ಹಿಜಾಬ್ ವಿಚಾರ: ನೊಂದವರನ್ನು ಅಪರಾಧಿಗಳಾಗಿ ಬಿಂಬಿಸಲಾಗುತ್ತಿದೆ; ಹಿರಿಯ ನ್ಯಾಯವಾದಿ ಎಸ್.ಬಾಲನ್

ಹಿರಿಯ ನ್ಯಾಯವಾದಿ ಎಸ್.ಬಾಲನ್
ಬೆಂಗಳೂರು, ಫೆ. 20: ‘ವಿವಾದವನ್ನು ಸೃಷ್ಟಿಸಿದವರು ಮುಗ್ಧರನ್ನು ಹಾಗೂ ನೊಂದವರನ್ನು ಅಪರಾಧಿಗಳನ್ನಾಗಿ ಬಿಂಬಿಸುತ್ತಿದ್ದಾರೆ. ಬಹುತೇಕ ಮಾಧ್ಯಮಗಳು ಸೇರಿದಂತೆ ಸರಕಾರವು ಇದನ್ನು ವೈಭವೀಕರಿಸಲು ಸಹಕರಿಸುತ್ತಿವೆ’ ಎಂದು ಹಿರಿಯ ವಕೀಲ ಎಸ್.ಬಾಲನ್ ಅಭಿಪ್ರಾಯ ಪಟ್ಟರು.
ರವಿವಾರ ನಗರದ ಕೆ.ಆರ್. ವೃತ್ತದಲ್ಲಿ ಪತ್ರಕರ್ತರ ಅಧ್ಯಯನ ಕೇಂದ್ರ ಹಾಗೂ ಬೆಂಗಳೂರು ವಕೀಲರು ಜಂಟಿಯಾಗಿ ಆಯೋಜಿಸಿದ್ದ ‘ಹಿಜಾಬ್: ವಿವಾದ ಮಹಿಳೆ ಮತ್ತು ಮಕ್ಕಳ ಮೇಲಿನ ಕ್ರೈಂ’ ಎಂಬ ಸಂವಾದದಲ್ಲಿ ಮಾತನಾಡಿದ ಅವರು, ‘ಹಿಜಾಬ್ ಹೆಸರಿನಲ್ಲಿ ಕೇಸರಿ ಶಾಲುವಿನ ವಿವಾದವನ್ನು ಸೃಷ್ಟಿಸಲಾಗಿದೆ. ವಿವಾದವನ್ನು ಸೃಷ್ಟಿಸಿದವರು ಮುಗ್ಧರನ್ನೇ ಅಪರಾಧಿಗಳಾಗಿ ಬಿಂಬಿಸಲಾಗುತ್ತಿದೆ. ನೈಜ ಹಿಜಾಬ್ ಅನ್ನು ಅಪರಾಧಿ ಮಾಡಿ, ಹುಸಿಯಾದ ಕೇಸರಿ ಶಾಲನ್ನು ಹೀರೋ ಮಾಡಲಾಗುತ್ತಿದೆ.
ಸರಕಾರವು ಕೆಲವು ಸಂಘಟನೆಗಳಿಗೆ ಬೆಂಬಲ ನೀಡಿದ ಕಾರಣ ವಿವಾದ ಮತ್ತುಷ್ಟು ಹೆಚ್ಚಾಗಿದೆ’ ಎಂದರು.
‘ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಿ, ಶಾಲೆಗಳಿಗೆ ಹೋಗಿ ಪಾಠ ಕೇಳು ನಿರಾಕರಿಸಿರುವುದು ಅಪರಾಧವಾಗಿದೆ. ಮಾಧ್ಯಮಗಳು ಗಂಬೀರವಾಗಿ ಜನರಿಗೆ ತಿಳಿಸುವ ಕೆಲಸ ಮಾಡದೇ, ಹಿಜಾಬ್ ಧರಿಸಿರುವವರನ್ನು ಹೊರಗೆ ಕಳುಹಿಸುವ, ಹಿಜಾಬ್ ಅನ್ನು ಬಿಚ್ಚುವ ಘಟನೆಗಳನ್ನು ವೈಭವೀಕರಿಸಿ ಬಿಂಬಿಸಲಾಗುತ್ತಿದೆ. ಇದು ಕಾನೂನಿನ ಉಲ್ಲಂಘನೆಯಾಗಿದೆ’ ಎಂದು ಅವರು ಟೀಕಿಸಿದರು.







