವಾಗಿ ಹೆಚ್ಚಳವಾಗಿರಲಾರದು.
ಸಾಂಕ್ರಾಮಿಕ ಪೂರ್ವ ಅವಧಿಯಲ್ಲಿ ಉತ್ತರಪ್ರದೇಶದಲ್ಲಿನ ಸಾವುಗಳ ಸಂಖ್ಯೆಯನ್ನು ಎಸ್‌ಆರ್‌ಎಸ್ ಗಣನೀಯವೆನ್ನುವಷ್ಟು ಕಡಿಮೆ ಪ್ರಮಾಣದಲ್ಲಿ ದಾಖಲಿಸಿದೆ ಹಾಗೂ ಸಾಂಕ್ರಾಮಿಕ ಅವಧಿಯಲ್ಲಿ ಪ್ರತಿಯೊಂದು ಸಾವನ್ನು ದಾಖಲಿಸಲಾಗಿದೆ (ಲಾಕ್‌ಡೌನ್ ಅವಧಿಯಲ್ಲಿ ಹೇರಲಾಗಿದ್ದ ಅಗಾಧ ಪ್ರಮಾಣದ ನಿರ್ಬಂಧಗಳ ಹಿನ್ನೆಲೆಯಲ್ಲಿ ಇದು ಅತ್ಯಂತ ಅಸಾಧ್ಯ) ಎಂಬುದಾಗಿ ನಾವು ಭಾವಿಸಿದರೂ, ಸಾಂಕ್ರಾಮಿಕದ ಅವಧಿಯಲ್ಲಿ ಸಂಭವಿಸಿದ ಸಾವುಗಳು ನಿರೀಕ್ಷೆಗಿಂತ ತುಂಬಾ ಹೆಚ್ಚಿರುವುದನ್ನು ನಾವು ಕಾಣುತ್ತೇವೆ. ದಾಖಲಿತ ಸಾವಿನ ಸಂಖ್ಯೆಯಲ್ಲಿ ಆಗಿರುವ ಈ ಪ್ರಮಾಣದ ಹೆಚ್ಚಳವು, ಜನರು ಹೆಚ್ಚಿನ ಪ್ರಮಾಣದಲ್ಲಿ ಸತ್ತಿರುವುದರಿಂದ ಆಗಿರುವುದಲ್ಲ, ಬೇರೆ ಕಾರಣಗಳಿಂದ ಆಗಿದೆ ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ.
ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಪ್ರತ್ಯೇಕವಾಗಿ ಪರಿಗಣಿಸುವ ಮೂಲಕ ಸಾವಿನ ಸಂಖ್ಯೆಯಲ್ಲಿ ಆಗಿರುವ ಅಗಾಧ ಹೆಚ್ಚಳದ ಬಗ್ಗೆ ನಾವು ಹೆಚ್ಚಿನ ಸ್ಪಷ್ಟತೆಯನ್ನು ಪಡೆದುಕೊಳ್ಳಬಹದಾಗಿದೆ. ಗ್ರಾಮೀಣ ಮತ್ತು ನಗರ ಅಂಕಿಸಂಖ್ಯೆಗಳನ್ನು ವಿಶ್ಲೇಷಿಸುವ ಮೂಲಕ ನಾವು ಈ ಕೆಳಗಿನ ವಾರ್ಷಿಕ ಸಿಡಿಆರ್ ಸಂಖ್ಯೆಗಳನ್ನು ಪಡೆಯಬಹುದು.
ಸಮೀಕ್ಷೆಗೊಳಗಾದ ಪ್ರದೇಶಗಳಲ್ಲಿ, 2020ರ ಅವಧಿಯಲ್ಲಿ ಸಿಡಿಆರ್‌ನಲ್ಲಿ ಆಗಿರುವ ಹೆಚ್ಚಳವು ಮುಖ್ಯವಾಗಿ ನಗರಗಳಲ್ಲಿ ಸಂಭವಿಸಿದ ಸಾವುಗಳ ಸಂಖ್ಯೆಯಲ್ಲಿ ಆಗಿರುವ ಅಗಾಧ ಹೆಚ್ಚಳದಿಂದ ಸಂಭವಿಸಿದೆ. ಅದೇ ವೇಳೆ, 2019ರಿಂದ 2020ರವರೆಗಿನ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.
2021 ಜನವರಿ-ಆಗಸ್ಟ್ ಅವಧಿಯಲ್ಲಿ ಸಾವಿನ ಸಂಖ್ಯೆಯಲ್ಲಿ ಆಗಿರುವ ಅಗಾಧ ಹೆಚ್ಚಳಕ್ಕೆ ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡೂ ದೇಣಿಗೆ ನೀಡಿವೆ. ವಾಸ್ತವಿಕವಾಗಿ, 2021ರ ಮೊದಲ ಎಂಟು ತಿಂಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸಂಭವಿಸಿರುವ ಸಾವುಗಳು, 2019ರ ಅಂಕಿಸಂಖ್ಯೆಗಳ ಆಧಾರದಲ್ಲಿ ಮಾಡಲಾದ ನಿರೀಕ್ಷೆಗಿಂತ ದುಪ್ಪಟ್ಟು ಆಗಿದೆ ಹಾಗೂ ಎಸ್‌ಆರ್‌ಎಸ್ ಆಧಾರಿತ ಗ್ರಾಮೀಣ ಸಿಡಿಆರ್ ಆಧಾರದಲ್ಲಿ ಮಾಡಲಾದ ನಿರೀಕ್ಷೆಗಿಂತ 80 ಶೇಕಡ ಹೆಚ್ಚಾಗಿದೆ.
ಕೊರೋನ ವೈರಸ್‌ನ ಎರಡನೇ ಅಲೆಯಲ್ಲಿ ರಾಜ್ಯದ ಶಿಕ್ಷಕ ಸಮುದಾಯದಲ್ಲಿ ಅಗಾಧ ಸಂಖ್ಯೆಯ ಸಾವುಗಳು ಸಂಭವಿಸಿವೆ ಎಂಬುದಾಗಿ ವರದಿಗಳು ಹೇಳಿವೆ. ಹಾಗೂ ಉತ್ತರಪ್ರದೇಶದ ಹಳ್ಳಿಗಳಲ್ಲಿ ಕೊರೋನ ವೈರಸ್ ಉಂಟು ಮಾಡಿದ ಸಾವು ಮತ್ತು ವಿನಾಶದ ಬಗ್ಗೆ ಹಿಂದಿ ಪತ್ರಿಕೆಗಳು ವರದಿ ಮಾಡಿವೆ. ಸಾವುಗಳ ಸಂಖ್ಯೆಯಲ್ಲಿನ ಅಗಾಧ ಹೆಚ್ಚಳವು ಈ ವರದಿಗಳಿಗೆ ಪೂರಕವಾಗಿದೆ.
ನಾವು ಭೇಟಿ ನೀಡಿದ ಪೂರ್ವಾಂಚಲದ ಪ್ರದೇಶ ಗಳಲ್ಲಿನ ಪರಿಸ್ಥಿತಿಯು ರಾಜ್ಯಾದ್ಯಂತ ಕಂಡುಬಂದಿದೆಯೇ ಎಂಬುದನ್ನು ತಿಳಿಯಲು ಸಾಧ್ಯವಿಲ್ಲ. ಆದರೆ, ಒಂದು ಪ್ರಶ್ನೆಯನ್ನು ನಾವು ಕೇಳಬಹುದು: ಸಮೀಕ್ಷೆಗೊಳಗಾದ ಪ್ರದೇಶಗಳಲ್ಲಿನ ಸಾವಿನ ಸಂಖ್ಯೆಯಲ್ಲಿ ಕಂಡುಬಂದಿರುವ ಹೆಚ್ಚಳವು ರಾಜ್ಯಾದ್ಯಂತ ಕಂಡುಬಂದರೆ, ಉತ್ತರಪ್ರದೇಶದಲ್ಲಿ ಸಂಭವಿಸಿದ ಕೊರೋನ ವೈರಸ್ ಸಾವುಗಳ ಪ್ರಮಾಣದ ಬಗ್ಗೆ ಇದು ಏನು ಹೇಳುತ್ತದೆ?
2020 ಜನವರಿ ಮತ್ತು 2021 ಆಗಸ್ಟ್ ನಡುವಿನ 20 ತಿಂಗಳ ಅವಧಿಯಲ್ಲಿ, ಸಮೀಕ್ಷೆ ನಡೆಸಲಾದ ಪ್ರದೇಶಗಳಲ್ಲಿ ಈ ಅವಧಿಯಲ್ಲಿ ನಿರೀಕ್ಷಿಸಲಾದ ಸಾವಿನ ಪ್ರಮಾಣಕ್ಕಿಂತ 55-60 ಶೇಕಡದಷ್ಟು ಹೆಚ್ಚು ಸಾವುಗಳು ಸಂಭವಿಸಿವೆ. 20 ತಿಂಗಳ ಅವಧಿಯಲ್ಲಿ ಉತ್ತರಪ್ರದೇಶದಾದ್ಯಂತ 55-60 ಶೇಕಡ ಹೆಚ್ಚುವರಿ ಸಾವು ಸಂಭವಿಸಿದರೆ, ಒಟ್ಟು ಸಾವು ಸುಮಾರು 14 ಲಕ್ಷ ಆಗುತ್ತದೆ. ಅಂದರೆ ಈ ಅವಧಿಯಲ್ಲಿ 14 ಲಕ್ಷ ನಿರೀಕ್ಷೆಗಿಂತ ಹೆಚ್ಚಿನ ಸಾವುಗಳು ರಾಜ್ಯದಲ್ಲಿ ಸಂಭವಿಸಿವೆ.
ಈ ಸಂಖ್ಯೆಯನ್ನು ಅರ್ಥಮಾಡಿಕೊಳ್ಳಬೇಕಾದರೆ, ಎಸ್‌ಆರ್‌ಎಸ್ ಮತ್ತು ನಾಗರಿಕ ನೋಂದಣಿ ಅಂಕಿಸಂಖ್ಯೆಗಳ ಆಧಾರದಲ್ಲಿ, ಸಾಮಾನ್ಯ ವರ್ಷವೊಂದರಲ್ಲಿ ಸುಮಾರು 15 ಲಕ್ಷ ಸಾವುಗಳು ಸಂಭವಿಸುತ್ತವೆ ಎಂಬುದಾಗಿ ಉತ್ತರಪ್ರದೇಶ ನಿರೀಕ್ಷಿಸುತ್ತದೆ. ಹಾಗಾಗಿ, ಸಾಂಕ್ರಾಮಿಕ ಅವಧಿಯಲ್ಲಿ ಸಂಭವಿಸಿದ ಹೆಚ್ಚುವರಿ ಸಾವುಗಳು ರಾಜ್ಯದಲ್ಲಿ ಬಹುತೇಕ ಇಡೀ ವರ್ಷ ಸಂಭವಿಸುವ ಸಾವಿಗೆ ಸಮನಾಗಿದೆ.
14 ಲಕ್ಷ ಜನರು ಉತ್ತರಪ್ರದೇಶದ 2021ರ ಅಂದಾಜು ಜನಸಂಖ್ಯೆ ಸುಮಾರು 23 ಕೋಟಿಯ 0.6 ಶೇಕಡ ಆಗಿದೆ. ಅಂದರೆ, ರಾಜ್ಯದ ಜನಸಂಖ್ಯೆಯ 0.6 ಶೇಕಡ ಮಂದಿ ಸಾಂಕ್ರಾಮಿಕದ ಕಾರಣದಿಂದಾಗಿ ಅಕಾಲಿಕವಾಗಿ ಸಾವನ್ನಪ್ಪಿರುವ ಸಾಧ್ಯತೆಯಿದೆ.
ವಿಶ್ಲೇಷಣೆಯನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?
ಈ ಅಂಕಿಅಂಶಗಳಲ್ಲಿ ಅಡಗಿರುವ ವಾಸ್ತವಾಂಶಗಳನ್ನು ಹಲವು ಮೂಲಗಳು ದೃಢಪಡಿಸಿವೆ. ಅಂಕಿ-ಅಂಶಗಳನ್ನು ಸಂಗ್ರಹಿಸಿರುವ ಸಮಾಜ ವಿಜ್ಞಾನ ಸಂಶೋಧಕಿ ಮುನಿಝಾ ಖಾನ್ ಹೀಗೆ ಹೇಳುತ್ತಾರೆ: ''ಈ ನಾಲ್ಕು ಜಿಲ್ಲೆಗಳಲ್ಲಿ ಸಂಭವಿಸಿರುವ ಸಾವುಗಳ ಸಂಖ್ಯೆಯನ್ನು ನೋಡಿ ನಾವು ಆಘಾತಗೊಂಡೆವು. ಕೋವಿಡ್-19 ಸಂಕ್ರಾಮಿಕದ ಅವಧಿಯಲ್ಲಿ ವ್ಯಕ್ತಿಯೊಬ್ಬ ಮರಣ ಹೊಂದದ ಒಂದೇ ಒಂದು ಮನೆಯನ್ನು ನಾವು ನೋಡಿಲ್ಲ ಎಂಬುದಾಗಿ ಆಶಾ ಕಾರ್ಯಕರ್ತೆಯರು ಮತ್ತು ಪಂಚಾಯತ್‌ಗಳ ಮುಖ್ಯಸ್ಥರು ಹೇಳಿದ್ದಾರೆ''.
ದುಃಖತಪ್ತ ಕುಟುಂಬಗಳು ಆದಿಕೇಶವ ಘಾಟ್ ಸುತ್ತ ಹೇಗೆ ಜಮಾಯಿಸುತ್ತಿದ್ದವು ಎನ್ನುವುದನ್ನು ಅವರು ನೆನಪಿಸಿಕೊಳ್ಳುತ್ತಾರೆ. ಕೊರೋನ ವೈರಸ್‌ನಿಂದಾಗಿ ಮೃತಪಟ್ಟವರ ದೇಹಗಳನ್ನು ಅಂತ್ಯಸಂಸ್ಕಾರಕ್ಕಾಗಿ ಆದಿಕೇಶವ ಘಾಟ್‌ಗೆ ಕಳುಹಿಸಲಾಗುತ್ತಿತ್ತು. ತಮ್ಮವರಿಗೆ ಅಂತಿಮ ವಿದಾಯ ಹೇಳಲು ಕುಟುಂಬಗಳು ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದವು. ಆದರೆ, ಶವದಹನಕ್ಕೆ ಕಟ್ಟಿಗೆಗಳನ್ನು ಪಡೆಯಲು ಅಲ್ಲಿನ ಸಿಬ್ಬಂದಿ ಪ್ರಯಾಸಪಡುತ್ತಿದ್ದರು. ''ಕೊನೆಗೆ ಅಲ್ಲಿನ ಕಟ್ಟಿಗೆಯ ಸಂಗ್ರಹವೇ ಮುಗಿಯಿತು. ಸರಿಯಾಗಿ ಸುಡದ ದೇಹಗಳನ್ನು ಗಂಗಾ ನದಿಗೆ ಎಸೆಯಲಾಯಿತು'' ಎಂದು ಅವರು ಹೇಳಿದರು. ''ಆಗಲೂ, ಅಲ್ಲಿ ಕುಟುಂಬಗಳು ತಮ್ಮವರ ದೇಹಗಳೊಂದಿಗೆ ಸುದೀರ್ಘ ಸಾಲಿನಲ್ಲಿ ಕಾಯುತ್ತಿದ್ದರು'' ಎಂದರು.
ಆಸ್ಪತ್ರೆಗಳು ಮತ್ತು ಚಿತಾಗಾರಗಳು ಮಾತ್ರವಲ್ಲ, ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ದಫನ ಭೂಮಿಗಳಲ್ಲೂ ಉದ್ದನೆಯ ಸಾಲುಗಳಿದ್ದವು. ಸ್ಮಶಾನಗಳ ಸಿಬ್ಬಂದಿ ರಾತ್ರಿ-ಹಗಲು ಗುಂಡಿಗಳನ್ನು ತೋಡುತ್ತಿದ್ದರು. ಒಂದು ಹಂತದಲ್ಲಿ ಅಲ್ಲಿ ಶವಗಳನ್ನು ಹೂಳಲು ಸ್ಥಳವೇ ಇರಲಿಲ್ಲ. ಆದರೂ, ಜನರು ಹೊರಗೆ ತಮ್ಮವರ ಮೃತದೇಹಗಳೊಂದಿಗೆ ಕಾಯುತ್ತಿದ್ದರು. ''ನಾನು ಇಡೀ ದಿನ ಗುಂಡಿಗಳನ್ನು ತೋಡುತ್ತಿದ್ದೆ. ಆದರೆ, ದಫನ ಭೂಮಿಯ ಹೊರಗೆ ಶವಗಳೊಂದಿಗೆ ಕಾಯುತ್ತಿರುವ ಜನರ ಸಾಲು ಕಿರಿದಾಗುತ್ತಲೇ ಇರಲಿಲ್ಲ'' ಎಂದು ರಾಮನಗರದ ಕಾರ್ಮಿಕರೊಬ್ಬರು ಸಿಜೆಪಿ ತಂಡಕ್ಕೆ ಹೇಳಿದರು.
ಭಾರತದಾದ್ಯಂತ ಇರುವ ಮುಸ್ಲಿಮರು, ಕ್ರೈಸ್ತರು ಮತ್ತು ಇತರ ಅಲ್ಪಸಂಖ್ಯಾತರ ದಫನ ಭೂಮಿಗಳು ಅದಾಗಲೇ ಮೃತದೇಹಗಳಿಂದ ತುಂಬಿಹೋಗಿದ್ದವು ಹಾಗೂ ಹೊಸದಾಗಿ ಬರುತ್ತಿರುವ ಮೃತದೇಹಗಳಿಗೆ ಜಾಗ ಮಾಡಿಕೊಡುವುದಕ್ಕಾಗಿ ಹಳೆಯ ಸಮಾಧಿಗಳನ್ನೇ ಅಗೆಯಲಾಯಿತು ಎನ್ನುವುದನ್ನು ಗಮನಿಸಬೇಕಾಗಿದೆ.
ದುರ್ಬಲ ಅಥವಾ ಶೂನ್ಯ ಆರೋಗ್ಯ ಮತ್ತು ಕಲ್ಯಾಣ ಮೂಲಸೌಕರ್ಯದಿಂದಾಗಿ ದುರಂತವು ಇಮ್ಮಡಿಗೊಂಡಿತು. ಗ್ರಾಮೀಣ ಪ್ರದೇಶಗಳಲ್ಲಿನ ಆರೋಗ್ಯಸೇವೆ ಕೇಂದ್ರಗಳು ಯಾವಾಗಲೂ ಬಾಗಿಲು ಹಾಕಿರುವುದನ್ನು ಪರಿಹಾರ ಕಾರ್ಯಾಚರಣೆಯ ವೇಳೆ ಸಿಜೆಪಿ ತಂಡವು ಗಮನಿಸಿತ್ತು. ಔಷಧಗಳು ಮತ್ತು ಆಕ್ಸಿಮೀಟರ್‌ಗಳಿಗಾಗಿ ಜನರು ಸಿಜೆಪಿ ಪ್ರಧಾನ ಕಚೇರಿಗೆ ಬರುತ್ತಿದ್ದರು. ಪಟ್ಟಣಗಳು ಮತ್ತು ಹಳ್ಳಿಗಳು-ಎರಡರಲ್ಲೂ ಶಿಕ್ಷಣ ಮತ್ತು ದಿನಕ್ಕೆ ಮೂರು ಹೊತ್ತು ಊಟ ಎನ್ನುವುದು ಪ್ರತಿದಿನದ ಸವಾಲಾಗಿತ್ತು.
thewire.in ಲೇಖನ ಆಧಾರಿತ







