ಯುಪಿಸಿಎಲ್ನಿಂದ ಪರಿಸರಕ್ಕೆ ಗರಿಷ್ಠ ಹಾನಿ: ಅಧ್ಯಯನ ವರದಿ

ಯುಪಿಸಿಎಲ್ (File Photo)
ಬೆಂಗಳೂರು, ಫೆ.19: ಉಡುಪಿ ಜಿಲ್ಲೆಯ ಪಡುಬಿದ್ರೆ ಸಮೀಪದ ಎಲ್ಲೂರಿನಲ್ಲಿ ಕಾರ್ಯಾಚರಿಸುತ್ತಿರುವ ಗೌತಮ್ ಅದಾನಿ ಮಾಲಕತ್ವದ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರ ಉಡುಪಿ ಪವರ್ ಕಾರ್ಪೊರೇಶನ್ ಲಿಮಿಟೆಡ್(ಯುಪಿಸಿಎಲ್), ಪರಿಸರ ನಿಯಮಗಳನ್ನು ಉಲ್ಲಂಘಿಸಿದ ಪರಿಣಾಮ ಗರಿಷ್ಠಮಟ್ಟದ ಪರಿಸರ ಹಾನಿ ಸಂಭವಿಸಿದೆ ಎಂದು ಪರಿಸರದ ಮೇಲಿನ ಪರಿಣಾಮ ಕುರಿತ ಅಂತಿಮ ವರದಿ ಬಹಿರಂಗಪಡಿಸಿದೆ ಎಂದು 'Deccan Herald' ವರದಿ ಮಾಡಿದೆ.
ಯುಪಿಸಿಎಲ್ ಘಟಕದ ಸಾಮರ್ಥ್ಯವನ್ನು 800 ಮೆಗಾವ್ಯಾಟ್ನಷ್ಟು ಹೆಚ್ಚಿಸುವ ಸಂಬಂಧದ ಪ್ರಸ್ತಾವದಿಂದ ಪರಿಸರದ ಮೇಲೆ ಮತ್ತಷ್ಟು ಗಂಭೀರ ಪರಿಣಾಮಗಳಾಗಲಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಸೂಚನೆಯಂತೆ ಪರಿಸರ ಮೇಲಾಗುವ ಪರಿಣಾಮದ ಬಗ್ಗೆ ಅಧ್ಯಯನ ನಡೆಸುವ ಹೊಣೆಯನ್ನು ಕರ್ನಾಟಕ ಸರಕಾರ, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಇಎಂಪಿಆರ್ಐ)ಗೆ ವಹಿಸಿತ್ತು. 2003-04ರಲ್ಲಿ ನಿರ್ಮಿಸಲಾದ ಯುಪಿಸಿಎಲ್ 2003-04ರಿಂದಲೂ ವಿರೋಧ ಎದುರಿಸುತ್ತಲೇ ಬಂದಿತ್ತು. 2015ರಲ್ಲಿ ಅದಾನಿ ಸಮೂಹ ಇದನ್ನು ಸ್ವಾಧೀನಪಡಿಸಿಕೊಂಡಿತ್ತು. 2017ರಲ್ಲಿ ಘಟಕದ ಸಾಮರ್ಥ್ಯವನ್ನು 1,400 ಮೆಗಾವ್ಯಾಟ್ಗೆ ಹೆಚ್ಚಿಸಲು ಹೊಸ ಆಡಳಿತ ಅನುಮೋದನೆ ಪಡೆದಾಗ ಜನಜಾಗೃತಿ ಸಮಿತಿ ಈ ವಿವಾದವನ್ನು ಎನ್ಜಿಟಿಗೆ ಒಯ್ದಿತ್ತು.
ಇಎಂಪಿಆರ್ಐ ಸಂಶೋಧನಾ ವಿಭಾಗದ ನಿರ್ದೇಶಕ ಕೆ.ಎಚ್.ವಿನಯ ಕುಮಾರ್ ಮತ್ತು ಕೆಎಸ್ಪಿಸಿ ಹಿರಿಯ ಪರಿಸರ ಅಧಿಕಾರಿ ಮಹೇಶ್ ಟಿ. ಅವರ ಮೇಲ್ವಿಚಾರಣೆಯಲ್ಲಿ ವಿಜ್ಞಾನಿಗಳ ತಂಡ ಅಧ್ಯಯನ ಕೈಗೊಂಡಿತ್ತು. ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದು ಮಾತ್ರವಲ್ಲದೇ 10 ಕಿಲೋಮೀಟರ್ ಪರಿಸರದಲ್ಲಿ ಗಾಳಿ, ನೀರು ಮತ್ತು ಮಣ್ಣು ಮಾಲಿನ್ಯ ಪರೀಕ್ಷೆ ನಡೆಸಿತ್ತು.
ಸಂಸ್ಕರಿಸದ ಮಲಿನ ನೀರನ್ನು ಮಳೆನೀರಿನ ಚರಂಡಿಗೆ ಹರಿಸುವುದು ಮತ್ತು ಕಲ್ಲಿದ್ದಲಿನ ಧೂಳಿನಿಂದ ಬೆಳೆಗಳು ಮುಚ್ಚಿರುವ ಫೋಟೊಗಳನ್ನು ಕೂಡಾ ವರದಿಯಲ್ಲಿ ನೀಡಲಾಗಿದ್ದು, ಯುಪಿಸಿಎಲ್ ಮಾಲಿನ್ಯದಿಂದಾಗಿ ಇಳುವರಿ ಕಡಿಮೆಯಾಗುತ್ತಿದೆ ಎಂಬ ರೈತರ ಆರೋಪಕ್ಕೆ ಇದು ತಾಳೆಯಾಗುತ್ತದೆ.
ಪರಿಸರದ ವಾತಾವರಣದಲ್ಲಿ ಗಂಧಕದ ಡೈ ಆಕ್ಸೈಡ್ (ಪ್ರತಿ ಘನ ಮೀಟರ್ಗೆ 359 ಮೈಕ್ರೋಗ್ರಾಮ್) ಧಾರಣ ಪ್ರಮಾಣವು ಎನ್ಜಿಟಿ ನಿಗದಿಪಡಿಸಿದ ಪ್ರಮಾಣ (80 ಮೈಕ್ರೊಗ್ರಾಂ)ಕ್ಕಿಂತ ಅಧಿಕ ಇದೆ, ಗಂಧಕದ ಡೈಆಕ್ಸೈಡ್ನ ಹೊರಸೂಸುವಿಕೆ ಪ್ರಮಾಣ ದಿನಕ್ಕೆ 80.18 ಟನ್ನಷ್ಟು ಅಧಿಕವಾಗಿದೆ. ಅಂತೆಯೇ ಸಾರಜನಕದ ಆಕ್ಸೈಡ್ ಉಗುಳುವಿಕೆ ಪ್ರಮಾಣ 27.5 ಟನ್ನಷ್ಟಿದೆ. ಇದು ಮಾನವ ಆರೋಗ್ಯ ಮತ್ತು ಕೃಷಿ ಇಳುವರಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ವರದಿ ಎಚ್ಚರಿಸಿದೆ.







