ಉಕ್ರೇನ್ ಬಿಕ್ಕಟ್ಟು: ಭಾರತೀಯ ವಿದ್ಯಾರ್ಥಿಗಳಿಗೆ ಆತಂಕ
ಕೀವ್, ಫೆ.19: ಉಕ್ರೇನ್ ಮೇಲೆ ರಶ್ಯಾದ ಆಕ್ರಮಣದ ಭೀತಿಯ ಕಾರ್ಮೋಡ ದಟ್ಟವಾಗುತ್ತಿರುವಂತೆಯೇ, ಆ ದೇಶದಲ್ಲಿ ಅಧ್ಯಯನ ನಡೆಸುತ್ತಿರುವ ಸುಮಾರು 20,000 ಭಾರತೀಯ ವಿದ್ಯಾರ್ಥಿಗಳು ಸಂದಿಗ್ಧತೆಗೆ ಸಿಲುಕಿರುವುದಾಗಿ ವರದಿಯಾಗಿದೆ.
ಉಕ್ರೇನ್ನಲ್ಲಿನ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ದೈನಂದಿನ ತರಗತಿ ಮುಂದುವರಿಯಲಿದೆಯೇ ಅಥವಾ ಶಾಲೆ, ಕಾಲೇಜು ಬಂದ್ ಆಗಿ ಆನ್ಲೈನ್ ತರಗತಿ ಮುಂದುವರಿಯುತ್ತದೆಯೇ ಎಂಬುದು ಖಾತರಿಯಾಗದೆ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ಒಂದು ವೇಳೆ ಭಾರತಕ್ಕೆ ಹಿಂದಿರುಗುವ ಪರಿಸ್ಥಿತಿ ಬಂದರೆ ವಿಮಾನ ಪ್ರಯಾಣಕ್ಕೆ ಬೃಹತ್ ಮೊತ್ತ ಪಾವತಿಸಬೇಕೆಂಬ ಆತಂಕವೂ ವಿದ್ಯಾರ್ಥಿಗಳಲ್ಲಿದೆ. ನಾವು ಉಕ್ರೇನ್ನಲ್ಲಿನ ಭಾರತೀಯ ರಾಯಭಾರ ಕಚೇರಿ, ಸ್ಥಳೀಯ ಆಡಳಿತ ಮತ್ತು ಕಾಲೇಜು ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಕಳೆದೊಂದು ವಾರದಿಂದ ಇಲ್ಲಿನ ವಾತಾವರಣ ಉದ್ವಿಗ್ನವಾಗಿದ್ದು ಮುಂದೇನು ಮಾಡಬೇಕೆಂದು ಯಾರೂ ಸ್ಪಷ್ಟ ಸಲಹೆ ನೀಡುತ್ತಿಲ್ಲ. ತರಗತಿಯಲ್ಲಿ ಪಾಠ ಪ್ರವಚನ ಮುಂದುವರಿಯಲಿದೆಯೇ, ಅಥವಾ ಒಂದು ವೇಳೆ ಭಾರತಕ್ಕೆ ಹಿಂದಿರುಗಿದರೆ ತಮ್ಮನ್ನು ಗೈರುಹಾಜರೆಂದು ಪರಿಗಣಿಸಲಾಗುವುದೇ ಎಂಬ ಯಾವುದೇ ಮಾಹಿತಿಯಿಲ್ಲ . ಒಮ್ಮೆ ಭಾರತಕ್ಕೆ ಬಂದುಹೋಗುವ ವಿಮಾನ ಟಿಕೆಟ್ ದರ ಒಂದು ಸೆಮಿಸ್ಟರ್ ಅವಧಿಯ ಶುಲ್ಕದ 50%ದಷ್ಟು ಆಗುತ್ತದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉಕ್ರೇನ್ನ ಶಿಕ್ಷಣ ಸಚಿವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹಾರದ ಮಾರ್ಗ ರೂಪಿಸಲಾಗುವುದು ಎಂದು ಭಾರತೀಯ ರಾಯಭಾರ ಕಚೇರಿ ಹೇಳಿಕೆ ನೀಡಿದ್ದರೂ, ಹಲವಾರು ವಿದ್ಯಾರ್ಥಿಗಳು ಭಾರತಕ್ಕೆ ಮರಳಲು ಬಯಸುತ್ತಿದ್ದಾರೆ ಎಂದು ಮಾಧ್ಯಮಗಳು ರದಿ ಮಾಡಿವೆ.





