ಜೆರುಸಲೇಂ: ಸ್ಥಳಾಂತರ ವಿರೋಧಿಸಿ ಪೆಲೆಸ್ತೀನೀಯರ ಬೃಹತ್ ಪ್ರತಿಭಟನೆ

ಜೆರುಸಲೇಂ, ಫೆ.19: ಪೂರ್ವ ಜೆರುಸಲೇಂನ ನೆರೆಯ ಶೇಖ್ ಜರಾಹ್ ಪಟ್ಟಣದಲ್ಲಿ ಯೆಹೂದಿ ವಸಾಹತುಗಾರರಿಂದ ಸ್ಥಳಾಂತರಕ್ಕೆ ಒಳಗಾಗುವ ಭೀತಿ ಎದುರಿಸುತ್ತಿರುವ ಪೆಲೆಸ್ತೀನೀಯರನ್ನು ಬೆಂಬಲಿಸಿ ಶುಕ್ರವಾರ ನಡೆದ ಬೃಹತ್ ಪ್ರತಿಭಟನೆಯನ್ನು ಇಸ್ರೇಲ್ ಪೊಲೀಸರ ಅಶ್ವದಳ ಬಲಪ್ರಯೋಗಿಸಿ ಚದುರಿಸಿದೆ ಎಂದು ವರದಿಯಾಗಿದೆ.
ನಗರದ ರಸ್ತೆಯಲ್ಲಿ ಒಟ್ಟುಸೇರಿದ ನೂರಾರು ಪ್ರತಿಭಟನಾಕಾರರು ರಸ್ತೆಯಲ್ಲೇ ಪ್ರಾರ್ಥನೆ ನೆರವೇರಿಸಿದರು. ಇನ್ನಷ್ಟು ಪ್ರತಿಭಟನಾಕಾರರು ಅವರನ್ನು ಸೇರಿಕೊಂಡಿದ್ದು ರಸ್ತೆ ತಡೆ ನಡೆಸಿದರು. ಪ್ರತಿಭಟನೆಯನ್ನು ಚದುರಿಸಲು ಇಸ್ರೇಲ್‌ನ ಗಡಿಭದ್ರತಾ ಪಡೆಯವರು ಬಲಪ್ರಯೋಗಿಸಿ ಅವರನ್ನು ಅಟ್ಟಿಸಿಕೊಂಡು ಹೋದರು ಎಂದು ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. ಪ್ರತಿಭಟನಾಕಾರರು ಗಲಭೆ ಎಬ್ಬಿಸಿ ದೊಂಬಿ ನಡೆಸಿದ್ದು ಪೊಲೀಸರ ಮಾಹಿತಿಗೆ ಕಿವಿಗೊಡಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಇಬ್ಬರು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿರುವುದಾಗಿ ಮಾಧ್ಯಮ ಪ್ರತಿನಿಧಿಗಳು ವರದಿ ಮಾಡಿದ್ದಾರೆ. ಆದರೆ ಇದನ್ನು ಪೊಲೀಸರು ನಿರಾಕರಿಸಿದ್ದಾರೆ.
ಯೆಹೂದಿ ವಸಾಹತುಗಾರರಿಂದ ಸ್ಥಳಾಂತರ ಭೀತಿಗೆ ಒಳಗಾಗಿರುವ ಹಲವು ಪೆಲೆಸ್ತೀನ್ ಕುಟುಂಬಗಳು ಪ್ರತಿಭಟನೆ ನಡೆಸುತ್ತಿರುವುದರಿಂದ ಶೇಖ್ ಜರಾಹ್ ನಗರದಲ್ಲಿ ಕಳೆದ ವರ್ಷದಿಂದ ಉದ್ವಿಗ್ನತೆ ನೆಲೆಸಿದೆ. 1967ರಲ್ಲಿ ಜೋರ್ಡಾನ್ನಿಂದ ಪೂರ್ವ ಜೆರುಸಲೇಂ ಅನ್ನು ಇಸ್ರೇಲ್ ವಶಪಡಿಸಿಕೊಂಡಿತ್ತು. ಈ ಉಪಕ್ರಮವನ್ನು ಬಹುತೇಕ ಅಂತರಾಷ್ಟ್ರೀಯ ಸಮುದಾಯ ವಿರೋಧಿಸಿತ್ತು. ಆಕ್ರಮಿತ ಪೂರ್ವ ಜೆರುಸಲೇಂನಲ್ಲಿ 2 ಲಕ್ಷಕ್ಕೂ ಅಧಿಕ ಇಸ್ರೇಲ್ ಪ್ರಜೆಗಳು ವಾಸಿಸುತ್ತಿದ್ದಾರೆ.
ಶೇಖ್ ಜರಾಹ್ನಲ್ಲಿ ಪೆಲೆಸ್ತೀನೀಯರ ಮೇಲಿನ ಹಲ್ಲೆಯನ್ನು ಪೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಅವರ ವಕ್ತಾರ ನಬಿಲ್ ಅಬು ರುಡೀನಾ ಖಂಡಿಸಿರುವುದಾಗಿ ವಫಾ ಸುದ್ಧಿಸಂಸ್ಥೆ ವರದಿ ಮಾಡಿದೆ. ನಮ್ಮ ಪೆಲೆಸ್ತೀನಿಯನ್ ಪ್ರಜೆಗಳ ವಿರುದ್ಧ ಎಲ್ಲಾ ಆಕ್ರಮಿತ ಪೆಲೆಸ್ತೀನಿಯನ್ ಪ್ರದೇಶದಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳ ಮುಂದುವರಿದ ಭಾಗ ಇದಾಗಿದೆ. ಆದರೆ ಪೂರ್ವ ಜೆರುಸಲೇಂ ರಾಜಧಾನಿಯಾಗಿರುವ ಸ್ವತಂತ್ರ ದೇಶ ಸ್ಥಾಪನೆಯ ತಮ್ಮ ಗುರಿಯಿಂದ ನಮ್ಮ ಜನತೆ ವಿಮುಖರಾಗುವುದಿಲ್ಲ ಎಂದು ರುಡೀನಾ ಹೇಳಿದ್ದಾರೆ. ಈ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಗೊಳ್ಳಲು ಇಸ್ರೇಲ್ ಸರಕಾರ ಕಾರಣವಾಗಿದೆ ಎಂದವರು ಖಂಡಿಸಿದ್ದಾರೆ.
ಆಕ್ರಮಿತ ಪಶ್ಚಿಮ ದಂಡೆಯ ದಕ್ಷಿಣ ಮತ್ತು ಉತ್ತರ ಪ್ರಾಂತದಲ್ಲೂ ಪೆಲೆಸ್ತೀನೀಯರು ಇಸ್ರೇಲ್ ಪಡೆಯೊಂದಿಗೆ ಘರ್ಷಣೆಗೆ ಇಳಿದರು. ಪೂರ್ವದ ಬೈತಾ ಗ್ರಾಮದಲ್ಲಿ ಸ್ಥಾಪಿಸಿರುವ ಇಸ್ರೇಲ್ ಸೇನೆಯ ಹೊರಠಾಣೆಯನ್ನು ಪೆಲೆಸ್ತೀನೀಯರು ವಿರೋಧಿಸಿದಾಗ ಅವರನ್ನು ಸೇನೆ ಚದುರಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಕಾರ್ಯಾಚರಣೆ ಸಂದರ್ಭ 23 ಪೆಲೆಸ್ತೀನೀಯರು ಗಾಯಗೊಂಡರು. ಇಸ್ರೇಲ್ ಪಡೆ ಹಾರಿಸಿದ ರಬ್ಬರ್ ಲೇಪಿತ ಬುಲೆಟ್ನಿಂದ ಎಎಫ್ಪಿ ಫೋಟೋಗ್ರಾಫರ್ ಕೂಡಾ ಗಾಯಗೊಂಡರು ಎಂದು ಮಾಧ್ಯಮಗಳು ವರದಿ ಮಾಡಿವೆ. ಶೇಖ್ ಜರಾಹ್ನಲ್ಲಿ ಕೆಂಪು ಗೆರೆ ಉಲ್ಲಂಘಿಸುವುದು ಮುಂದಿನ ಸ್ಫೋಟಕ್ಕೆ ವಾತಾವರಣ ಸಿದ್ಧಗೊಳಿಸಬಹುದು ಎಂದು ಗಾಝಾ ಪಟ್ಟಿಯಲ್ಲಿ ಆಡಳಿತ ನಡೆಸುತ್ತಿರುವ ಹಮಾಸ್ (ಪೆಲೆಸ್ತೀನ್ ಗುಂಪು) ಎಚ್ಚರಿಸಿದೆ.







