ಛತ್ರಪತಿ ಶಿವಾಜಿ ಭಾರತದ ಸ್ವಾಭಿಮಾನದ ಪ್ರತೀಕ: ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು, ಫೆ. 19: ‘ಛತ್ರಪತಿ ಶಿವಾಜಿ ಮಹಾರಾಜರು ಭಾರತ ದೇಶದ ಸ್ವಾಭಿಮಾನ ಹಾಗೂ ಭಾರತದ ಏಕತೆ, ಅಖಂಡತೆಯ ಪ್ರತೀಕ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಣ್ಣಿಸಿದ್ದಾರೆ.
ಶನಿವಾರ ಕರ್ನಾಟಕ ಮರಾಠ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಹಿನ್ನೆಲೆಯಲ್ಲಿ ಇಲ್ಲಿನ ಸದಾಶಿವನಗರ ವೃತ್ತದಲ್ಲಿನ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ‘ಮೊಘಲ್ ಸಾಮ್ರಾಜ್ಯದ ವಿರುದ್ಧ ಸಮರ ಸಾರುವ ಮೂಲಕ ಇಡೀ ದೇಶವನ್ನು ಛತ್ರಪತಿ ಶಿವಾಜಿ ಮಹಾರಾಜರು ರಕ್ಷಣೆ ಮಾಡಿದರು. ಅವರ ದಿಟ್ಟತನದಿಂದ ಭಾರತದಲ್ಲಿ ಹಿಂದೂ ಸಾಮ್ರಾಜ್ಯ ಗಟ್ಟಿಯಾಗಿ ಉಳಿಯಲು ಸಾಧ್ಯವಾಯಿತು. ಸಮಾಜದ ಎಲ್ಲ ವರ್ಗದ ಜನರನ್ನೂ ಸಮಾನವಾಗಿ ನೋಡಿದ ಶಿವಾಜಿಯವರನ್ನು ಪ್ರತಿಯೊಬ್ಬ ಭಾರತೀಯನೂ ಪೂಜನೀಯ ಭಾವದಿಂದ ನೋಡುತ್ತಾನೆ. ಅವರ ಹೆಸರಿನಲ್ಲಿಯೇ ಸ್ಫೂರ್ತಿ, ಶಕ್ತಿ ಹಾಗೂ ಪ್ರೇರಣೆ ನೀಡುತ್ತದೆ. ಶಿವಾಜಿ ಮಹಾರಾಜರ ಅಭಿಮಾನದ ಸಂಕೇತವಾಗಿ ಜನ್ಮದಿನವನ್ನು ಆಚರಿಸಲಾಗಿದೆ' ಎಂದು ತಿಳಿಸಿದರು.
‘ಮುಂಬರುವ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಶಿವಾಜಿ ಮಹಾರಾಜರ ತತ್ವಾದರ್ಶಗಳನ್ನು ಹಾಗೂ ರಾಷ್ಟ್ರಭಕ್ತಿಯ ಭಾವನೆ ತುಂಬುವ ಕೆಲಸವನ್ನು ಮಾಡಲಾಗುವುದು. ಮರಾಠ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಲಾಗಿದ್ದು, ಮಾಣಿಕ್ ರಾವ್ ಮೂಳೆಯವರನ್ನು ಅಧ್ಯಕ್ಷರನ್ನಾಗಿ ಮಾಡಲು ತೀರ್ಮಾನಿಸಲಾಗಿದೆ. ಧ್ವನಿಯಿಲ್ಲದ ದುರ್ಬಲ ವರ್ಗಗಳನ್ನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿಗೊಳಿಸುವುದು ಸರಕಾರದ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಹೈಕೋರ್ಟ್ ಆದೇಶದ ಪರಿಪಾಲನೆ ಎಲ್ಲರ ಕರ್ತವ್ಯ: ‘ಹಿಜಾಬ್(ಸ್ಕಾರ್ಫ್) ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೇಲೆ ಎಫ್‍ಐಆರ್ ದಾಖಲಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ಹೈಕೋರ್ಟ್ ಮಧ್ಯಂತರ ಆದೇಶದ ಪರಿಪಾಲನೆ ಎಲ್ಲರ ಕರ್ತವ್ಯ. ಹೊರಗಿನವರಿಂದ ಎಲ್ಲ ಸಮಸ್ಯೆಗಳು ಉಂಟಾಗುತ್ತಿದೆ. ಹೊರಗಿನವರು ಅನಗತ್ಯ ಪ್ರವೇಶದಿಂದಾಗಿ ಎಲ್ಲ ಗೊಂದಲಗಳು ಸೃಷ್ಟಿಯಾಗುತ್ತಿವೆ. ಶಾಲಾ-ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳೇ ಈ ವಿಷಯವನ್ನು ಬಗೆಹರಿಸಿಕೊಳ್ಳುತ್ತಾರೆ. ವಾತಾವರಣ ತಿಳಿಯಾಗಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳ ಎಲ್ಲ ಮಾಹಿತಿಗಳನ್ನು ಪಡೆಯುತ್ತಿದ್ದೇನೆ' ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸಮಾರಂಭದಲ್ಲಿ ಗೋಸಾಯಿ ಮಹಾಸಂಸ್ಥಾನ ಮಠದ ಮಂಜುನಾಥ ಭಾರತಿ ಸ್ವಾಮೀಜಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ, ಮಾಜಿ ಸಚಿವ ಪಿಜಿಆರ್ ಸಿಂಧ್ಯಾ, ಮಾಜಿ ಶಾಸಕ ಎಂ.ಜಿ.ಮೂಳೆ, ಮರಾಠಾ ಸಮುದಾಯದ ಮುಖಂಡ ಮನೋಜ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







