ಹೊಸ ಚಿಂತನೆಯ ಕವಿಗಳು ಇಂದಿನ ಅಗತ್ಯ: ವಿಜಯ ಕುಮಾರ್
ಕಾರ್ಕಳ, ಫೆ.19: ಇಂದು ಸಾಹಿತ್ಯಾಸಕ್ತಿ ಕಡಿಮೆಯಾಗುತ್ತಿದೆ. ಆದರೆ ಪಂಜೆ, ಕಿಞಣ್ಣ ರೈಗಳ ಸಾಹಿತ್ಯಗಳನ್ನು ಓದಿ ಬೆಳದ ನಾವು ಈಗ ಹೊಸ ಚಿಂತನೆಯ ಕವಿಗಳನ್ನು ಗಮನಿಸುತ್ತಿದ್ದೇವೆ ಎಂದು ರಾಜ್ಯೋತ್ಸವ ಪುರಸ್ಕೃತರು, ಹಿರಿಯ ನ್ಯಾಯವಾದಿ ಎಂ.ಕೆ.ವಿಜಯ ಕುಮಾರ್ ಹೇಳಿದ್ದಾರೆ.
ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ವತಿಯಿಂದ ಬುಧವಾರ ಕಾರ್ಕಳ ಬೆಟ್ಟದ ರಥೋತ್ಸವದ ಬಳಿಕ ಆಯೋಜಿಸಲಾದ ಅಖಿಲ ಭಾರತ ಬೆಳದಿಂಗಳ ಕವಿ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡು ತ್ತಿದ್ದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕಾರ್ಕಳ ತಾಲೂಕು ಅಧ್ಯಕ್ಸೆ ಮಿತ್ರಪ್ರಭಾ ಹೆಗ್ಡೆ ಮಾತನಾಡಿ, ಹೊಸ ಜನಾಂಗದ ಕವಿಗಳು ವಿಭಿನ್ನ ಆಲೋ ಚನೆಯ, ಭಿನ್ನ ನೆಲೆಯ ಕವನಗಳನ್ನು ರಚಿಸುತ್ತಾ ಬರುತ್ತಿದ್ದಾರೆ. ಅದನ್ನು ಜಾಲತಾಣಗಳಲ್ಲಿ ವೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.
ಕವಿಗೋಷ್ಠಿಯ ಸರ್ವಾಧ್ಯಕ್ಷೆ ಪೂರ್ಣಿಮಾ ಸುರೇಶ್ ಮಾತನಾಡಿ, ಮಾತೃ ಭಾಷೆಯಿಂದ ವಂಚಿತರಾದ ಯಾರೂ ಕೂಡಾ ಬದುಕಿನಲ್ಲಿ ಮುಂದೆ ಬರುವುದು ಮತ್ತು ಶ್ರೀಮಂತರಾಗಲು ಸಾಧ್ಯವಿಲ್ಲ. ಕವಿಗಳ ರಚನೆಗಳು ಸಾರ್ವಕಾಲಿಕ ವಾದುವುಗಳಾಗಿರಬೇಕು ಎಂದು ಹೇಳಿದರು.
ಡಾ.ಸುರೇಶ ನೆಗಳಗುಳಿ, ರೇಮಂಡ್ ಡಿಕುನ್ಹಾ ತಾಕೋಡೆ, ಕಥಾಬಿಂಧು ಪಿ.ವಿ.ಪ್ರದೀಪ್ ಕುಮಾರ್ ಮಂಗಳೂರು, ರಾಧಾಕೃಷ್ಣ ತೋಡಿಕಾನ, ಶಶಿಕಲಾ ಹೆಗ್ಡೆ, ಡಾ.ವಾಣಿ ಗಿರೀಶ್, ನಾಗಶ್ರೀ ನಾಗರಕಟ್ಟೆ, ಸಾಣೂರು ಅರುಣ್ ಶೆಟ್ಟಿಗಾರ್ ಮುಖ್ಯ ಅತಿಥಿಗಳಾಗಿದ್ದರು. ಮಂಗಳೂರು ವಿಮಾನ ನಿಲ್ದಾಣದ ಮಾಜಿ ಆಡಳಿತ ನಿರ್ದೇಶಕ ಎಂ.ಆರ್.ವಾಸುದೇವ್ ಅವರನ್ನು ಕರ್ನಾಟಕ ಆಡಳಿತ ಸೇವಾ ರತ್ನ ಗೌರವ ನೀಡಿ ಸನ್ಮಾನಿಸಲಾಯಿತು.
ಡಾ.ಶೇಖರ ಅಜೆಕಾರು ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು. ದೀಪಕ್ ಎನ್.ದುರ್ಗಾ ಕಾರ್ಯಕ್ರಮ ನಿರೂಪಿಸಿದರು. ವೀರಣ್ಣ ಕುರುವತ್ತಿ ಗೌಡರ್ ವಂದಿಸಿದರು.