ಚುನಾವಣಾ ಸಂಹಿತೆ ಉಲ್ಲಂಘನೆ : ಮುಖ್ಯಮಂತ್ರಿ ಚನ್ನಿ, ಮೂಸೆವಾಲ ವಿರುದ್ಧ ಪ್ರಕರಣ ದಾಖಲು
ಚಂಡಿಗಡ, ಫೆ. 19: ಮಾನ್ಸಾ ಜಿಲ್ಲೆಯಲ್ಲಿ ಶುಕ್ರವಾರ ಚುನಾವಣಾ ಸಂಹಿತೆ ಉಲ್ಲಂಘಿಸಿದ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಹಾಗೂ ಸಿಧು ಮೂಸೆ ವಾಲ ಎಂದು ಜನಪ್ರಿಯರಾಗಿರುವ ಕಾಂಗ್ರೆಸ್ ಅಭ್ಯರ್ಥಿ ಶುಭ್ದೀಪ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಚುನಾವಣಾ ಪ್ರಚಾರದ ಅಂತಿಮ ಗಡು ಶುಕ್ರವಾರ ಸಂಜೆ 6 ಗಂಟೆಯ ಬಳಿಕವೂ ಇವರಿಬ್ಬರು ಚುನಾವಣಾ ಪ್ರಚಾರ ನಡೆಸಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಇವರಿಬ್ಬರ ವಿರುದ್ಧ ಮಾನ್ಸಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೂಸೆ ವಾಲ ಪರ ಮನೆ ಮನೆ ಪ್ರಚಾರ ನಡೆಸಲು ಚನ್ನಿ ಅವರು ಶುಕ್ರವಾರ ಸಂಜೆ ಮಾನ್ಸಾಗೆ ತಲುಪಿದ್ದರು. ಚುನಾವಣಾ ಪ್ರಚಾರದ ಅವಧಿ ಅಂತ್ಯಗೊಂಡ ಬಳಿಕ ಪ್ರಚಾರ ನಡೆಸುವ ಮೂಲಕ ಕಾಂಗ್ರೆಸ್ ನಾಯಕರು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಮಾನ್ಸಾದ ಆಪ್ ಅಭ್ಯರ್ಥಿ ಡಾ. ವಿಜಯ್ ಸಿಂಗ್ಲಾ ಅವರು ಚುನಾವಣಾ ಪರಿವೀಕ್ಷಕ ಸಿ.ಕೆ. ಯಾದವ್ಗೆ ದೂರು ಸಲ್ಲಿಸಿದ್ದಾರೆ ಎಂದು ಪ್ರಥಮ ಮಾಹಿತಿ ವರದಿ ಹೇಳಿದೆ.
ಸ್ಥಳದಲ್ಲೇ ಸಂಚಾರಿ ದಳ ಪರಿಶೀಲನೆ ನಡೆಸಿದ ಬಳಿಕ ಚುನಾವಣಾ ಆಯೋಗ ಚನ್ನಿ ಅವರು ಮಾನ್ಸಾದ ಮತದಾರರಲ್ಲಿ ಹಾಗೂ ಇನ್ನೊಂದು ಕ್ಷೇತ್ರದಲ್ಲಿ ಪ್ರಚಾರದ ಚುನಾವಣಾ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಕಂಡು ಕೊಂಡರು. ಮೂಸೆ ವಾಲ ಅವರು 400 ಮಂದಿ ಬೆಂಬಲಿಗರೊಂದಿಗೆ ನಿಗದಿತ ಗಡುವಿನ ಬಳಿಕವೂ ಪ್ರಚಾರ ನಡೆಸಿದ್ದಾರೆ ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ. ಇನ್ನೊಂದು ಘಟನೆಯಲ್ಲಿ ಅನುಮತಿ ಇಲ್ಲದೆ ರ್ಯಾಲಿ ನಡೆಸಿದ ಮಾನ್ಸಾದ ಸಾರ್ದೂಲಗಡದ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮ್ ಸಿಂಗ್ ಮೊಫರ್ ಅವರ ವಿರುದ್ಧ ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ. ಝುನಿರ್ ಪೊಲೀಸ್ ಠಾಣೆಯಲ್ಲಿ ಮೊಫರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.