ಹಿಜಾಬ್ ವಿವಾದ : ಅಲ್ಪಸಂಖ್ಯಾತರ ಇಲಾಖೆ ವಿರುದ್ಧ ಕ್ರಮಕ್ಕೆ ಆಗ್ರಹ
ಉಡುಪಿ, ಫೆ.19: ಶಾಲಾಭಿವೃದ್ಧಿ ಸಮಿತಿಗಳಿರುವಲ್ಲಿ ಸಮವಸ್ತ್ರ ನೀತಿ ರೂಪಿಸಿದ್ದರೆ ಅಲ್ಲಿಗೆ ಮಾತ್ರ ಅನ್ವಯವಾಗುವಂತೆ ಹೈಕೋರ್ಟ್ ತನ್ನ ಮಧ್ಯಂತರ ತೀರ್ಪು ನೀಡಿದ್ದರೂ ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಇಲಾಖೆಯ ಕಾರ್ಯದರ್ಶಿಗಳು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧೀನದಲ್ಲಿನ ವಸತಿ ಶಾಲಾ ಕಾಲೇಜುಗಳು, ಮೌಲಾನಾ ಆಝಾದ್ ಮಾದರಿ ಶಾಲೆಗಳು, ಆಂಗ್ಲ ಮಾಧ್ಯಮ ಶಾಲೆಗಳಿಗೂ ಈ ಹೈಕೋರ್ಟ್ ತೀರ್ಪು ಅನ್ವಯವಾಗುತ್ತದೆ ಎಂದು ಸುತ್ತೋಲೆ ಹೊರಡಿಸಿದ್ದು ಈ ಇಲಾಖೆಯ ಬೇಜವಾಬ್ದಾರಿ ತನವನ್ನು ಬಹಿರಂಗಪಡಿಸಿದೆ, ತಕ್ಷಣವೇ ಈ ಆದೇಶವನ್ನು ಹಿಂಪಡೆಯುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಮಾಜಿ ಅಧ್ಯಕ್ಷ ಎಂಪಿ ಮೊಯಿದಿನಬ್ಬ ಆಗ್ರಹಿಸಿದ್ದಾರೆ.
ವಾಸ್ತವದಲ್ಲಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಶಾಲಾಭಿವೃದ್ಧಿ ಸಮಿತಿಗಳೇ ಇರುವುದಿಲ್ಲ. ಶಾಲಾಭಿವೃದ್ಧಿ ಸಮಿತಿ ರೂಪಿಸಿದ ಸಮವಸ್ತ್ರ ನೀತಿಗೆ ಮಾತ್ರ ತೀರ್ಪು ಅನ್ವಯವಾಗುತ್ತದೆ. ಹಾಗಾಗಿ ಈ ಸುತ್ತೋಲೆ ಘನ ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ ಮತ್ತು ಮುಸ್ಲಿಂ ಸಮುದಾಯವನ್ನು ಗೊಂದಲ, ಭಯದ ಕೂಪಕ್ಕೆ ತಳ್ಳಿದಂತಾಗಿದೆ. ಈ ರೀತಿಯ ಆದೇಶ ನೀಡಿರುವುದು ಸಂವಿಧಾನ ಬಾಹಿರವಾಗಿರುವುದರಿಂದ ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕೆಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ