ಜ್ಯೋತಿಬಾ ಫುಲೆ ಮನಕುಲದ ಬೆಳಕು: ಜಯನ್ ಮಲ್ಪೆ

ಮಲ್ಪೆ, ಫೆ.20: ಭಾರತದ ಭೂಮಿಯಲ್ಲಿ ಒಂದು ಧರ್ಮದ ಕಟ್ಟುಪಾಡಿ ನೊಳಗೆ ದಲಿತರನ್ನು ಅಮಾನವೀಯವಾಗಿ ನೋಡಿದ ಆಧಾರ್ಮಿಕ ಬರ್ಬತೆಯ ವಿರುದ್ಧ ಹೋರಾಡಿದ ಜ್ಯೋತಿಬಾ ಫುಲೆ, ಅಂಧಕಾರದ ಸಮಾಜಕ್ಕೆ ಮನು ಕುಲದ ಬೆಳಕು ನೀಡಿದರು ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.
ಅಂಬೇಡ್ಕರ್ ಯುವಸೇನೆ ಜಿಲ್ಲಾ ಘಟಕದ ವತಿಯಿಂದ ರವಿವಾರ ಮಲ್ಪೆ ಗಾಂಧಿ ಶತಾಬ್ಧಿ ಶಾಲಾ ವಠಾರದಲ್ಲಿ ಆಯೋಜಿಸಲಾದ ಜ್ಯೋತಿಬಾ ಫುಲೆಯ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಅಂದು ಧರ್ಮ ಶಾಸ್ತ್ರಕ್ಕೆ ಸಿಲುಕಿದ ಮಹಿಳೆಯರ ಬದುಕು ಅಮಾನುಷ ವಾಗಿತ್ತು. ಸ್ತ್ರೀಯರನ್ನು ಭೋಗದ ವಸ್ತುವಾಗಿಸಿ ಮಕ್ಕಳು ಹೆರುವ ಯಂತ್ರವಾಗಿಸಿ ಪುರುಷನ ಆಸೆಗಳನ್ನು ಪೂರೈಸುವ ದಾಸಳಾಗಿಸಿ, ಪುರುಷ ಸೇವೆಗಾಗಿಯೇ ಹುಟ್ಟಿದವಳು ಎಂದು ಶಾಸ್ತ್ರ ಮಾಡಿದವರಿಗೆ ಫುಲೆ, ಸ್ತ್ರಿಯರಿಗೆ ವಿದ್ಯೆಯನ್ನು ಕಲಿಸಿ ಮರ್ಮಘಾತ ಮಾಡಿದರು ಎಂದರು.
ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್ ಮಾತನಾಡಿ ಸಮಾಜದ ಪರಿವರ್ತನೆಯಲ್ಲಿ ತೊಡಗಿಸಿಕೊಂಡ ಜ್ಯೋತಿ ಬಾಪುಲೆರವರು ದೇವರು ಧರ್ಮದ ಹೆಸರಿನಲ್ಲಿ ಬಹುಜನರನ್ನು ಶೋಷಿಸುವ ಕುತಂತ್ರವನ್ನು ಬಯಲಿಗೆಳೆದು ಮಾನವೀಯ ಧರ್ಮವನ್ನು ಸ್ಥಾಪಿಸಲು ಪ್ರಯತ್ನಿಸಿದವರು ಎಂದು ತಿಳಿಸಿದರು.
ವೇದಿಕೆಯಲ್ಲಿ ಹಿರಿಯ ದಲಿತ ಮುಖಂಡ ಗಣೇಶ್ ನೆರ್ಗಿ, ಅಂಬೇಡ್ಕರ್ ಯುವಸೇನೆಯ ಮುಖಂಡರಾದ ಸತೀಶ್ ಕಪ್ಪೆಟ್ಟು, ಗುಣವಂತ ತೊಟ್ಟಂ, ರಾಮೋಜಿ ಅಮೀನ್ ಬಲರಾಮನಗರ, ದೀಪಕ್ ಜಿ.ಧನ್‌ರಾಜ್, ವಸಂತ ಅಂಬಲಪಾಡಿ, ಬೌದ್ಧ ಧರ್ಮದ ಸುಶೀಲ್ ಜಿ.ಕುಮಾರ್, ಅರುಣ್ ಸುವರ್ಣ, ಸಂತೋಷ್ ಕಪ್ಪೆಟ್ಟು, ದೀಪಕ್, ಎಂ.ವಿ.ಪ್ರಸಾದ್ ನೆರ್ಗಿ, ಮಂಜುನಾಥ ಕಪ್ಪೆಟ್ಟು ಮೊದಲಾದವರು ಉಪಸ್ಥಿತರಿದ್ದರು.
ಯುವಸೇನೆಯ ದಯಾನಂದ ಕಪ್ಪೆಟ್ಟು ಸ್ವಾಗತಿಸಿದರು. ಭಗವಾನ್ ಮಲ್ಪೆ ವಂದಿಸಿದರು. ಗ್ಯಾಬ್ರಿಯಲ್ ಕಾರ್ಯಕ್ರಮ ನಿರೂಪಿಸಿದರು.







