ಕೋ.ಚೆನ್ನಬಸಪ್ಪರ ಜನ್ಮ ಶತಮಾನೋತ್ಸವನ್ನು ಸರಕಾರವೇ ಆಚರಿಸಬೇಕು: ಸಿಎಂಗೆ ಸಿದ್ದರಾಮಯ್ಯ ಪತ್ರ

ಸಿದ್ದರಾಮಯ್ಯ
ಬೆಂಗಳೂರು: ‘ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಸಾಹಿತಿ, ರಾಜ್ಯದ ಘನತೆಯನ್ನು ಹೆಚ್ಚಿಸಿದ ಕೋ.ಚೆನ್ನಬಸಪ್ಪ ಅವರ ಜನ್ಮ ಶತಮಾನೋತ್ಸವವನ್ನು ಸರಕಾರವೇ ಮುಂದೆ ನಿಂತು ಆಚರಿಸುವುದು ಕನ್ನಡ ನೆಲ ಮೂಲದ ಜ್ಞಾನ ಪರಂಪರೆಗೆ ಸಲ್ಲಿಸುವ ಗೌರವ. ಹೀಗಾಗಿ ಕೋ.ಚೆನ್ನಬಸಪ್ಪ ಅವರ ಜನ್ಮ ಶತಮಾನೋತ್ಸವ ಸರಕಾರವೇ ಆಚರಿಸಬೇಕು' ಎಂದು ಆಗ್ರಹಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
‘ಕನ್ನಡ ಜ್ಞಾನ ಪರಂಪರೆಯ ಮೇರು ವ್ಯಕ್ತಿತ್ವ ಮತ್ತು ಕನ್ನಡದ ವಿವೇಕವನ್ನು ತಮ್ಮ ಬರಹ-ಭಾಷಣಗಳ ಮೂಲಕ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ವಿಸ್ತರಿಸಿದ ಚೆನ್ನಬಸಪ್ಪ ಅವರು 97 ವರ್ಷಗಳ ಕಾಲ ನಮ್ಮ ಜತೆಗಿದ್ದು 2019ರ ಫೆ.22ರಂದು ದೈವಾಧೀನರಾಗಿದ್ದಾರೆ. 2022ರ ಮಾರ್ಚ್ 1ಕ್ಕೆ ಚೆನ್ನಬಸಪ್ಪ ಅವರ ಜನ್ಮ ಶತಮಾನೋತ್ಸವವಿದ್ದು, ಸರಕಾರವೇ ಇವರ ಜನ್ಮ ಶತಮಾನೋತ್ಸವವನ್ನು ಆಚರಿಸುವುದು ಅರ್ಥಪೂರ್ಣ, ಔಚಿತ್ಯಪೂರ್ಣವೂ ಆಗಿರುತ್ತದೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
‘ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಸಣ್ಣ ಗ್ರಾಮ ಮಾಕಾಮಡಗುವಿನಲ್ಲಿ 1922ರ ಫೆ.27ರಂದು ಜನಿಸಿ ವಿದ್ಯಾರ್ಥಿ ದೆಸೆಯಲ್ಲೇ ಮಹಾತ್ಮಗಾಂಧಿ ಅವರ ವಿಚಾರಗಳಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಹೋರಾಟಕ್ಕೂ ತಮ್ಮನ್ನು ಅರ್ಪಿಸಿಕೊಂಡು ‘ಬ್ರಿಟಿಷರೆ ಭಾರತ ಬಿಟ್ಟು ತೊಲಗಿ’ ಆಂದೋಲನದಲ್ಲಿ ಪಾಲ್ಗೊಂಡು ಜೈಲು ವಾಸ ಅನುಭವಿಸಿದ್ದರು. ಜೈಲಿನಿಂದ ಬಿಡುಗಡೆಗೊಂಡು ಕಾನೂನು ಪದವಿ ಪಡೆದು ವಕೀಲ ವೃತ್ತಿ ಆರಂಭಿಸಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರೂ ಆಗಿದ್ದರು.
ಹಾಗೆಯೇ ‘ರೈತ' ಪತ್ರಿಕೆಯ ಸಂಪಾದಕರೂ ಆಗಿ, ಅಂಕಣಕಾರರೂ ಆಗಿ ತಮ್ಮ ಬರಹಗಳ ಮೂಲಕ ದೇಶದ ಕಾನೂನು ವ್ಯವಸ್ಥೆ, ಸಂವಿಧಾನದ ಮಹತ್ವವನ್ನು ಮುಂದಿನ ತಲೆಮಾರಿನ ಓದುಗರಿಗೆ ವಿಸ್ತರಿಸಿದ್ದರು. ಸ್ವಾತಂತ್ರ್ಯಾ ನಂತರದಲ್ಲಿ ತಮ್ಮ ಸಾಹಿತ್ಯ ಕೃಷಿಯನ್ನು ಹೆಚ್ಚಿಸಿ ಕಾದಂಬರಿ, ಅನುವಾದ ಸೇರಿ ನಾನಾ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ಐತಿಹಾಸಿಕ-ಚಾರಿತ್ರಿಕ-ರಾಜಕಾರಣ ಮತ್ತು ಸ್ವಾತಂತ್ರ್ಯ ಹೋರಾಟದ ಸಂಗತಿಗಳನ್ನೂ ಸಾಹಿತ್ಯವಾಗಿಸಿದ್ದಾರೆ.
ಎಂಟು ಕಾದಂಬರಿ, ಎಂಟು ಜೀವನ ಚರಿತ್ರೆ, ಹಲವು ಅನುವಾದಗಳು ಸೇರಿ 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸ.ನ ಮಾಳವಾಡ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ವಿಶ್ವ ಮಾನವ ಪ್ರಶಸ್ತಿ ಸೇರಿ ಹತ್ತಾರು ಪ್ರತಿಷ್ಟಿತ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಹೀಗಾಗಿ ಇಂಹತ ಮೇರು ವ್ಯಕ್ತಿತ್ವದ ಕೋ.ಚೆನ್ನಬಸವಪ್ಪ ಅವರ ಜನ್ಮ ಶತಮಾನೋತ್ಸವವನ್ನು ಸರಕಾರವೇ ಆಚರಿಸಬೇಕು ಎಂದು ಸಿದ್ದರಾಮಯ್ಯ ಪತ್ರದಲ್ಲಿ ಮನವಿ ಮಾಡಿದ್ದಾರೆ.







