ಪಂಜಾಬ್ ವಿಧಾನಸಭಾ ಚುನಾವಣೆ: ಸೋನು ಸೂದ್ ಮತಗಟ್ಟೆ ಭೇಟಿಗೆ ಬರದಂತೆ ನಿರ್ಬಂಧ ಹೇರಿದ ಚುನಾವಣಾ ಆಯೋಗ

ಮೋಗಾ,ಫೆ.20: ಬಾಲಿವುಡ್ ನಟ ಸೋನು ಸೂದ್ ಅವರು ರವಿವಾರ ಮೋಗಾದಲ್ಲಿಯ ಮತಗಟ್ಟೆಗಳಿಗೆ ಭೇಟಿ ನೀಡುವುದನ್ನು ಚುನಾವಣಾ ಆಯೋಗವು ನಿರ್ಬಂಧಿಸಿತು. ಮೋಗಾ ವಿಧಾನಸಭಾ ಕ್ಷೇತ್ರದಲ್ಲಿ ಸೂದ್ ಸೋದರಿ ಮಾಳವಿಕಾ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಸೂದ್ ಮತದಾರರೊಂದಿಗೆ ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಳ್ಳುವ ಮೂಲಕ ಅವರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಶಿರೋಮಣಿ ಅಕಾಲಿ ದಳದ ನಾಯಕ ದರ್ಜಿಂದರ್ ಸಿಂಗ್ ಅಲಿಯಾಸ್ ಮಖನ್ ಬ್ರಾರ್ ದೂರಿನ ಮೇರೆಗೆ ಚುನಾವಣಾ ಆಯೋಗವು ಸೂದ್ ಇತರ ಮತಗಟ್ಟೆಗಳಿಗೆ ಭೇಟಿ ನೀಡುವುದನ್ನು ತಡೆಯಲು ಅವರ ಕಾರನ್ನು ಜಪ್ತಿ ಮಾಡಿದೆ. ಈ ಸಂಬಂಧ ದೂರನ್ನು ದಾಖಲಿಸುವಂತೆ ಮೋಗಾ ಎಸ್ಪಿಗೆ ಜಿಲ್ಲಾಧಿಕಾರಿ ಹರೀಶ್ ನಯ್ಯರ್ ಅವರೂ ಸೂಚಿಸಿದ್ದಾರೆ.
ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದ ಸೂದ್,ತನ್ನ ಸೋದರಿಗೆ ಮತ ನೀಡುವಂತೆ ತಾನು ಯಾರನ್ನೂ ಕೇಳಿಕೊಂಡಿಲ್ಲ. ತಾನು ಮತಗಟ್ಟೆಗಳ ಹೊರಗಿನ ಕಾಂಗ್ರೆಸ್ ಬೂತ್‌ಗಳಿಗೆ ಭೇಟಿ ನೀಡಿದ್ದೆ ಅಷ್ಟೇ ಎಂದು ಹೇಳಿದರು.
ಮೋಗಾದಲ್ಲಿ ಇತರ ಅಭ್ಯರ್ಥಿಗಳು ಮತಗಳನ್ನು ಖರೀದಿಸುತ್ತಿದ್ದಾರೆ ಎಂದು ಅವರು ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ. ಮಾಳವಿಕಾ ಸೂದ್ ಕಳೆದ ಜನವರಿಯಲ್ಲಷ್ಟೇ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು.







