ಉಡುಪಿ ಜಿಲ್ಲೆ : 21 ಮಂದಿ ಕೋವಿಡ್ಗೆ ಪಾಸಿಟಿವ್
ಉಡುಪಿ, ಫೆ.19: ಜಿಲ್ಲೆಯಲ್ಲಿ ಕೊರೋನಕ್ಕೆ ಪಾಸಿಟಿವ್ ಬಂದವರ ಸಂಖ್ಯೆ ಶನಿವಾರ 21ಕ್ಕೆ ಇಳಿದಿದೆ. ದಿನದಲ್ಲಿ 69 ಮಂದಿ ಸೋಂಕಿನಿಂದ ಚೇತರಿಸಿ ಕೊಂಡಿದ್ದು, ಸದ್ಯ ಜಿಲ್ಲೆಯಲ್ಲಿ ಚಿಕಿತ್ಸೆಯಲ್ಲಿರುವವರ ಸಂಖ್ಯೆ 231ಕ್ಕೆ ಇಳಿದಿದೆ.
ಇಂದು ಪಾಸಿಟಿವ್ ಬಂದ 21 ಮಂದಿಯಲ್ಲಿ 7 ಮಂದಿ ಪುರುಷರು ಹಾಗೂ 14 ಮಂದಿ ಮಹಿಳೆಯರು. ಇವರಲ್ಲಿ 13 ಮಂದಿ ಉಡುಪಿ ತಾಲೂಕಿಗೆ, ಒಬ್ಬರು ಕುಂದಾಪುರ, ಐವರು ಕಾರ್ಕಳ ತಾಲೂಕಿಗೆ ಸೇರಿದವರು. ಉಳಿದ ಇಬ್ಬರು ಹೊರಜಿಲ್ಲೆಯವರು. ಪಾಸಿಟಿವ್ ಬಂದವರಲ್ಲಿ 16 ಮಂದಿಗೆ ಅವರವರ ಮನೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಶನಿವಾರ ಜಿಲ್ಲೆಯಲ್ಲಿ ಕೋವಿಡ್ನಿಂದ ಯಾರೂ ಮೃತಪಟ್ಟಿಲ್ಲ.
ಶುಕ್ರವಾರ 69 ಮಂದಿ ರೋಗಮುಕ್ತರಾಗಿದ್ದು, ಕೊರೋನದಿಂದ ಜ.1ರ ನಂತರ ಚೇತರಿಸಿಕೊಂಡವರ ಸಂಖ್ಯೆ 18138ಕ್ಕೇರಿದೆ. ನಿನ್ನೆ ಜಿಲ್ಲೆಯ ಒಟ್ಟು 1286 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಜ.1ರ ಬಳಿಕ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 18,274ಕ್ಕೇರಿದೆ.
986 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಒಟ್ಟು 986 ಮಂದಿ ಕೋವಿಡ್ಗಿರುವ ಲಸಿಕೆಯನ್ನು ಪಡೆದಿದ್ದಾರೆ. ಇವರಲ್ಲಿ 137 ಮಂದಿ 60 ವರ್ಷ ಮೇಲಿನ ಹಿರಿಯ ನಾಗರಿಕರು ಸೇರಿದಂತೆ ಒಟ್ಟು 178 ಮಂದಿ ಮುನ್ನೆಚ್ಚರಿಕೆ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ.
ಉಳಿದಂತೆ 44 ಮಂದಿ ಮೊದಲ ಡೋಸ್ ಹಾಗೂ 764 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 15ರಿಂದ 18 ವರ್ಷದೊಳಗಿನವರಲ್ಲಿ 7 ಮಂದಿ ಮೊದಲ ಡೋಸ್ ಹಾಗೂ 242 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.