ಈಶ್ವರಪ್ಪರನ್ನು ಸಂಪುಟದಿಂದ ವಜಾಗೊಳಿಸಿ ಬಿಜೆಪಿ ತನ್ನ ದೇಶಭಕ್ತಿಯನ್ನು ಸಾಬೀತುಪಡಿಸಲಿ: ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ
ಬೆಂಗಳೂರು, ಫೆ. 19: ‘ದಿಲ್ಲಿ ಕೆಂಪುಕೋಟೆ ಮೇಲೆ ಭಗವಾ(ಕೇಸರಿ)ಧ್ವಜವನ್ನು ಒಂದಲ್ಲ ಒಂದು ದಿನ ಹಾರಿಸುತ್ತೇವೆ' ಎಂಬ ರಾಷ್ಟ್ರದ್ರೋಹಿ ಹೇಳಿಕೆ ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸುವ ಮೂಲಕ ಬಿಜೆಪಿ ತನ್ನ ದೇಶಭಕ್ತಿಯನ್ನು ಸಾಬೀತುಪಡಿಸಬೇಕು' ಎಂದು ಮಾಜಿ ಸಚಿವ ಹಾಗೂ ಚಿತ್ತಾಪುರ ಕ್ಷೇತ್ರ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಇಂದಿಲ್ಲಿ ಸವಾಲು ಹಾಕಿದ್ದಾರೆ.
ಶನಿವಾರ ವಿಧಾನಸೌಧದಲ್ಲಿನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘1921ರಲ್ಲಿ ಲಾಹೋರ್ನಲ್ಲಿ ಕಾಂಗ್ರೆಸ್ ಸಮಾವೇಶ ನಡೆದಿತ್ತು. ಅಲ್ಲಿ ದೇಶದ ಎಲ್ಲರೂ ತ್ರಿವರ್ಣ ಧ್ವಜ ಹಾರಿಸಬೇಕೆಂದು ತೀರ್ಮಾನಿಸಲಾಯಿತು. ಅದನ್ನು ಪ್ರತಿಯೊಬ್ಬರು ಒಪ್ಪಿಕೊಂಡಿದ್ದರು. ಆದರೆ, ಸಂಘಪರಿವಾರದ ಮುಖ್ಯಸ್ಥ ಹೆಗಡೇವಾರ್ ತಮ್ಮ ಶಾಖೆಗಳಿಗೆ 1930ರಲ್ಲಿ ಪತ್ರ ಬರೆದು ತ್ರಿವರ್ಣ ಧ್ವಜ ಹಾರಿಸಬಾರದು, ಭಗವಾಧ್ವಜ ಹಾರಿಸಬೇಕು ಎಂದು ಆದೇಶಿಸಿದ್ದರು. ಹೀಗಾಗಿ ಅವರಿಗೆ ನಮ್ಮ ರಾಷ್ಟ್ರಧ್ವಜ, ಸಂವಿಧಾನದ ಬಗ್ಗೆ ಗೌರವ ಇಲ್ಲ' ಎಂದು ದಾಖಲೆಗಳನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದರು.
‘1947ರ ಆಗಸ್ಟ್ 27ರಲ್ಲಿ ಆರೆಸೆಸ್ಸ್ ಮುಖವಾಣಿ ‘ಆರ್ಗನೈಜರ್' ಪತ್ರಿಕೆಯಲ್ಲಿ ತ್ರಿವರ್ಣ ಧ್ವಜವನ್ನು ಅವಹೇಳನ ಮಾಡಿದ್ದು, ಮೂರು ಬಣ್ಣದ ದೇಶಕ್ಕೆ ಅಪಶಕುನ ಮತ್ತು ಆಪತ್ತು ತರಲಿದೆ ಎಂದಿದ್ದಾರೆ. ಗಾಂಧಿಜೀ ಅವರನ್ನು, ಗೋಡ್ಸೆ ಕೊಂದ ಮೇಲೆ ಆಗಿನ ಗೃಹ ಸಚಿವ ಸರ್ದಾರ್ ಪಟೇಲ್ ಆರೆಸೆಸ್ಸ್ ನಿಷೇಧಿಸಿದ್ದರು. ಬಳಿಕ ಹಲವು ನಾಯಕರು ಒತ್ತಡ ಹೇರಿದಾಗ ಪಟೇಲರು ಸಂಘಪರಿವಾರಕ್ಕೆ ರಾಜಕೀಯ ಚಟುವಟಿಕೆಯಲ್ಲಿ ಭಾಗವಹಿಸಬಾರದು ಮತ್ತು ಸಂವಿಧಾನ ಗೌರವಿಸಬೇಕು ಎಂಬ ಷರತ್ತು ವಿಧಿಸಿ ನಿಷೇಧ ತೆರವು ಮಾಡಿದ್ದರು. ಗೋಲ್ವಾಲ್ಕರ್ ಅವರು ತಮ್ಮ ಪುಸ್ತಕದಲ್ಲಿ ತ್ರಿವರ್ಣ ಧ್ವಜ ಏಕೆ ಬೇಕೆಂದು ಪ್ರಶ್ನಿಸಿದ್ದಲ್ಲದೆ, ಪ್ರಾಚೀನ ಭಾರತದಲ್ಲಿ ಇದ್ದ ಧ್ವಜವನ್ನು ಏಕೆ ಅಳವಡಿಸಿಕೊಳ್ಳಲಿಲ್ಲ' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದರು.
‘ನಾಗಪುರದ ಆರೆಸೆಸ್ಸ್ ಕಚೇರಿಯಲ್ಲಿ ತೀವ್ರರ್ಣ ಧ್ವಜವನ್ನು ಹಾರಿಸುತ್ತಿರಲಿಲ್ಲ. 2002ರಲ್ಲಿ 52 ವರ್ಷಗಳ ಬಳಿಕ ಆರೆಸೆಸ್ಸ್ ಕಚೇರಿ ಮೇಲೆ ಮೊದಲ ಬಾರಿಗೆ ತೀವ್ರರ್ಣ ಧ್ವಜವನ್ನು ಹಾರಿಸಿದ್ದು' ಎಂದು ಅವರು, ಬಿಜೆಪಿಯ ನಾಯಕರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಹೀಗಾಗಿಯೇ ರಾಷ್ಟ್ರ ವಿರೋಧಿ, ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟ, ತ್ಯಾಗ, ಬಲಿದಾನದ ಅರಿವು ಇವರಿಗೆ ಇಲ್ಲ. ಇವರಿಗೆ ಸಂವಿಧಾನ ಬೇಡ, ಮನುಸ್ಮೃತಿ ಬೇಕಿದೆ' ಎಂದು ಪ್ರಿಯಾಂಕ್ ವಾಗ್ದಾಳಿ ನಡೆಸಿದರು.
ಅಸಹಾಯಕತೆ: ‘ರಾಷ್ಟ್ರದ್ರೋಹದ ಹೇಳಿಕೆ ನೀಡಿದ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡುವಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸಹಾಯಕರಾಗಿದ್ದಾರೆ. ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸ್ಥಿತಿ ನೆನಪಿಸಿಕೊಳ್ಳುವುದು ಬೇಡ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರಕಾರದ ವಿರುದ್ಧ ಬಹಿರಂಗ ಟೀಕೆ ಮಾಡಿದರೂ ಕನಿಷ್ಠ ನೋಟಿಸ್ ನೀಡದ ಸ್ಥಿತಿಯಲ್ಲಿ ಇದ್ದಾರೆ. ಇನ್ನು ‘ಬಿಟ್ ಕಾಯಿನ್' ವಿಷಯವಾಗಿ ತಾವು ಮಾಡಿದ ಆರೋಪಕ್ಕೆ ಅವರು ಈವರೆಗೂ ತುಟಿ ಬಿಚ್ಚಿಲ್ಲ' ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
‘ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವು ರಾಷ್ಟ್ರದ ಗೌರವ ಮುಖ್ಯ. ಹೀಗಾಗಿ ಹೋರಾಟ ಮಾಡುತ್ತಿದ್ದು, ನಮ್ಮ ಅಹೋರಾತ್ರಿ ಧರಣಿ ಮುಂದುವರೆಯಲಿದೆ. ಈಶ್ವರಪ್ಪ ಹೇಳಿಕೆ ವಿರುದ್ಧ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಕೋರಿದ್ದು, ಸ್ಪೀಕರ್ ಅದನ್ನು ತಿರಸ್ಕರಿಸಿದ ಬಳಿಕವೇ ಸದನದ ಬಾವಿಗೆ ಇಳಿದು ಧರಣಿ ನಡೆಸುತ್ತಿದ್ದೇವೆ. ರಾಜ್ಯದ ಜನರ ಸಮಸ್ಯೆ ಚರ್ಚೆ ಮಾಡಲು ನಮಗೂ ಅಪೇಕ್ಷೆ ಇದೆ. ಆದರೆ, ಸರಕಾರ ಅದಕ್ಕೆ ಅವಕಾಶ ನೀಡುತ್ತಿಲ್ಲ. ಸದನವನ್ನು ಸುಗಮವಾಗಿ ನಡೆಸುವುದು ಸರಕಾರದ ಜವಾಬ್ದಾರಿ' ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಅನಿಲ್ ಚಿಕ್ಕಮಾಧು, ಶರತ್ ಬಚ್ಚೇಗೌಡ ಹಾಜರಿದ್ದರು.
‘ಹಿಜಾಬ್(ಸ್ಕಾರ್ಫ್) ವಿಚಾರದಲ್ಲಿ ನಮ್ಮ ಪಕ್ಷದ ಉಪನಾಯಕ ಯು.ಟಿ.ಖಾದರ್ ಅವರು ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಹೈಕೋರ್ಟ್ ಮಧ್ಯಂತರ ಆದೇಶ ಪಾಲಿಸುವ ಸಂಬಂಧ ಸ್ಪಷ್ಟಣೆ ಕೋರಿದ್ದು, ಪ್ರಾಥಮಿಕ ಮತ್ತು ಪದವಿ ಕಾಲೇಜುಗಳಲ್ಲಿ ಆದೇಶ ಜಾರಿ ಮಾಡುವುದಕ್ಕೆ ಆಕ್ಷೇಪಿಸಿದ್ದಾರೆ. ಈ ವಿಷಯದಲ್ಲಿ ಸರಕಾರ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ'
-ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ







