ತ್ರಿವರ್ಣ ಧ್ವಜದ ಮೇಲೆ ಆರೆಸ್ಸೆಸ್ ಗೆ ಯಾವುದೇ ಗೌರವ ಇಲ್ಲ: ಸಿದ್ದರಾಮಯ್ಯ
"ಈಶ್ವರಪ್ಪ ಹೇಳಿಕೆ ದೇಶದ 130 ಕೋಟಿ ಜನರ ಭಾವನೆಗಳ ವಿಚಾರ"

ಸಿದ್ದರಾಮಯ್ಯ
ಬೆಂಗಳೂರು, ಫೆ. 19: ‘ತ್ರಿವರ್ಣ ಧ್ವಜದ ಮೇಲೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸೆಸ್ಸ್)ಕ್ಕೆ ಯಾವುದೇ ಗೌರವ ಇಲ್ಲ. ಸಚಿವ ಕೆ.ಎಸ್. ಈಶ್ವರಪ್ಪ ಒಬ್ಬ ಪೆದ್ದ. ಅವರ ಮೂಲಕ ಆರೆಸೆಸ್ಸ್ ಎಲ್ಲ ಮಾತನಾಡುತ್ತಿದೆ' ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಆರೋಪ ಮಾಡಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಂಘ ಪರಿವಾರದವರಿಗೆ ಕೇಸರಿ ಧ್ವಜದ ಮೇಲೆ ಗೌರವ ಮತ್ತು ಪ್ರೀತಿ. ಹೀಗಾಗಿ ಅವರು ಎಂದೂ ತ್ರಿವರ್ಣದ ಧ್ವಜದ ಮೇಲೆ ಗೌರವವನ್ನು ಇಟ್ಟುಕೊಂಡಿಲ್ಲ. ಈಶ್ವರಪ್ಪ ಹೇಳಿಕೆ ಹಿಂದೆ ಆರೆಸ್ಸೆಸ್ನ ಕುತಂತ್ರ ಅಡಗಿದೆ’ ಎಂದು ವಾಗ್ದಾಳಿ ನಡೆಸಿದರು.
‘ಸಚಿವ ಕೆ.ಎಸ್.ಈಶ್ವರಪ್ಪರ ರಾಜೀನಾಮೆ ಪಡೆಯಬೇಕು. ಇಲ್ಲವೇ ಅವರನ್ನು ಸಂಪುಟದಿಂದ ವಜಾ ಮಾಡಬೇಕು' ಎಂದು ಆಗ್ರಹಿಸಿ ಫೆ.21ರಿಂದ ಕಾಂಗ್ರೆಸ್ ಪಕ್ಷದ ರಾಜ್ಯದ ಎಲ್ಲ ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರದಲ್ಲಿ ಹೋರಾಟ ಮಾಡಲಿದ್ದಾರೆ. ಅಧಿವೇಶನದಲ್ಲಿ ನಿಲುವಳಿ ಸೂಚನೆಯಡಿ ಈಶ್ವರಪ್ಪ ಹೇಳಿಕೆ ವಿಚಾರ ಚರ್ಚೆಗೆ ಕೈಗೆತ್ತಿಕೊಳ್ಳಬೆಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.
‘ಸಚಿವ ಈಶ್ವರಪ್ಪ ಹೇಳಿಕೆ ವಿಚಾರದ ಚರ್ಚೆ ಬಿಟ್ಟು ಸರಕಾರ ಹೇಳುವುದನ್ನು ಕೇಳಿಕೊಂಡು ಇರಲು ಆಗುವುದಿಲ್ಲ. ಈ ವಿಷಯದ ಬಳಿಕ ಇತರ ವಿಚಾರಗಳನ್ನು ಮಾತನಾಡಬಹುದಿತ್ತು. ನಮ್ಮ ಅಹೋರಾತ್ರಿ ಧರಣಿ ಮುಂದುವರಿಯಲಿದೆ. ಅಧಿವೇಶನ ಮುಂದೂಡಿದರೆ ನಾವು ಜನರ ಬಳಿ ಹೋಗುತ್ತೇವೆ' ಎಂದು ಸಿದ್ದರಾಮಯ್ಯ ಇದೇ ವೇಳೆ ಎಚ್ಚರಿಕೆ ನೀಡಿದರು.
‘ಕಲಾಪ ನಡೆಸುವುದು ಸರಕಾರದ ಜವಾಬ್ದಾರಿ. ಈ ಸರಕಾರದ ನಡವಳಿಕೆ ಬಗ್ಗೆ ಜನತೆ ತೀರ್ಮಾನಿಸುತ್ತಾರೆ. ಈಶ್ವರಪ್ಪ ಹೇಳಿಕೆ ದೇಶದ 130 ಕೋಟಿ ಜನರ ಭಾವನೆಗಳ ವಿಚಾರ. ದೇಶದ ಸ್ವಾಭಿಮಾನದ ವಿಚಾರವೂ ಹೌದು. ಇಂತಹವರು ಸರಕಾರಲ್ಲಿ ಇರುವುದು ಹೇಗೆ ಸಾಧ್ಯ? ಸಂವಿಧಾನಕ್ಕೆ ಗೌರವ ಕೊಡದೇ ವ್ಯಕ್ತಿಯು ಮಂತ್ರಿ ಆಗಿ ಮುಂದುವರಿಯಲು ಸಾಧ್ಯವೇ?' ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ನಮ್ಮಲ್ಲಿ ಇನ್ನು ಮುಂದೆ ಸಮವಸ್ತ್ರ ಕಡ್ಡಾಯವಿಲ್ಲ ಎಂದ ಮೈಸೂರಿನ ಖಾಸಗಿ ಕಾಲೇಜು







