ಅಫ್ಘಾನಿಸ್ತಾನದಲ್ಲಿ ಐಸಿಸ್ ಉಪಸ್ಥಿತಿ:ಅಮೆರಿಕದ ಉನ್ನತ ಸೇನಾಧಿಕಾರಿ ಎಚ್ಚರಿಕೆ

ಕಾಬೂಲ್, ಫೆ. 18: ಅಫ್ಘಾನಿಸ್ತಾನದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಸಿಸ್)ನ ಉಪಸ್ಥಿತಿಯ ಬಗ್ಗೆ ಅಮೆರಿಕದ ಸೆಂಟ್ರಲ್ ಕಮಾಂಡ್‌ನ ಮುಖ್ಯಸ್ಥ ಜನರಲ್ ಕೆನೆತ್ ಮೆಕೆಂಝಿ ಗುರುವಾರ ಕಳವಳ ವ್ಯಕ್ತಪಡಿಸಿದ್ದಾರೆ.
ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ, ಏನು ನಡೆಯಬಹುದು ಎಂಬ ಬಗ್ಗೆ ಅಮೆರಿಕ ಈಗಲೂ ಚಿಂತಿಸುತ್ತಿದೆ ಎಂಬುದಾಗಿ ಸಂದರ್ಶನವೊಂದರಲ್ಲಿ ಮೆಕೆಂಝಿ ಹೇಳಿದ್ದಾರೆ ಎಂದು ಟೋಲೊ ನ್ಯೂಸ್ ವರದಿ ಮಾಡಿದೆ. ಈ ಸಂದರ್ಶನವನ್ನು ಅಮೆರಿಕದ ಸೆಂಟ್ರಲ್ ಕಮಾಂಡ್ ತನ್ನ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದೆ.
‘‘ಅಫ್ಘಾನಿಸ್ತಾನದಲ್ಲಿನ ಐಸಿಸ್ ಉಪಸ್ಥಿತಿಯಿಂದ ನಾವು ಕಳವಳಗೊಂಡಿದ್ದೇವೆ’’ ಎಂದು ಮೆಕೆಂಜಿ ಹೇಳಿದರು. ‘‘ತಾಲಿಬಾನ್, ಐಸಿಸ್‌ನ ದೋಸ್ತಿಯಲ್ಲ ಎನ್ನುವುದು ನಮಗೆ ಗೊತ್ತಿದೆ. ವಾಸ್ತವಿಕವಾಗಿ, ಕಳೆದ ಎರಡು ವರ್ಷಗಳ ಅವಧಿಯಲ್ಲಿ ತಾಲಿಬಾನ್, ಐಸಿಸ್ ವಿರುದ್ಧ ಆಗಾಗ ಕಾರ್ಯಾಚರಣೆಗಳನ್ನು ನಡೆಸಿದೆ’’ ಎಂದರು.
‘‘ಅಫ್ಘಾನಿಸ್ತಾನದಲ್ಲಿ ನಮಗೆ ಕಾಣುತ್ತಿರುವುದು ಆಡಳಿತವಿಲ್ಲದ ಮತ್ತು ಸರಿಯಾದ ಆಡಳಿತವಿಲ್ಲದ ಪ್ರದೇಶಗಳು. ಇಂಥ ಸ್ಥಳಗಳಲ್ಲಿ ಐಸಿಸ್ ಸಾಂಪ್ರದಾಯಿಕವಾಗಿ ಚಿಗಿತುಕೊಂಡಿದೆ. ಐಸಿಸ್‌ನಿಂದ ಅಪಾಯವಿದೆ. ಅದು ಅಫ್ಘಾನಿಸ್ತಾನದಲ್ಲಿ ಇದ್ದುಕೊಂಡು ಅಮೆರಿಕದ ವಿರುದ್ಧ, ಯುರೋಪ್ ದೇಶಗಳ ವಿರುದ್ಧ ದಾಳಿ ನಡೆಸುವ ಇಚ್ಛೆಯನ್ನು ಹೊಂದಿದೆ. ಹಾಗಾಗಿ, ಅಫ್ಘಾನಿಸ್ತಾನದಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ನಾನು ಕಳವಳಗೊಂಡಿದ್ದೇನೆ’’ ಎಂದರು.







