ಕಂದಾಯ ಇಲಾಖೆಗಳ ಸವಲತ್ತು ಮನೆ ಬಾಗಿಲಿನಲ್ಲಿ ವಿತರಣೆ : ಆರ್.ಅಶೋಕ್
‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಉದ್ಘಾಟಿಸಿ ಕಂದಾಯ ಸಚಿವ

ಕೊಕ್ಕರ್ಣೆ (ಬ್ರಹ್ಮಾವರ), ಫೆ.19: ಸರಕಾರ ರಾಜ್ಯದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದ ಮೂಲಕ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲಾ ಅಧಿಕಾರಿಗಳನ್ನು ಜಿಲ್ಲೆಯ ಹಳ್ಳಿಗೆ ಕಳುಹಿಸಿ, ಗ್ರಾಮದ ಜನರ ಅಹವಾಲುಗಳನ್ನು ಸ್ವೀಕರಿಸಿ, ಸ್ಥಳದಲ್ಲೇ ಅದಕ್ಕೆ ಪರಿಹಾರ ಸೂಚಿಸಿ ವಿವಿಧ ಇಲಾಖೆಗಳ ಸವಲತ್ತುಗಳನ್ನು ಮನೆ ಬಾಗಿಲಿನಲ್ಲೇ ವಿತರಿಸುವ ಯೋಜನೆಯನ್ನು ಕಾರ್ಯ ರೂಪಕ್ಕೆ ತರುತ್ತಿದೆ ಎಂದು ರಾಜ್ಯ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಹಾಗೂ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿವಿಧ ಇಲಾಖೆಗಳ ಸವಲತ್ತುಗಳನ್ನು ವಿತರಿಸಿ ಮಾತನಾಡುತಿದ್ದರು. ಇದರೊಂದಿಗೆ ರಾತ್ರಿ ಅಲ್ಲೇ ಸಮೀಪದ ಆರೂರಿನಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನೂ ಅವರು ನಡೆಸಿದರು.
ಕರ್ನಾಟಕ ರಾಜ್ಯದ 247 ಕಡೆಗಳಲ್ಲಿ ಇಂದು ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಡೆಯುತ್ತಿದೆ. ಇದರಲ್ಲಿ ಜಿಲ್ಲಾಧಿಕಾರಿಗಳು, ತಹಶೀಲ್ದಾರ್‌ಗಳು ಹಾಗೂ ಉಪವಿಭಾಗಾಧಿಕಾರಿಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಹಿರಿಯ ಅಧಿಕಾರಿಗಳು ಭಾಗವಹಿಸುತಿದ್ದಾರೆ. ಅವರು ದಿನವಿಡೀ ಸ್ಥಳದಲ್ಲೇ ಇದು ಜನರ ಸಮಸ್ಯೆಗಳನ್ನು ಆಲಿಸಿ, ಅದಕ್ಕೆ ಪರಿಹಾರವನ್ನೂ ನೀಡುತ್ತಾರೆ. ಇದರೊಂದಿಗೆ ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಸವಲತ್ತುಗಳನ್ನು ಸಹ ವಿತರಿಸಲಿದ್ದಾರೆ. ಈ ಮೂಲಕ ಜನರು ಅಧಿಕಾರಿಗಳಿದ್ದ ಕಡೆ ತೆರಳದೇ ಅಧಿಕಾರಿಗಳೇ ಜನರಿದ್ದ ಕಡೆ ಬಂದು ಅವರ ಸಮಸ್ಯೆ ಅರಿಯುವಂತಾಗುತ್ತದೆ ಎಂದರು.
ಕೊಕ್ಕರ್ಣೆಯಲ್ಲಿ ಇಂದು ಒಂದೇ ದಿನದಲ್ಲಿ 1400ಕ್ಕೂ ಅಧಿಕ ಮಂದಿಗೆ ಮಾಶಾಸನಗಳು, 94ಸಿ ಹಕ್ಕುಪತ್ರ, ರೈತರ, ಮೀನುಗಾರರ ಅಕಸ್ಮಿಕ ಮರಣ ಪರಿಹಾರ, ಪಿಂಚಣಿ ಸೇರಿದಂತೆ ಸರಕಾರದ ವಿವಿಧ ಇಲಾಖೆಗಳ ಸವಲತ್ತುಗಳನ್ನು ವಿತರಿಸಲಾಗುತ್ತಿದೆ ಎಂದು ಅಶೋಕ್ ನುಡಿದರು.
ಜಿಲ್ಲಾಧಿಕಾರಿಯೊಬ್ಬರು ಒಂದು ಹಳ್ಳಿಗೆ ಬರುವುದರಿಂದ ಹಳ್ಳಿಯ ವಾತಾವರಣವೇ ಬದಲಾಗುತ್ತದೆ. ಇಡೀ ಆಡಳಿತವೇ ಅಲ್ಲಿ ಬಂದಂತಾಗುತ್ತದೆ. ಎಲ್ಲಾ ಉನ್ನತ ಅಧಿಕಾರಿಗಳು ಅಲ್ಲಿರುತ್ತಾರೆ. ಇವರು ಕೇವಲ ಭರವಸೆ ನೀಡುವುದಲ್ಲ, ಪರಿಹಾರವನ್ನೂ ಸ್ಥಳದಲ್ಲೇ ನೀಡುತ್ತಾರೆ. 60 ವರ್ಷ ದಾಟಿದವರಿಗೆ ವೃದ್ಧಾಪ್ಯ ವೇತನವನ್ನು ಅವರ ಮನೆಗೆ ತೆಗೆದುಕೊಂಡು ಹೋಗಿ ನೀಡಲಾಗುತ್ತದೆ. ಈ ಮೂಲಕ ಆಡಳಿತದಲ್ಲಿ ಹೊಸ ಬದಲಾವಣೆ ತರುತಿದ್ದೇವೆ ಎಂದರು.
ಇದರೊಂದಿಗೆ ಕಡತ ವಿಲೇವಾರಿ ‘ಕಡತ ಯಜ್ಞ’ ಕಾರ್ಯಕ್ರಮವನ್ನೂ ನಾವು ಜಾರಿಗೆ ತರಲಿದ್ದೇವೆ. ಈ ಮೂಲಕ ಬಡವರ ಧ್ವನಿಯನ್ನು, ಅವರ ಸಮಸ್ಯೆಗಳನ್ನು ಆಲಿಸುವಂತೆ ಅಧಿಕಾರಿಗಳಿಗೆ ಸ್ಪಷ್ಟವಾದ ಸೂಚನೆಯನ್ನು ನೀಡಿದ್ದೇನೆ ಎಂದರು.
ಕೋವಿಡ್ ಪರಿಹಾರ ನಿಧಿ: ಕೋವಿಡ್‌ನಿಂದ ಮೃತಪಟ್ಟ ಕುಟುಂಬಕ್ಕೆ ಒಟ್ಟು 1.50 ಲಕ್ಷ ರೂ.ಗಳ ಪರಿಹಾರವನ್ನು ಕಂದಾಯ ಇಲಾಖೆಯ ಮೂಲಕ ನೀಡಲಾಗುತ್ತಿದೆ. ಇದರಲ್ಲಿ ಕೇಂದ್ರದ 50,000 ಹಾಗೂ ರಾಜ್ಯದ ಒಂದು ಲಕ್ಷ ರೂ. ಇದೆ. ಈವರೆಗೆ ರಾಜ್ಯದಲ್ಲಿ 13698 ಬಿಪಿಎಲ್ ಕುಟುಂಬದವರು ಸೇರಿದಂತೆ ಒಟ್ಟು 27462 ಮಂದಿಗೆ ಪರಿಹಾರವನ್ನು ನೀಡಿದ್ದೇವೆ. ಉಡುಪಿ ಜಿಲ್ಲೆಯಲ್ಲಿ 212 ಬಿಪಿಎಲ್ ಕುಟುಂಬದವರು ಸೇರಿದಂತೆ 448 ಮಂದಿಗೆ ಪರಿಹಾರ ವಿತರಿಸಿದ್ದೇವೆ ಎಂದು ಅಶೋಕ್ ವಿವರಿಸಿದರು.
ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಮಾತನಾಡಿ, ಗ್ರಾಮದ ಜನರ ಬಳಿಗೆ ಬಂದು ಸೇವೆ ನೀಡುವ ಉದ್ದೇಶದಿಂದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಪ್ರಾರಂಭಿಸಿದ್ದು, ಕಂದಾಯ ಇಲಾಖೆಯ ಹಲವು ಸಮಸ್ಯೆಗಳನ್ನು ಇದರಿಂದ ಪರಿಹರಿಸಲು ಸಾಧ್ಯವಿದೆ. ಜಿಲ್ಲೆಯಲ್ಲಿ ಡೀಮ್ಡ್ ಫಾರೆಸ್ಟ್ ಸಮಸ್ಯೆಗೆ ತ್ವರಿತವಾಗಿ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಡೀಮ್ಡ್ ಫಾರೆಸ್ಟ್, ಕುಮ್ಕಿ ಸಮಸ್ಯೆ ಜಿಲ್ಲೆಯ ಜನತೆ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆಗಳಾಗಿವೆ. ಅದಕ್ಕೊಂದು ಸೂಕ್ತ ಪರಿಹಾರವನ್ನು ನೀಡಬೇಕಾಗಿದೆ. ಉಡುಪಿಯಲ್ಲೂ ಒಂದು ಎಸಿ ಕಚೇರಿಯನ್ನು ಪ್ರಾರಂಭಿಸಬೇಕಾಗಿದೆ ಎಂದು ಸಚಿವರಲ್ಲಿ ಬೇಡಿಕೆಯನ್ನಿರಿಸಿದರು.
ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಕೊಕ್ಕರ್ಣೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮೀ, ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಕುಂದಾಪುರದ ಡಿಎಫ್‌ಓ ಅಶೀಶ್ ರೆಡ್ಡಿ, ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ., ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂರ್ತಿ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಸ್ವಾಗತಿಸಿ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ವಂದಿಸಿದರು.
1417 ಮಂದಿಗೆ ಸವಲತ್ತು ವಿತರಣೆ
ಜಿಲ್ಲಾಧಿಕಾರಿ ನಡೆ ಹಳ್ಳಿ ನಡೆ ಕಾರ್ಯಕ್ರಮದಲ್ಲಿ ಇಂದು ವಿವಿಧ ಇಲಾಖೆಗೆ ಸಂಬಂಧಿಸಿದಂತೆ ಒಟ್ಟು 1417 ಮಂದಿ ವಿವಿಧ ಸವಲತ್ತು, ಸೌಲಭ್ಯಗಳನ್ನು ವಿತರಿಸಲಾಯಿತು.
ಪಿಂಚಣಿ, ಮಾಶಾಸನ, ಹಕ್ಕುಪತ್ರ, ಅಕಸ್ಮಿಕ ಮರಣಕ್ಕೆ ಪರಿಹಾರ ಸೇರಿದಂತೆ ಕಂದಾಯ ಇಲಾಖೆಯ ವಿವಿಧ ಸವಲತ್ತುಗಳನ್ನು 593, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸವಲತ್ತುಗಳನ್ನು 94, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸವಲತ್ತುಗಳನ್ನು 100 ಮಂದಿಗೆ ವಿತರಿಸಲಾಯಿತು.
ಅಲ್ಲದೇ ಪಶುಸಂಗೋಪನಾ ಇಲಾಖೆಯಿಂದ 3, ತೋಟಗಾರಿಕಾ ಇಲಾಖೆಯಿಂದ 15, ಕೃಷಿ ಇಲಾಖೆಯಿಂದ 11, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ 22, ಆಹಾರ ಇಲಾಖೆಯಿಂದ 572, ಸಮಾಜ ಕಲ್ಯಾಣ ಇಲಾಖೆಯಿಂದ 4 ಹಾಗೂ ಐಟಿಡಿಪಿ ಇಲಾಖೆಯಿಂದ ಮೂವರು ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು.