ಮಮತಾ ಬ್ಯಾನರ್ಜಿ ವಿರೋಧದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಸಿಎಎ ಜಾರಿಯಾಗಿಲ್ಲ: ಬಿಜೆಪಿ ರಾಜ್ಯಾಧ್ಯಕ್ಷ

Image: facebook/DR.SUKANTABJP
ಕೊಲ್ಕತ್ತಾ: ಮಮತಾ ಬ್ಯಾನರ್ಜಿ ಸರ್ಕಾರವು ಸಿಎಎಯನ್ನು ವಿರೋಧಿಸಿದ್ದರಿಂದ ರಾಜ್ಯದಲ್ಲಿ ಸಿಎಎ ಜಾರಿಗೊಳಿಸಲಾಗಿಲ್ಲ ಎಂದು ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ಹೇಳಿರುವುದಾಗಿ ಆನಂದಬಜಾರ್ ಪತ್ರಿಕೆ ವರದಿ ಮಾಡಿದೆ.
ಉತ್ತರ 24 ಪರಗಣದ ಬೊಂಗಾವ್ನಲ್ಲಿ ಮುನ್ಸಿಪಲ್ ಚುನಾವಣೆಯ ಪ್ರಚಾರದ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್, ʼಬಿಜೆಪಿ ಇಂದು ಅಥವಾ ನಾಳೆ ಸಿಎಎ ಕಾನೂನನ್ನು ಜಾರಿಗೆ ತಂದೇ ತರುತ್ತದೆʼ ಎಂದು ಹೇಳಿದ್ದಾರೆ.
ನಾವು ಉನ್ನತ ಮಟ್ಟದಲ್ಲಿ ಸಮಸ್ಯೆಯ ಬಗ್ಗೆ ಯೋಚಿಸುತ್ತಿದ್ದೇವೆ. ಈ ರಾಜ್ಯದಲ್ಲಿ [ಪಶ್ಚಿಮ ಬಂಗಾಳ] ಸಿಎಎ ಜಾರಿ ವಿಳಂಬವಾಗಿದೆ ಏಕೆಂದರೆ ರಾಜ್ಯ ಸರ್ಕಾರವು ಸಿಎಎಯನ್ನು ವಿರೋಧಿಸುತ್ತಿದೆ. ರಾಜ್ಯ ಸರ್ಕಾರ ಬಯಸಿದರೆ, ನಾವು ನಾಳೆಯೇ CAA ಯನ್ನು ಜಾರಿಗೆ ತರಬಹುದು ಎಂದು ಅವರು ಹೇಳಿರುವುದಾಗಿ ಆನಂದಬಜಾರ್ ಪತ್ರಿಕೆ ಪ್ರಕಟಿಸಿದೆ.
ಬಾಂಗ್ಲಾದೇಶದಿಂದ ವಲಸೆ ಬಂದಿರುವ ಮತುವಾ ಎಂಬ ಪಂಗಡವು ಬೊಂಗಾವ್ನಲ್ಲಿ ಹೆಚ್ಚಿನ ಪ್ರಾಬಲ್ಯ ಹೊಂದಿದೆ. ಮತುವಾ ಪಂಗಡವು ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದೆ.
ಪಶ್ಚಿಮ ಬಂಗಾಳದ ಮತುವಾ ಸಮುದಾಯಕ್ಕೆ ಸೇರಿದ ಹಲವಾರು ಬಿಜೆಪಿ ಶಾಸಕರು ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನಕ್ಕಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿತ್ತು.
ಡಿಸೆಂಬರ್ನಲ್ಲಿ, ರಾಜ್ಯದ 17 ಸಂಸದರು ಸೇರಿದಂತೆ ಪಶ್ಚಿಮ ಬಂಗಾಳದ ಬಿಜೆಪಿ ನಾಯಕರ ನಿಯೋಗವು ಸಿಎಎ ಜಾರಿಗೊಳಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತ್ತು ಎಂದು ಎಎನ್ಐ ವರದಿ ಮಾಡಿತ್ತು.
ಫೆಬ್ರವರಿ 2021 ರಲ್ಲಿ, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೋವಿಡ್ -19 ವ್ಯಾಕ್ಸಿನೇಷನ್ ಡ್ರೈವ್ ಮುಗಿದ ನಂತರ ಸಿಎಎ ಜಾರಿಗೆ ತರಲಾಗುವುದು ಎಂದು ಹೇಳಿದ್ದರು.







