ಉತ್ತರಪ್ರದೇಶ: ಉಮಾ ಭಾರತಿ ದತ್ತು ಪಡೆದ ಬಳಿಕ ಇನ್ನಷ್ಟು ಹದಗೆಟ್ಟಿರುವ ಪಹುಜ್ ನದಿಯ ಸ್ಥಿತಿ

ಝಾನ್ಸಿ,ಫೆ.20: ಬಿಜೆಪಿ ನಾಯಕಿ ಉಮಾ ಭಾರತಿಯವರು ದತ್ತು ಪಡೆದುಕೊಂಡ ಬಳಿಕ ಇಲ್ಲಿಯ ಪಹುಜ್ ನದಿಯ ಸ್ಥಿತಿ ಇನ್ನಷ್ಟು ಹದಗೆಟ್ಟಿದೆ.
2014ರಲ್ಲಿ ಆಗ ಝಾನ್ಸಿಯ ಸಂಸದೆ ಹಾಗೂ ನರೇಂದ್ರ ಮೋದಿ ಸರಕಾರದಲ್ಲಿ ಜಲ ಸಂಪನ್ಮೂಲ ಮತ್ತು ಗಂಗಾ ಪುನರುಜ್ಜೀವನ ಸಚಿವೆಯಾಗಿದ್ದ ಭಾರತಿ ತನ್ನ ಲೋಕಸಭಾ ಕ್ಷೇತ್ರದಲ್ಲಿ ಭಾಷಣದ ಸಂದರ್ಭದಲ್ಲಿ ‘ಪ್ರಧಾನಿ ಮೋದಿಯವರ ಸಂಸದ್ ಗ್ರಾಮ ಯೋಜನೆಯಡಿ ಗ್ರಾಮವನ್ನು ದತ್ತು ಪಡೆದುಕೊಳ್ಳುವ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದೇವೆ,ಆದರೆ ನದಿಗಳ ಸ್ಥಿತಿ ಸುಧಾರಿಸಲು ಪ್ರತಿಯೊಬ್ಬ ಸಂಸದರು ತಮ್ಮ ಕ್ಷೇತ್ರದಲ್ಲಿಯ ನದಿಯೊಂದನ್ನೂ ದತ್ತು ಪಡೆದುಕೊಳ್ಳಬೇಕು ’ಎಂದು ಹೇಳಿದ್ದರು.
ಇದಕ್ಕೆ ನಾಂದಿ ಹಾಡಿದ್ದ ಭಾರತಿ ತನ್ನ ಕ್ಷೇತ್ರದಲ್ಲಿ ಹರಿಯುತ್ತಿರುವ ಪಹುಜ್ ನದಿಯನ್ನು ದತ್ತು ಪಡೆದುಕೊಂಡಿದ್ದರು. ಅದನ್ನು ಸ್ವಚ್ಛಗೊಳಿಸಿ ಮೂಲರೂಪಕ್ಕೆ ತಂದು ಸಂರಕ್ಷಿಸುವುದಾಗಿ ಅವರು ಶಪಥವನ್ನೂ ಮಾಡಿದ್ದರು. ಜೊತೆಗೆ ನದಿ ಸ್ವಚ್ಛತೆಗೆ ವಿಶೇಷ ಯೋಜನೆಯನ್ನು ರೂಪಿಸುವುದಾಗಿಯೂ ಅವರು ಹೇಳಿದ್ದರು.
ಪ್ರಾಚೀನ ಕಾಲದಲ್ಲಿ ಪಹುಜ್ ನದಿಯನ್ನು ಪುಷ್ಪಾವತಿ ಎಂದು ಕರೆಯಲಾಗುತ್ತಿತ್ತು ಎನ್ನಲಾಗಿದೆ. ಪಹುಜ್ ನದಿ ಝಾನ್ಸಿ ಸಮೀಪದ ಬೈದೋರಾ ಗ್ರಾಮದಿಂದ 200 ಕಿ.ಮೀ.ದೂರ ಸಾಗಿದ ಬಳಿಕ ಜಲಾಯುನ್ ಜಿಲ್ಲೆಯಲ್ಲಿನ ಕಾಲಿ ಸಿಂಧ್‌ನೊಂದಿಗೆ ಸೇರುತ್ತದೆ. ನದಿಯನ್ನು ಪುಷ್ಪಾವತಿಯ ಮೂಲರೂಪಕ್ಕೆ ಮರಳಿಸುವ ತನ್ನ ಬಯಕೆಯನ್ನು ಭಾರತಿ ಆಗ ವ್ಯಕ್ತಪಡಿಸಿದ್ದರು.
ಆದರೆ ಈಗ ತನ್ನ ದುರದೃಷ್ಟಕ್ಕಾಗಿ ಕಂಬನಿ ಸುರಿಸಲೂ ಈ ನದಿಯಲ್ಲಿ ಸಾಕಷ್ಟು ನೀರಿಲ್ಲ. ನದಿಯ ಮೇಲ್ಮೈ ಗಿಡಬಳ್ಳಿಗಳಿಂದ ಮುಚ್ಚಿಹೋಗಿದ್ದು, ಒಂದು ಹನಿ ನೀರೂ ಕಾಣುತ್ತಿಲ್ಲ. ವಿವಿಧ ಸ್ಥಳಗಳಲ್ಲಿ ನಡೆಸಿದ ಸಮೀಕ್ಷೆಯು ಎಲ್ಲ ಕಡೆಗಳಲ್ಲಿಯೂ ನದಿಯು ಇದೇ ದಯನೀಯ ಸ್ಥಿತಿಯಲ್ಲಿದೆ ಎನ್ನುವುದನ್ನು ಬೆಳಕಿಗೆ ತಂದಿದೆ. ಅದು ನದಿಯ ಬದಲು ಹುಲ್ಲುಗಾವಲಿನಂತೆ ಕಾಣುತ್ತಿದೆ.
ನದಿ ಪಾತ್ರದಲ್ಲಿ ಹಲವಾರು ಮನೆಗಳು ಮತ್ತು ಬಡಾವಣೆಗಳು ತಲೆಯೆತ್ತಿದ್ದು,ಆಡಳಿತದ ಕುಮ್ಮಕ್ಕಿನಿಂದ ಈ ಅತಿಕ್ರಮಣ ನಡೆದಿದೆ ಎಂದು ಸ್ಥಳೀಯ ಪತ್ರಕರ್ತರು ಮತ್ತು ನಿವಾಸಿಗಳು ಆರೋಪಿಸಿದ್ದಾರೆ. ಹಲವಾರು ಕಡೆಗಳಲ್ಲಿ ನದಿಯು ಚರಂಡಿಯಾಗಿಬಿಟ್ಟಿದೆ. ನದಿಯ ದಂಡೆಯಲ್ಲಿ ಎಲ್ಲ ಕಡೆ ತ್ಯಾಜ್ಯಗಳ ರಾಶಿಗಳೇ ಬಿದ್ದಿವೆ.
ಭಾರತಿ ಅವರು ನದಿಯನ್ನು ದತ್ತು ಪಡೆದುಕೊಂಡಾಗ ಅವರು ಗಂಗಾ ಪುನರುಜ್ಜೀವನದ ಹೊಣೆಯನ್ನು ಹೊತ್ತುಕೊಂಡಿದ್ದರಿಂದ ಪಹುಜ್‌ನ ಸ್ಥಿತಿ ಸುಧಾರಿಸಬಹುದು ಎಂದು ಜನರು ಆಶಿಸಿದ್ದರು. ಭಾರತಿ ನದಿಯನ್ನು ದತ್ತು ಪಡೆದುಕೊಂಡಾಗ ಅದರ ಸ್ಥಿತಿ ಇಷ್ಟೊಂದು ಕೆಟ್ಟಿರಲಿಲ್ಲ ಎಂದು ಬುಂದೇಲಖಂಡ್ ನಿರ್ಮಾಣ ಮೋರ್ಚಾದ ಅಧ್ಯಕ್ಷ ಭಾನು ಸಹಾಯ್ ಸುದ್ದಿಗಾರರಿಗೆ ತಿಳಿಸಿದರು.







