ಹಿಜಾಬ್'ಧಾರಿ ವಿಧ್ಯಾರ್ಥಿನಿಯರಿಗೆ ಶಿಕ್ಷಣ ಪಡೆಯಲು ಜಿಲ್ಲಾಧಿಕಾರಿ ಅವಕಾಶ ಕಲ್ಪಿಸಲಿ: ಉಡುಪಿ ಮುಸ್ಲಿಮ್ ಒಕ್ಕೂಟ
'ಉಚ್ಚನ್ಯಾಯಾಲಯದ ಮಧ್ಯಂತರ ಆದೇಶದಂತೆ ತಡೆಗಳನ್ನು ನಿವಾರಿಸಿ'
ಉಡುಪಿ : ಕಾಲೇಜು ಅಭಿವೃದ್ಧಿ ಸಮಿತಿ ಇರುವ ಪದವಿಪೂರ್ವ ಶಿಕ್ಷಣ ಸಂಸ್ಥೆಗಳಲ್ಲಿ ತರಗತಿಯ ನಡೆಯುತ್ತಿರುವ ಸಂದರ್ಭ ವಿದ್ಯಾರ್ಥಿಗಳು ಹಿಜಾಬ್ ಹಾಗೂ ಇನ್ನಿತರ ಧಾರ್ಮಿಕ ಚಿನ್ನೆಗಳನ್ನು ಧರಿಸುವ ಕುರಿತಂತೆ ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಮಧ್ಯಂತರ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡು ಹಲವು ಶೈಕ್ಷಣಿಕ ಸಂಸ್ಥೆಗಳು ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಿಸುದಕ್ಕೆ ತಡೆಯೊಡ್ಡಿದೆ. ಇದು ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಅಲ್ಲದೆ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಶಿಕ್ಷಣ ಸಂಸ್ಥೆಗಳು ಅಥವಾ ಇನ್ನಿತರರು ವಿದ್ಯಾರ್ಥಿಗಳಿಗೆ ತರಗತಿಯ ಒಳಗೆ ಪ್ರವೇಶಿಸಲು ತಡೆಯೊಡ್ಡಿದರೆ ದೂರು ದಾಖಲಿಸುವಂತೆ ಮೌಖಿಕ ಆದೇಶವನ್ನೂ ನೀಡಿರುತ್ತಾರೆ.
ಆದ್ದರಿಂದ ಈ ಹಿನ್ನೆಲೆಯಲ್ಲಿ ಜಿಲ್ಲಾ ದಂಡಾಧಿಕಾರಿಗಳೂ ಆದ ಜಿಲ್ಲಾಧಿಕಾರಿಗಳು ಆದಷ್ಟು ಬೇಗ ಮಧ್ಯೆ ಪ್ರವೇಶಿಸಿ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶಕ್ಕೆ ಇರುವ ಅನಗತ್ಯ ತಡೆಯನ್ನು ನಿವಾರಿಸಬೇಕಾಗಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಆಗ್ರಹಿಸಿದೆ.
ಈಗಾಗಲೇ ವಿದ್ಯಾರ್ಥಿಗಳು ತಮ್ಮ ಕಲಿಕೆಯ ಪ್ರಮುಖ ಸಮಯವಾದ ಪರೀಕ್ಷೆಗಳ ಹತ್ತಿರದಲ್ಲಿ ಶೈಕ್ಷಣಿಕ ನಷ್ಟ ಅನುಭವಿಸುತ್ತಿದ್ದು ಶೈಕ್ಷಣಿಕ ವರ್ಷಾರಂಭದಲ್ಲಿಯೂ ಕೊರೋನದಿಂದ ಸಮಸ್ಯೆಯನ್ನು ಅನುಭವಿಸಿದ್ದಾರೆ. ಈ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರು ಜಿಲ್ಲಾಧಿಕಾರಿಯವರ ಬಳಿ ಲಖಿತ ಮನವಿಯನ್ನೂ ಮಾಡಿಯಾಗಿದೆ. ಅಲ್ಲದೆ ಜಿಲ್ಲಾಧಿಕಾರಿಯವರು ಕರೆದ ಶಾಂತಿ ಸಭೆಯಲ್ಲಿ ಹಾಜರಿದ್ದ ವಿವಿಧ ಸಂಘಟನೆಗಳ ಮುಖಂಡರು, ರಾಜಕೀಯ ಪಕ್ಷಗಳ ನಾಯಕರು, ಕಾಲೇಜುಗಳ ಜವಾಬ್ದಾರಿ ಸ್ಥಾನದಲ್ಲಿರುವವರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಉಚ್ಚ ನ್ಯಾಯಾಲಯದ ಆದೇಶದಲ್ಲಿರುವ ಅವಕಾಶಗಳನ್ನು ಬಳಸಿ ವಿದ್ಯಾರ್ಥಿಗಳಿಗೆ ತರಗತಿ ಪ್ರವೇಶ ನೀಡಬೇಕಾಗಿತ್ತು. ಆದರೆ ಶಿಕ್ಷಣ ಸಂಸ್ಥೆಗಳು ತದ್ವಿರುದ್ಧವಾದ ನಕಾರಾತ್ಮಕ ಧೋರಣೆಯನ್ನು ತಳೆದಿರುವುದು ಖಂಡನೀಯ ಎಂದು ಮುಸ್ಲಿಮ್ ಒಕ್ಕೂಟದ ಕಾರ್ಯದರ್ಶಿ ಇಸ್ಮಾಯಿಲ್ ಹುಸೈನ್ ಕಟಪಾಡಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಿಜಾಬ್ ಧರಿಸುವುದು ನಮ್ಮ ವಿದ್ಯಾರ್ಥಿನಿಯರ ಸಾಂವಿಧಾನಿಕ ಹಕ್ಕಾಗಿದೆ. ನ್ಯಾಯಾಲಯದ ಮಧ್ಯಂತರ ಆದೇಶದಲ್ಲಿರುವ ಅವಕಾಶದಂತೆ ಆ ಕಾಲೇಜುಗಳಲ್ಲಿ ಹಿಜಾಬ್ ಧರಿಸಿಯೇ ನಮ್ಮ ವಿಧ್ಯಾರ್ಥಿನಿಯರು ಶಿಕ್ಷಣ ಮುಂದುವರಿಸಲಿ, ಆದರೆ ಈಗಿನ ವಿವಾದದ ಹಿನ್ನೆಲೆಯಲ್ಲಿ ಸರಕಾರ ಶಾಂತಿ ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲಿಕ್ಕಾಗಿ 144 ಸೆಕ್ಷನ್ ಜಾರಿ ಮಾಡಿ ನಿಷೇಧಾಜ್ಞೆ ವಿಧಿಸಿದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಉತ್ತಮ ನಡತೆಯನ್ನು ಪ್ರದರ್ಶಿಸಿ ಶಿಸ್ತಿನಿಂದ ಶಿಕ್ಷಣ ಸಂಸ್ಥೆಗಳ ವಠಾರ ಮತ್ತು ತರಗತಿಗಳಲ್ಲಿ ವ್ಯವಹರಿಸಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಕೂಡ ಹೇಳಿದ್ದಾರೆ.







