"ಕೊರೋನ ಸೋಂಕು ಇನ್ನೂ ಅಂತ್ಯಗೊಂಡಿಲ್ಲ": ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ವಿಶ್ವ ಆರೋಗ್ಯ ಸಂಸ್ಥೆ
ವಿಶ್ವ ಆರೋಗ್ಯ ಸಂಸ್ಥೆ, ಫೆ.19: ಕೆಲವು ದೇಶಗಳಲ್ಲಿ ಕೋವಿಡ್-19 ಲಸಿಕಾಕರಣ ಹೆಚ್ಚಿನ ವೇಗದಲ್ಲಿ ನಡೆದಿರುವುದು ಹಾಗೂ ಒಮೈಕ್ರಾನ್ನ ಕಡಿಮೆ ತೀವ್ರತೆ ಕೊರೋನ ಸೋಂಕು ಅಂತ್ಯಗೊಂಡಿದೆ ಎಂಬ ಅಪಾಯಕಾರಿ ನಿರೂಪಣೆಗೆ ದಾರಿ ಮಾಡಿಕೊಟ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಹೇಳಿದೆ.
ಈಗ ನೆಲೆಸಿರುವ ಪರಿಸ್ಥಿತಿಯು ವಾಸ್ತವವಾಗಿ ಕೊರೋನ ಸೋಂಕಿನ ಇನ್ನಷ್ಟು ವೇಗವಾಗಿ ಹರಡುವ ಮತ್ತು ಅಪಾಯಕಾರಿ ಪ್ರಭೇದ ಹೊರಹೊಮ್ಮಲು ಸೂಕ್ತವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರಾಸ್ ಘೆಬ್ರಯೇಸಸ್ ಶುಕ್ರವಾರ ಹೇಳಿದ್ದಾರೆ. ಅವರು ಜರ್ಮನ್ನ ಮ್ಯೂನಿಚ್ನಲ್ಲಿ ನಡೆದ ಭದ್ರತಾ ಸಮಾವೇಶದಲ್ಲಿ ಮಾತನಾಡಿದರು.
ಈ ವರ್ಷ ಕೊರೋನ ಸೋಂಕಿಗೆ ಅಂತ್ಯಹೇಳುವ ಬಗ್ಗೆ ಜಾಗತಿಕ ಸಮುದಾಯ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು. ಈಗ ನಮ್ಮಲ್ಲಿ ಸೂಕ್ತವಾದ ಸಾಧನಗಳಿವೆ. ಸೋಂಕಿನ ಕುರಿತ ಮಾಹಿತಿಯಿದೆ. ಆದ್ದರಿಂದ ಈ ವರ್ಷ ಕೊರೋನ ಸೋಂಕಿಗೆ ಇತಿಶ್ರೀ ಹಾಡುವುದು ಅಸಾಧ್ಯವೇನಲ್ಲ. ಇದರ ಜೊತೆಗೆ, ಸೋಂಕು ಕಲಿಸಿದ ಪಾಠವನ್ನು ಮರೆಯಬಾರದು . ಪ್ರತೀ ವಾರ ಸೋಂಕಿನಿಂದ 70,000 ಜನ ಸಾವನ್ನಪ್ಪುತ್ತಿರುವಾಗ ಅಥವಾ ಆಫ್ರಿಕಾ ಜನಸಂಖ್ಯೆಯ 83% ಪ್ರಮಾಣದಷ್ಟು ಜನ ಲಸಿಕೆ ಪಡೆಯದಿರುವ ಸನ್ನಿವೇಶದಲ್ಲಿ ಕೊರೋನ ಸೋಂಕಿಗೆ ಅಂತ್ಯಹೇಳಲು ಸಾಧ್ಯವಿಲ್ಲ. ಸಕ್ರಿಯ ಪ್ರಕರಣಗಳ ಹೊರೆಯಿಂದ ಆರೋಗ್ಯ ಕ್ಷೇತ್ರದ ಮೇಲಿನ ಒತ್ತಡ ಹೆಚ್ಚಿದ್ದಾಗ ಅಥವಾ ಅತೀ ತೀವ್ರವಾಗಿ ಪ್ರಸರಣಗೊಳ್ಳುವ ಸಾಮರ್ಥ್ಯದ ಸೋಂಕಿನ ತಳಿ ಉಗಮಗೊಂಡ ಸಂದರ್ಭದಲ್ಲಿ ಕೊರೋನ ಸೋಂಕನ್ನು ಮುಕ್ತಾಯಗೊಳಿಸಲು ಆಗದು. ಕೊರೋನ ಸಾಂಕ್ರಾಮಿಕ ರೋಗವನ್ನು ಎದುರಿಸಲು ಬಲವಾದ ಆಡಳಿತದ ಅಗತ್ಯವಿದೆ. ಈ ಸಾಂಕ್ರಾಮಿಕಕ್ಕೆ ಉತ್ತೇಜನ ನೀಡಿದ ಗೊಂದಲ ಮತ್ತು ಅಸಂಗತತೆಯ ಬದಲು ನಮಗೆ ಸಹಕಾರ ಮತ್ತು ಸಹಯೋಗದ ಅಗತ್ಯವಿದೆ ಎಂದವರು ಹೇಳಿದ್ದಾರೆ.
2020ರಿಂದ ಜಾಗತಿಕವಾಗಿ 42.16 ಕೋಟಿ ಜನ ಕೊರೋನ ಸೋಂಕಿಗೆ ಒಳಪಟ್ಟಿದ್ದು 58.73 ಲಕ್ಷ ಸಾವಿನ ಪ್ರಕರಣ ಸಂಭವಿಸಿದೆ ಎಂದು ಜಾನ್ ಹಾಪ್ಕಿನ್ಸ್ ವಿವಿಯ ವರದಿ ಹೇಳಿದೆ.







