ಯುವತಿಯ ಅಪಹರಣ, ಅತ್ಯಾಚಾರ; ಬಿಜೆಪಿ ನಾಯಕ ಸೇರಿದಂತೆ ಇಬ್ಬರ ವಿರುದ್ಧ ಪ್ರಕರಣ

ಸಿಂಗ್ರೌಲಿ
ಸಿಂಗ್ರೌಲಿ,ಫೆ.21: ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿ ಯುವತಿಯೋರ್ವಳನ್ನು ಅಪಹರಿಸಿ ಅತ್ಯಾಚಾರವೆಸಗಿದ ಆರೋಪದಲ್ಲಿ ಬಿಜೆಪಿ ನಾಯಕ ಮತ್ತು ಸಂಬಂಧಿಯ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ತನ್ನ ಮದುವೆಗೆ ಮೂರು ದಿನ ಮುನ್ನ ಜ.27ರಂದು ಬಿಜೆಪಿಯ ಸರಾಯ್ ಮಂಡಲ ಅಧ್ಯಕ್ಷ ಕೋಮಲ್ ಗುಪ್ತಾ ಮತ್ತು ಆತನ ಸಂಬಂಧಿ ಧರ್ಮೇಂದ್ರ ಗುಪ್ತಾ ತನ್ನನ್ನು ಮನೆಯ ಬಳಿಯಿಂದ ಅಪಹರಿಸಿದ್ದರು ಮತ್ತು ಯಾವುದೋ ವಸ್ತುವನ್ನು ಮೂಸುವಂತೆ ಮಾಡಿ ಪ್ರಜ್ಞೆ ತಪ್ಪಿಸಿದ್ದರು.
ಜಬಲಪುರ ಸಮೀಪ ತನಗೆ ಪ್ರಜ್ಞೆ ಬಂದಿತ್ತು. ಅಲ್ಲಿ ಕೋಮಲ್ ಗುಪ್ತಾನಿಂದ ಪ್ರತ್ಯೇಕಗೊಂಡಿದ್ದ ಧಮೇಂದ್ರ ಗುಪ್ತಾ ತನ್ನನ್ನು ಬಸ್ನಲ್ಲಿ ಬಾಲಾಘಾಟ್ಗೆ ಕರೆದೊಯ್ದು ಸೋದರತ್ತೆಯ ಮನೆಯಲ್ಲಿ ದಿಗ್ಬಂಧನದಲ್ಲಿರಿಸಿದ್ದ ಮತ್ತು ಪದೇಪದೇ ತನ್ನ ಮೇಲೆ ಅತ್ಯಾಚಾರವೆಸಗಿದ್ದ ಎಂದು ಸಂತ್ರಸ್ತ ಯುವತಿ ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾಳೆ.
ಅದೇ ದಿನ ಯುವತಿಯ ಕುಟುಂಬ ಸದಸ್ಯರು ನಾಪತ್ತೆ ದೂರನ್ನು ದಾಖಲಿಸಿದ್ದು, ಫೆ.19ರಂದು ಬಾಲಾಘಾಟ್ನಿಂದ ಆಕೆಯನ್ನು ರಕ್ಷಿಸಲಾಗಿದೆ. ಮುಖ್ಯ ಆರೋಪಿ ಧಮೇಂದ್ರ ಗುಪ್ತಾನನ್ನು ಬಂಧಿಸಲಾಗಿದ್ದು, ಕೋಮಲ್ ಗುಪ್ತಾ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.







