ಫೆಬ್ರವರಿಯಲ್ಲಿ 15 ಸಾವಿರ ದಾಟಿದ ಕೋವಿಡ್ ಸೋಂಕಿನಿಂದ ಮೃತ್ಯು

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ದೇಶದಲ್ಲಿ ಫೆಬ್ರವರಿ ತಿಂಗಳ ಮೊದಲ 18 ದಿನಗಳಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 15 ಸಾವಿರದ ಗಡಿ ದಾಟಿದೆ. ಇದು ಇಡೀ ಜನವರಿ ತಿಂಗಳಲ್ಲಿ ದಾಖಲಾದ ಸಾವಿನ ಸಂಖ್ಯೆ (14752)ಗಿಂತ ಅಧಿಕ. ಕಳೆದ ವರ್ಷದ ಜುಲೈ ಬಳಿಕ ಗರಿಷ್ಠ ಸಂಖ್ಯೆಯ ಸಾವು ಫೆಬ್ರುವರಿಯಲ್ಲಿ ಸಂಭವಿಸಿದೆ.
ಆದರೆ ಮೊದಲ ಎರಡು ಅಲೆಗಳ ಸಂದರ್ಭದಲ್ಲಿ ದಾಖಲಿಸದೇ ಇದ್ದ ಹಲವು ಸಾವಿನ ಪ್ರಕರಣಗಳನ್ನು ದೃಢಪಡಿಸಿರುವುದು ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ. ಒಟ್ಟು ಸಾವಿನಲ್ಲಿ ಶೇಕಡ 58ರಷ್ಟು ಮಾತ್ರ ಫೆಬ್ರವರಿಯಲ್ಲಿ ಸಂಭವಿಸಿದ ಸಾವಾಗಿದ್ದು, ಉಳಿದ ಶೇಕಡ 42ರಷ್ಟು ಅಂದರೆ 6329 ಸಾವುಗಳು ಹಿಂದಿನ ತಿಂಗಳುಗಳಲ್ಲಿ ಸಂಭವಿಸಿದ ಪ್ರಕರಣಗಳಾಗಿದ್ದು, ಈ ತಿಂಗಳು ಅಧಿಕೃತಗೊಳಿಸಲಾಗಿದೆ ಎನ್ನುವುದು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.
ಈ ಪೈಕಿ ಗರಿಷ್ಠ ಸಾವು ದಾಖಲಾಗಿರುವುದು ಕೇರಳದಲ್ಲಿ. 6217 ಹಳೆಯ ಸಾವಿನ ಪ್ರಕರಣಗಳನ್ನು ಮರು ಇತ್ಯರ್ಥದ ಬಳಿಕ ದೃಢಪಡಿಸಲಾಗಿದೆ ಹಾಗೂ ಸುಪ್ರೀಂಕೋರ್ಟ್ ನಿರ್ದೇಶನದ ಅನ್ವಯ ಪರಿಹಾರ ನೀಡಲಾಗಿದೆ. ಇದು ಸಾವಿನ ಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣ. ಇದಕ್ಕೆ ವಿರುದ್ಧವಾಗಿ ಗುಜರಾತ್ನಂಥ ಕೆಲ ರಾಜ್ಯಗಳು ಅಧಿಕೃತ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆಯನ್ನು ಕ್ಲೇಮ್ ಪ್ರಕ್ರಿಯೆಯಿಂದ ಪ್ರತ್ಯೇಕವಾಗಿ ಇಟ್ಟಿವೆ.
ಕಳೆದ ಜುಲೈ ತಿಂಗಳಲ್ಲಿ 24897 ಪ್ರಕರಣಗಳು ದಾಖಲಾಗಿದ್ದನ್ನು ಹೊರತುಪಡಿಸಿದರೆ ಕಳೆದ ಏಳು ತಿಂಗಳಲ್ಲಿ ಸಾವಿನ ಸಂಖ್ಯೆ ಈ ಪ್ರಮಾಣ ತಲುಪಿರಲಿಲ್ಲ. ಇದುವರೆಗಿನ ಗರಿಷ್ಠ ಸಾವು ಸಂಭಸಿರುವುದು ಎರಡನೇ ಅಲೆಯ ವೇಳೆ ಕಳೆದ ಮೇ ತಿಂಗಳಲ್ಲಿ. ಮೇ ತಿಂಗಳಲ್ಲಿ 1,19,183 ಮಂದಿ ಸೋಂಕಿತರು ಬಲಿಯಾಗಿದ್ದಾರೆ.







