ಮುಸ್ಲಿಂ ಬಾಲಕಿಯರ ಶಿಕ್ಷಣದ ಹಕ್ಕು, ಆಯ್ಕೆಯ ಸ್ವಾತಂತ್ರ್ಯಕ್ಕೆ ಬೆಂಬಲ: ವಿದ್ಯಾರ್ಥಿ ಮತ್ತು ಯುವ ಸಂಘಟನೆಗಳ ಒಕ್ಕೂಟ

ಸಾಂದರ್ಭಿಕ ಚಿತ್ರ
ಬೆಂಗಳೂರು, ಫೆ.19: ಕಳೆದೆರಡು ತಿಂಗಳುಗಳಿಂದ ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕನ್ನು ನಿರಾಕರಿಸುವ ಮೂಲಕ ಅವರನ್ನು ಶಿಕ್ಷಣ ಸಂಸ್ಥೆಗಳಿಂದ ಬಲವಂತವಾಗಿ ಹೊರಗುಳಿಯುವಂತೆ ಮಾಡಿದ ನಿದರ್ಶನಗಳಿವೆ. ವರದಿಯಾದ ಘಟನೆಗಳಲ್ಲಿ ಒಂಟಿ ಮುಸ್ಲಿಂ ಹುಡುಗಿಯನ್ನು ಹಿಂಬಾಲಿಸಿದ, ತರಗತಿಗೆ ನುಗ್ಗಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಘಟನೆಗಳು ಅತ್ಯಂತ ಖಂಡನೀಯ ಎಂದು ವಿದ್ಯಾರ್ಥಿ ಮತ್ತು ಯುವ ಸಂಘಟನೆಗಳ ಒಕ್ಕೂಟ ತಿಳಿಸಿದೆ.
ವಿದ್ಯಾರ್ಥಿಗಳ ಶಿಕ್ಷಣ ಹಕ್ಕು ಮತ್ತು ಆಯ್ಕೆಯ ಸ್ವಾತಂತ್ರ್ಯದ ಹಕ್ಕಿಗಾಗಿ, ಕೆಳಗೆ ಸಹಿ ಮಾಡಿದ ನಾವು ವಿದ್ಯಾರ್ಥಿ-ಯುವಜನರ ಸಂಘಟನೆಗಳು ಮುಸ್ಲಿಂ ಹೆಣ್ಣುಮಕ್ಕಳ ಹಕ್ಕುಗಳಿಗಾಗಿ ನಮ್ಮ ಬೆಂಬಲ ಮತ್ತು ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇವೆ ಎಂದು ಸಂಘಟನೆಗಳ ಒಕ್ಕೂಟದ ಪ್ರಮುಖರು ತಿಳಿಸಿದ್ದಾರೆ.
ಈ ಕೆಳಗಿನ ವಿಚಾರಗಳನ್ನು ಒಮ್ಮತದಿಂದ ಪ್ರತಿಪಾದಿಸುತ್ತೇವೆ:
ತರಗತಿಯ ಕೊಠಡಿಗಳು ಎಲ್ಲರೂ ಸಮಾನವಾಗಿ ಭಾಗಿಯಾಗುವ ಸ್ಥಳಗಳಾಗಿವೆ. ತರಗತಿಗಳಲ್ಲಿ ಅಂತಹ ವಾತಾವರಣವನ್ನು ಒದಗಿಸುವ ಮೂಲಕವೇ ವೈಯಕ್ತಿಕ ಆಚರಣೆಗಳು ಹಾಗೂ ಸಂಸ್ಕೃತಿಯನ್ನು ಪರಸ್ಪರರು ಗೌರವಿಸುತ್ತಾ ವೈವಿಧ್ಯತೆಯ ಕಲಿಕೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ. ಶಿಕ್ಷಣ ಸಂಸ್ಥೆಗಳು ಧರ್ಮ, ಜಾತಿಯನ್ನು ಅಥವಾ ಸಿದ್ಧಾಂತಗಳನ್ನು ಗಣನೆಗೆ ಪಡೆಯದೇ ಸುರಕ್ಷಿತವಾದ ಕಲಿಕೆಯ ಸ್ಥಳಗಳಾಗಿರಬೇಕು.
ಹಿಜಾಬ್ ಅನ್ನು ಸಮವಸ್ತ್ರದ ಬದಲಾಗಿ ಧರಿಸುತ್ತಿಲ್ಲ. ಇದು ಕೇವಲ ಒಂದು ಬಟ್ಟೆಯ ತುಂಡು, ಅದು ಒಂದು ಹೆಣ್ಣುಮಗಳ ಶಿರವನ್ನು ಮಾತ್ರ ಮರೆಮಾಚುತ್ತದೆ. ತನ್ನ ಸ್ವಂತ ಆಯ್ಕೆಯಿಂದ ಹೆಣ್ಣುಮಕ್ಕಳು ಧರಿಸುವ ಹಿಜಾಬ್ ಯಾರ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಅಥವಾ ಇತರರ ನಂಬಿಕೆಗೆ ಧಕ್ಕೆ ಮಾಡುವುದಿಲ್ಲ. ಯಾರು ಏನು ಧರಿಸಬೇಕು ಎಂಬುದು ಅವರವರ ವೈಯಕ್ತಿಕ ಆಯ್ಕೆಯಾಗಿದೆ ಮತ್ತು ಅದನ್ನು ನಾವೆಲ್ಲರೂ ಗೌರವಿಸಬೇಕು. ವ್ಯಕ್ತಿಯ ಆಯ್ಕೆಯ ಸ್ವಾತಂತ್ರ್ಯವನ್ನು ಯಾರೂ ಕೂಡಾ ಉಲ್ಲಂಘಿಸುವಂತಿಲ್ಲ.
ಹಿಜಾಬ್ ಧರಿಸಿದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಶಿಕ್ಷಣ ಸಂಸ್ಥೆಗಳ ಪ್ರವೇಶವನ್ನು ನಿರಾಕರಿಸುವುದು ಅವರ ಶಿಕ್ಷಣದ ಹಕ್ಕಿನ ಉಲ್ಲಂಘನೆಯಾಗಿದೆ. ಮತ್ತು ಅದು ಧರ್ಮದ ಆಧಾರದ ಮೇಲೆ ತಾರತಮ್ಯಕ್ಕೆ ಕಾರಣವಾಗಲಿದೆ.
ವಿದ್ಯಾರ್ಥಿನಿಯರನ್ನು ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯ ಸೋರಿಕೆಯೂ(ಕಾಲೇಜಿಗೆ ಸಲ್ಲಿಸಿದ್ದ ಪ್ರವೇಶ ನಮೂನೆಗಳ ಸ್ಕ್ಯಾನ್ ಮಾಡಿದ ಪ್ರತಿಗಳು, ಛಾಯಾಚಿತ್ರಗಳು) ಅವರ ಖಾಸಗಿತನದ ಹಕ್ಕನ್ನು ಉಲ್ಲಂಘಿಸಿದೆ ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಹಾನಿಯಾಗುವ ಸಂಭವವಿದೆ. ಇದಕ್ಕೆ ಕಾರಣರಾದವರನ್ನು ಹೊಣೆಗಾರರನ್ನಾಗಿಸಬೇಕು.
ಭಾರತದ ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಧಾರ್ಮಿಕ ಆಯ್ಕೆಗಳನ್ನು ‘ಪ್ರತಿಪಾದಿಸಲು, ಅಭ್ಯಾಸ ಮಾಡಲು ಮತ್ತು ಪ್ರಚಾರ ಮಾಡಲು’ ಮಾನ್ಯತೆ ನೀಡಿದೆ. ಭಾರತದ ನಾಗರಿಕರಾಗಿ, ಎಲ್ಲರಿಗೂ ಖಾತರಿಪಡಿಸಿದ ಹಕ್ಕುಗಳನ್ನು ಗೌರವಿಸುವುದು ನಮ್ಮ ಕರ್ತವ್ಯ.
ಭಾರತವು ಬಹುತ್ವ ಮತ್ತು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ದೇಶವು ಎಲ್ಲಾ ನಾಗರಿಕರಿಗೆ ಸಮಾನವಾಗಿ ಸೇರಿದೆ. ಸಾಮರಸ್ಯ, ಸಹಬಾಳ್ವೆ ಮತ್ತು ಒಳಗೊಳ್ಳುವ ಸಂಸ್ಕೃತಿಯ ಗೌರವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ವಿವಿಧತೆಯಲ್ಲಿ ಏಕತೆ ನಮ್ಮ ಶಕ್ತಿಯಾಗಿದೆ.
ಯುವ ಮತ್ತು ಬೆಳೆಯುತ್ತಿರುವ ಮಕ್ಕಳ ಮನಸ್ಸುಗಳಲ್ಲಿ ದ್ವೇಷದ ಬೀಜಗಳನ್ನು ಬಿತ್ತುವ ಮೂಲಕ ವಿದ್ಯಾರ್ಥಿಗಳಲ್ಲಿ ಸೃಷ್ಟಿಸುತ್ತಿರುವ ವಿಷಪೂರಿತ ಮನೋಭಾವವು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ.
ನಾವು ಒಬ್ಬರಿಗೊಬ್ಬರು ಸ್ನೇಹಿತರಾಗಿದ್ದೇವೆ ಮತ್ತು ಪರಸ್ಪರ ಗೌರವ ಹಾಗೂ ನಂಬಿಕೆಯ ಮೂಲಕ ಸಮಾಜಕ್ಕೆ ಮತ್ತು ನಮ್ಮ ದೇಶದ ಪ್ರಗತಿಗೆ ಅಪಾರ ಕೊಡುಗೆ ನೀಡಬಹುದು ಎಂಬುದನ್ನು ಅರಿತುಕೊಳ್ಳಲು ರಾಜ್ಯಾದ್ಯಂತ ಕಾಲೇಜಿನ ವಿದ್ಯಾರ್ಥಿಗಳಿಗೆ ನಾವು ಕರೆ ನೀಡುತ್ತೇವೆ.
ಸದ್ಯ ಕೋರ್ಟಿನಲ್ಲಿರುವ ಈ ವಿವಾದವು ಭಾರತದ ಸಂವಿಧಾನ ಖಾತರಿಪಡಿಸಿದ ವೈಯಕ್ತಿಕ ಹಕ್ಕುಗಳನ್ನು ತುಳಿಯುವ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲವೆಂದು ಹಾಗೂ ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯುತ್ತದೆ ಎಂಬುದನ್ನು ಹೈಕೋರ್ಟ್ ನ್ಯಾಯಾಲಯದಿಂದ ನಾವು ಪ್ರಾಮಾಣಿಕವಾಗಿ ನಂಬಿದ್ದೇವೆ ಮತ್ತು ನಿರೀಕ್ಷಿಸುತ್ತಿದ್ದೇವೆ ಎಂದು ವಿದ್ಯಾರ್ಥಿ ಮತ್ತು ಯುವಜನರ ಸಂಘಟನೆಗಳ ಒಕ್ಕೂಟದ ಪ್ರಮುಖರು ತಿಳಿಸಿದ್ದಾರೆ.
ಇದನ್ನೂ ಓದಿ: ಎಸ್ಪಿ-ಡಿಜಿ ಪೊಲೀಸ್ ಸಮವಸ್ತ್ರ ಕಳಚಿ ಬಿಜೆಪಿ ಕಾರ್ಯಕರ್ತರಾಗಿ ಕೆಲಸ ಮಾಡಲಿ: ಡಿ.ಕೆ. ಶಿವಕುಮಾರ್







