ಕಡತ ವಿಲೇವಾರಿ ಪರಿಕಲ್ಪನೆ ರಾಜ್ಯಕ್ಕೆ ವಿಸ್ತರಣೆ : ಸಚಿವ ಆರ್. ಅಶೋಕ್

ಕಾರ್ಕಳ: ಕಾರ್ಕಳ ಹೆಬ್ರಿ ತಾಲೂಕಿನಲ್ಲಿ ನಡೆದ ಕಡತ ವಿಲೇವಾರಿ ಸಪ್ತಾಹವನ್ನು ರಾಜ್ಯಕ್ಕೆ ವಿಸ್ತರಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಅವರು ಫೆ. 19ರಂದು ಕುಕ್ಕುಂದೂರು ಗ್ರಾಮ ಪಂಚಾಯತ್ ಮುಂಭಾಗದ ಮೈದಾನದಲ್ಲಿ ಕಂದಾಯ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾರ್ಕಳದಲ್ಲಿ ಅತ್ಯಂತ ಯಶಸ್ವಿಯಾಗಿ ಕಡತ ವಿಲೇವಾರಿ ಪ್ರಕ್ರಿಯೆ ನಡೆದಿದೆ. ಇದರಿಂದ ಸಾವಿರಾರು ಮಂದಿಗೆ ಪ್ರಯೋಜನವಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಸಾಗಲಿದೆ. ತಿಂಗಳಲ್ಲಿ ಒಂದು ದಿನ ಈ ಕಾರ್ಯಕ್ರಮ ನಡೆಯಲಿದ್ದು, ಅಂದು ಅಧಿಕಾರಿಗಳು ಕಡತಗಳನ್ನು ಸಂಗ್ರಹಿಸಿ ಕಚೇರಿಗೆ ತರುವ ಬದಲು ಅಲ್ಲೇ ವಿಲೇವಾರಿಯಾಗಲಿದೆ ಎಂದರು.
ರಾಜ್ಯದಲ್ಲಿ ಮಧ್ಯವರ್ತಿಗಳು ಸೇರಿದಂತೆ ಅನರ್ಹರಿಗೂ ಪಿಂಚಣಿ ದೊರೆಯುತ್ತಿತ್ತು. ಇದರಿಂದ ರಾಜ್ಯದ ಬೊಕ್ಕಸಕ್ಕೆ ೪ ಸಾವಿರ ಕೋಟಿ ಹೊರೆಯಾಗಿತ್ತು. ಅದನ್ನೀಗ ನಾನು ಸಂಪೂರ್ಣವಾಗಿ ಕಡಿತಗೊಳಿಸಿ ಅರ್ಹವಾಗಿ ದೊರೆಯಬೇಕಾದ 35 ಸಾವಿರ ಹೊಸಬರಿಗೆ ಪಿಂಚಣಿ ದೊರೆಯುವಂತೆ ಮಾಡಿದ್ದೇನೆ ಎಂದು ಅಶೋಕ್ ತಿಳಿಸಿದರು.
ಸಮಾಜದಲ್ಲಿ ತುಳಿತಕ್ಕೊಳಗಾದವರಿಗೆ ಎಲ್ಲಿಯೂ ಅನ್ಯಾಯವಾಗಬಾರದು. ಅಧಿಕಾರಿಗಳಿಂದ ಅಂತಹವರಿಗೆ ತೊಂದರೆಯಾದಲ್ಲಿ ಸುಮ್ಮನಿರಲ್ಲ ಎಂದು ಅಶೋಕ್ ಅಧಿಕಾರಿಗಳಿಗೆ ಎಚ್ಚರಿಸಿದರು.
ಶಾಸಕರಾಗಿ, ಸಚಿವರಾಗಿ ಸುನಿಲ್ ಕುಮಾರ್ ಬಹಳ ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ಷೇತ್ರದ ಜನರಿಗಾಗಿ ಹಲವಾರು ಯೋಜನೆಗಳನ್ನು ತಂದಿದ್ದಾರೆ. ಪವರ್ ಮಿನಿಸ್ಟರ್ ಸುನಿಲ್ ಕುಮಾರ್ ಅವರು ರಿಯಲ್ ಪವರ್ ಎಂದು ಆರ್. ಅಶೋಕ್ ಇದೇ ವೇಳೆ ಬಣ್ಣಿಸಿದರು.
ಉಡುಪಿ ಜಿಲ್ಲೆಯಲ್ಲಿ ಡೀಮ್ಟ್ ಫಾರೆಸ್ಟ್, ಕುಮ್ಕಿಗೆ ಸಂಬಂಧಿಸಿದ ಸಮಸ್ಯೆಯನ್ನು ಕೂಡಲೇ ಬಗೆಹರಿಸುತ್ತೇವೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ಗೆ ಅಫಿದವಿತ್ ಸಲ್ಲಿಸಲಾಗಿದೆ. ಇದರಿಂದ 34918 ಹೆಕ್ಟೇರ್ ಪ್ರದೇಶ ಕೃಷಿಕರಿಗೆ ದೊರೆಯಲಿದೆ ಎಂದು ಅಶೋಕ್ ತಿಳಿಸಿದರು.
ಅಧಿಕಾರಿ ಪರಿಶ್ರಮದಿಂದಾಗಿ ಯಶಸ್ವಿ - ಸುನಿಲ್ ಕುಮಾರ್
ಎಲ್ಲ ಅಧಿಕಾರಿಗಳ ಪರಿಶ್ರಮ, ಸಹಕಾರದಿಂದಾಗಿ ಕಡತ ವಿಲೇವಾರಿ ಪರಿಕಲ್ಪನೆ ಯಶಸ್ವಿಯಾಗಿದೆ. ಕಳೆದೆರಡು ವರ್ಷಗಳಿಂದ ಕೊರೊನಾ ಸಾಂಕ್ರಾಮಿಕದಿಂದ ಜನಜೀವನ ಅಸ್ತವ್ಯಸ್ಥವಾಗಿತ್ತು. ಆಗ ಆಡಳಿತದ ಪೂರ್ಣ ಗಮನ ಆರೋಗ್ಯದ ಮೇಲಿತ್ತು. ಹೀಗಾಗಿ ಅರ್ಜಿಗಳೆಲ್ಲಾ ಬಾಕಿ ಉಳಿಯುವಂತಾಯಿತು. ಇದನ್ನು ಅರ್ಥೈಸಿಕೊಂಡು ಕಟ್ಟ ಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯ ಸಿಗಬೇಕೆಂಬ ನಿಟ್ಟಿನಲ್ಲಿ ಕಡತ ವಿಲೇವಾರಿ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ಸುನಿಲ್ ಕುಮಾರ್ ಹೇಳಿದರು.
11 ಸಾವಿರ ಕಡತ ವಿಲೇವಾರಿ
ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಕಂದಾಯ ಸೇರಿದಂತೆ ಸರಕಾರದ 33 ಇಲಾಖೆಗಳ ಸುಮಾರು ೧೩, ೭೦೦ ಕಡತಗಳು ಪೆಂಡಿಂಗ್ ನಲ್ಲಿತ್ತು. ಇದರಲ್ಲಿ ೧೧ ಸಾವಿರ ಕಡತಗಳು ಪೂರ್ಣಗೊಂಡಿದೆ ಎಂದು ಸುನಿಲ್ ಕುಮಾರ್ ಹೇಳಿದರು.
ಪ್ರತಿ ಮನೆಗೊಂದು ಯೋಜನೆ
2 ವರ್ಷಗಳ ಹಿಂದೆ ಪ್ರತಿ ಮನೆಗೊಂದು ಸರಕಾರದ ಯೋಜನೆ ದೊರೆಯಲಿದೆ ಎಂದು ಹೇಳಿದ್ದೆ. ಇದೀಗ ಆ ಕಾರ್ಯಕ್ಕೆ ಚಾಲನೆ ದೊರೆತಿದೆ. ಏಕಕಾಲದಲ್ಲಿ ತಾಲೂಕಿನ 4367 ಕುಟುಂಬಗಳಿಗೆ ಸೌಲಭ್ಯ ನೀಡಲಾಗಿದೆ. ಕಡತ ವಿಲೇವಾರಿ ಸಪ್ತಾಹ ಇಲ್ಲಿಗೆ ಮುಗಿಯುವುದಿಲ್ಲ. ಇದಕ್ಕೆ ಮತ್ತಷ್ಟು ಚುರುಕುಗೊಳಿಸುವಂತಹ ಪ್ರಯತ್ನ ಮಾಡಲಾಗುವುದು ಎಂದು ಸುನಿಲ್ ಕುಮಾರ್ ಹೇಳಿದರು.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್, ಜಿ.ಪಂ. ಸಿಇಒ ನವೀನ್ ಭಟ್, ಕಾರ್ಕಳ ಪುರಸಭಾ ಅಧ್ಯಕ್ಷೆ ಸುಮಾ ಕೇಶವ್, ಕುಕ್ಕುಂದೂರು ಪಂಚಾಯತ್ ಅಧ್ಯಕ್ಷೆ ಶಶಿಮಣಿ ಸಂಪತ್, ಎಪಿಎಂಸಿ ಅಧ್ಯಕ್ಷ ರತ್ನಾಕರ ಹೆಗ್ಡೆ, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಗೇರು ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಎಡಿಸಿ ಸದಾಶಿವ ಪ್ರಭು, ಕುಂದಾಪುರ ಉಪವಿಭಾಗ ಸಹಾಯಕ ಆಯುಕ್ತ ಕೆ. ರಾಜು ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಹಶೀಲ್ದಾರ್ ಪುರಂದರ ಸ್ವಾಗತಿಸಿ, ಯೋಗೀಶ್ ಕಿಣಿ ನಾಡಗೀತೆ ಹಾಡಿದರು. ಶಿಕ್ಷಕಿ ಸಂಗೀತಾ ನಿರೂಪಿಸಿದರು.








