ಕೋಲಾರ: ಬಾಲಕಿಯ ಸಾಮೂಹಿಕ ಅತ್ಯಾಚಾರ ಆರೋಪ; ನಾಲ್ವರ ಬಂಧನ

ಬಂಧಿತ ಆರೋಪಿಗಳು
ಕೋಲಾರ: ಒಂಬತ್ತನೇ ತರಗತಿ ಬಾಲಕಿಯ ಮೇಲೆ ನಾಲ್ವರು ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆನ್ನಲಾದ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಕಾಮಸಮುದ್ರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಂತ್ರಸ್ತೆ ಬಾಲಕಿ ಒಂಬತ್ತನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಬಂಗಾರಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ತಿಳಿದು ಬಂದಿದೆ.
ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಆನಂದಕುಮಾರ್(25), ಕಾಂತರಾಜು(23), ಪ್ರವೀಣ್(21) ಮತ್ತು ವೇಣು (19) ಎಂದು ಗುರುತಿಸಲಾಗಿದೆ.
ಶುಕ್ರವಾರ ಬಾಲಕಿಯ ಹುಟ್ಟು ಹಬ್ಬವಾಗಿದ್ದು, ತಂದೆ ಹೊಸ ಬಟ್ಟೆ ಕೊಡಿಸಿಲ್ಲವೆಂಬ ಕೋಪದಲ್ಲಿ ಸಂಜೆ ಮನೆಯಿಂದ ಹೊರಗೆ ಬಂದಿದ್ದಳು ಎನ್ನಲಾಗಿದೆ. ಬಂಗಾರಪೇಟೆ ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಬಾಲಕಿಯನ್ನು ಪರಿಚಯ ಮಾಡಿಕೊಂಡ ನಾಲ್ವರು ಆರೋಪಿಗಳು ಕೆಲಸ ಕೊಡಿಸುವ ಆಸೆ ತೋರಿಸಿ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಬಾಲಕಿಯ ಚೀರಾಟ ಕೇಳಿ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಬಾಲಕಿಯನ್ನು ಬಂಗಾರಪೇಟೆ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.







