ಬಾಕಿ ಕಡತಗಳ ವಿಲೇವಾರಿಗೆ ಚಿಂತನೆ: ಸಚಿವ ಆರ್.ಅಶೋಕ್
ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ರಾತ್ರಿ ವಾಸ್ತವ್ಯ
ಉಡುಪಿ, ಫೆ.20: ಸರಕಾರದ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮದ ಅಂಗವಾಗಿ ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್, ಶನಿವಾರ ರಾತ್ರಿ ಆರೂರು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಾಸ್ತವ್ಯ ಮಾಡಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಹಲವು ವರ್ಷಗಳಿಂದ ಬಾಕಿ ಇರುವ ಕಡತವನ್ನು ವಿಲೇವಾರಿ ಮಾಡುವ ಬಗ್ಗೆ ಯೋಚನೆ ಮಾಡಲಾಗಿದೆ. ಈ ನಿಟ್ಟಿನಲ್ಲಿ 10 ದಿನಗಳ ಕಾಲ ಎಲ್ಲ ಕಡತಗಳ ವಿಲೇವಾರಿ ಮಾಡಲು ಜಿಲ್ಲಾಧಿಕಾರಿ, ತಹಶೀಲ್ದಾರ್, ಎಸಿಗೆ ಸೂಚನೆ ನೀಡಿದ್ದೇನೆ. ಇದರಲ್ಲಿ ಸ್ವತಃ ನಾನು ಕೂಡ ಭಾಗವಹಿಸುತ್ತೇನೆ. ಇದರಿಂದ ನೊಂದ ಜನರ ನೋವು ತೀರಿಸುವ ಕೆಲಸ ಮಾಡಲಾಗುವುದು ಎಂದರು.
ಈ ಗ್ರಾಮ ವಾಸ್ತವ್ಯ ಬಂದ ಸಿದ್ಧ, ಹೋದ ಸಿದ್ಧ ಎಂಬಂತೆ ಅಲ್ಲ. ಜನರೊಂದಿಗೆ ಬೆರೆತು, ಯಾವುದೇ ಆತುರ ಇಲ್ಲದೆ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಲಾಗುವುದು. ಈ ಮೂಲಕ ಕಂದಾಯ ಇಲಾಖೆಯನ್ನು ಜನ ಸ್ನೇಹಿಯನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದೇನೆಂದು ಅವರು ತಿಳಿಸಿದರು.
ಇದಕ್ಕೂ ಮೊದಲು ಸಚಿವರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗ್ರಾಮಸ್ಥರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಆರೂರು ಗ್ರಾಪಂ ವತಿಯಿಂದ ಕಂದಾಯ ಸಚಿವರನ್ನು ಸನ್ಮಾನಿಸಲಾಯಿತು. ಬಳಿಕ ವಿದ್ಯಾರ್ಥಿ-ವಿದ್ಯಾರ್ಥಿನಿ ಯರ ವಿವಿಧ ತಂಡಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಲಾ ಮಕ್ಕಳ ಜೊತೆ ಊಟ ಮಾಡಿ, ಶಾಲೆಯ ಕೊಠಡಿಯಲ್ಲಿ ಮಲಗಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಘುಪತಿ ಭಟ್, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ನಾಯ್ಕ್, ಆರೂರು ಗ್ರಾಪಂ ಅಧ್ಯಕ್ಷೆ ಮಮತಾ ಶೆಟ್ಟಿ, ಉಪಾಧ್ಯಕ್ಷ ಗುರುರಾಜ್ ರಾವ್, ತಾಪಂ ಮಾಜಿ ಸದಸ್ಯೆ ನಳಿನಿ ಪ್ರದೀಪ್ ರಾವ್, ಆರೂರು ಗ್ರಾಪಂ ಮಾಜಿ ಅಧ್ಯಕ್ಷ ರಾಜೀವ್ ಕುಲಾಲ್, ಜಿಲ್ಲಾಧಿಕಾರಿ ಕೂರ್ಮಾ ರಾವ್, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಜಿಪಂ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಡಾ.ನವೀನ್ ಭಟ್, ಸಹಾಯಕ ಆಯುಕ್ತ ರಾಜು ಕೆ., ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಮೊರಾರ್ಜಿ ದೇಸಾಯಿ ಶಾಲೆಯ ಪ್ರಾಂಶು ಪಾಲ ಚಂದ್ರಶೇಖರ್ ಉಪಸ್ಥಿತರಿದ್ದರು.