ರಾಜ್ಯ ಬಜೆಟ್: ಸಿಎಂ ಬಸವರಾಜ ಬೊಮ್ಮಾಯಿಗೆ ರೈತ ಸಂಘಟನೆಗಳ ಒಕ್ಕೂಟ ಪತ್ರ

ಬೆಂಗಳೂರು, ಫೆ. 20: ಪ್ರಸಕ್ತ ಸಾಲಿನ ಬಜೆಟ್ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ‘ರೈತರಿಗೆ ಆರೋಗ್ಯ ವಿಮೆ ಜಾರಿಗೆ ತರುವುದು, ಕನಿಷ್ಠ ಬೆಂಬಲ ಬೆಲೆ ಹಾಗೂ ಕೃಷಿ ಸಾಲ ನೀತಿ ಬದಲಾವಣೆ’ ಕೋರಿ ಪತ್ರ ಬರೆದಿದೆ.
ಕಬ್ಬು ಬೆಳೆಗಾರ ರೈತರು ಸಕ್ಕರೆ ಕಾರ್ಖಾಣೆಗೆ ಕಬ್ಬು ಸರಬರಾಜು ಮಾಡಿಆಗ ಪ್ರತಿ ಟನ್ ಕಬ್ಬಿಗೆ ಒಂದು ರೂಪಾಯಿ ಕಡಿತ ಮಾಡಿ ಇದಕ್ಕೆ ಸಮನಾಗಿ ಸರಕಾರ ಹಣ ಹಾಕಿ ಎಲ್ಲ ಕಬ್ಬು ಬೆಳೆಗಾರ ರೈತ ಕುಟುಂಬಕ್ಕೆ ಆರೋಗ್ಯ ವಿಮೆ ಮಾಡಿಸಬೇಕು. ಯಶಸ್ವಿನಿ ಯೋಜನೆಗಿಂತಲೂ ರೈತರಿಗೆ ಹೆಚ್ಚು ಸಹಕಾರಿಯಾಗುತ್ತದೆ. ಸರಕಾರಕ್ಕೂ ಹೆಚ್ಚು ಹೊರೆ ಬರುವುದಿಲ್ಲ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ತೆಲಂಗಾಣ ರಾಜ್ಯದಲ್ಲಿ ಪ್ರತಿಯೊಬ್ಬರಿಗೂ 5 ಲಕ್ಷ ರೂ.ಜೀವ ವಿಮೆ ಪಾಲಿಸಿ ನೀಡಲಾಗಿದೆ. ಆಕಸ್ಮಿಕ, ಅಪಘಾತ ಸಾವು, ಆತ್ಮಹತ್ಯೆಗೆ ಒಳಗಾದ ಕುಟುಂಬಕ್ಕೆ ಐದು ಲಕ್ಷ ರೂ.ಪರಿಹಾರ ಸಿಗುತ್ತದೆ ಇದನ್ನು ಸರಕಾರ ಗಮನಿಸಬೇಕು. ಕಬ್ಬಿನಿಂದ ಎಥನಾಲ್ ಉತ್ಪಾದಿಸುವ ಘಟಕಗಳಿಗೆ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ 15 ಕಿಲೋಮಿಟರ್ ಮಿತಿಯನ್ನು ರದ್ದುಗೊಳಿಸಬೇಕು. ಈ ಬಗ್ಗೆ ಕೇಂದ್ರ ಸರಕಾರಕ್ಕೆ ಒತ್ತಾಯಿಸಬೇಕು ಎಂದು ಅವರು ಕೋರಿದ್ದಾರೆ.
ಕಬ್ಬಿನ ಎಫ್‍ಆರ್‍ಪಿ ದರ ರೈತನ ಹೊಲದಲ್ಲಿನ ದರ ಎಂದು ಬದಲಾಗಬೇಕು. ಇದರಿಂದ ಸಕ್ಕರೆ ಕಾರ್ಖಾನೆಗಳ ಹಾಗೂ ಕಟಾವು ಕೂಲಿ ಕಾರ್ಮಿಕರ ಸಮಸ್ಯೆ ತಪ್ಪುತ್ತದೆ, ಸಕ್ಕರೆ ಕಾರ್ಖಾನೆಗಳು ಸಕ್ಕರೆ ಇಳುವರಿ ತೋರಿಸುವ ಮಾನದಂಡ ಬದಲಾಗಬೇಕು. ಕಬ್ಬಿನ ಎಥನಾಲ್ ಉತ್ಪಾದನಾ ಆದಾಯವನ್ನು ಕಬ್ಬು ದರ ನಿಗದಿಯಲ್ಲಿ ಪರಿಗಣಿಸಬೇಕು ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.
ಕಬ್ಬಿಗೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್, ಬೆಂಕಿ ಅನಾಹುತವಾದಾಗ ಸುಟ್ಟು ಹೋದ ಕಬ್ಬಿಗೆ ಯಾವುದೆ ಮಾನದಂಡವಿಲ್ಲದೆ ಕಾರ್ಖಾನೆಗಳು ಕಬ್ಬಿನ ಹಣದಲ್ಲಿ ಶೇ.25ರಷ್ಟು ಕಟಾವು ಮಾಡುವುದನ್ನು ತಪ್ಪಿಸಬೇಕು. ಎಫ್‍ಆರ್‍ಪಿ ಪೂರ್ಣ ಹಣ ರೈತರಿಗೆ ಪಾವತಿ ಆಗಬೇಕು ಎಂದು ಅವರು ಮನವಿ ಮಾಡಿದ್ದಾರೆ.
ರೈತರ ಎಲ್ಲ ಕೃಷಿ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ಶಾಸನಬದ್ಧ ಖರೀದಿ ಕೇಂದ್ರಗಳನ್ನು ಪಂಜಾಬ್, ತೆಲಂಗಾಣ, ತಮಿಳುನಾಡು ಮಾದರಿಯಲ್ಲಿ ರಾಜ್ಯದ ಎಲ್ಲ ಹೋಬಳಿ ಕೇಂದ್ರಗಳಲ್ಲಿ ತೆರೆಯಬೇಕು. ಈ ರಾಜ್ಯಗಳಿಗೆ ನೀಡುವಂತೆ ನಮಗೆ ಬೇಕಾದ ಹೆಚ್ಚಿನ ಆದಾಯವನ್ನು ಕೇಂದ್ರ ಸರಕಾರದಿಂದ ಪಡೆಯಲು ರಾಜ್ಯದ ಸಂಸದ ನಿಯೋಗ ಪ್ರಧಾನಿ ಭೇಟಿ ಮಾಡಿ ಒತ್ತಾಯಿಸಬೇಕು. ರೈತರು ಬೆಳೆದ ಎಲ್ಲ ಪೌಷ್ಠಿಕ ಆಹಾರ ಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸರಕಾರವೇ ಕಡ್ಡಾಯವಾಗಿ ಖರೀದಿಸುವಂಥ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಎಲ್ಲ ಕೃಷಿ ಉತ್ಪಾದನಾ ಬೆಳೆಗಳಿಗೆ ಬೆಳೆ ವಿಮೆ ಜಾರಿಯಾಗಬೇಕು. ಅತಿವೃಷ್ಟಿ, ಪ್ರಕೃತಿ ವಿಕೋಪ, ಬೆಳೆ ನಷ್ಟಕ್ಕೆ ವಿಮೆ ಪರಿಹಾರ ಸಂಪೂರ್ಣ ನಷ್ಟ ಸಿಗುವಂತಾಗಬೇಕು. ಕೃಷಿ ಉತ್ಪನ್ನಗಳೀಗೆ ಎಪಿಎಂಸಿಯಲ್ಲಿ ಅಡಮಾನ ಸಾಲ ಯೋಜನೆ ಸದೃಢಗೊಳಿಸಬೇಕು. ರೈತರಿಗೆ ಅನುಕೂಲವಾಗುವ ಈ ಯೋಜನೆಗೆ ಹೆಚ್ಚು ಅನುದಾನ ಮೀಡಲಿಡಬೇಕು. ಕೃಷಿಗೆ ಬಳಸುವ ಕೀಟನಾಶಕ ರಸಗೊಬ್ಬರ, ಹನಿ ನೀರಾವರಿ ಉಪಕರಣಗಳು, ಟ್ರ್ಯಾಕ್ಟರ್ ಬಿಡಿ ಭಾಗಗಳ ಜಿಎಸ್ಟಿ ತೆರಿಗೆ ರದ್ದುಗೊಳಿಸಲು ಕೇಂದ್ರ ಸರಕಾರಕ್ಕೆ ಒತ್ತಾಯಿಸಬೇಕು ಎಂಉ ಕುರುಬೂರು ಶಾಂತಕುಮಾರ್ ಕೋರಿದ್ದಾರೆ.
ಕೊರೋನ ಸಂಕಷ್ಟದಲ್ಲಿ ರೈತರು ತೀವ್ರ ಸಂಕಷ್ಟ ಅನುಭವಿಸಿರುವ ಕಾರಣ ಕೃಷಿ ಜಮೀನು ಉಳ್ಳ ಎಲ್ಲ ರೈತರಿಗೂ ಬರಿ ಪಹಣಿ ಪತ್ರ ಆಧರಿಸಿ ಕನಿಷ್ಠ 3 ಲಕ್ಷ ಆಧಾರರಹಿತ ಬಡ್ಡಿ ಇಲ್ಲದ ಸಾಲ ಕೊಡಿಸುವ ಯೋಜನೆ ಎಲ್ಲ ಬ್ಯಾಂಕುಗಳಲ್ಲಿ ಜಾರಿಯಾಗಬೇಕು. ವನ್ಯಜೀವಿ ಸಂರಕ್ಷಣೆ ಕಾಯ್ದೆ ತಿದ್ದುಪಡಿ ಮಾಡಲು ಕೇಂದ್ರ ಸರಕಾರಕ್ಕೆ ಒತ್ತಾಯಿಸಬೇಖು. ಅಮೃತ ರೈತ ಉತ್ಪಾದಕ ಸಂಸ್ಥೆಗಳಲ್ಲಿ ಶೇ.50 ಮಹಿಳಾ ಸದಸ್ಯರಿಗೆ ಸದಸ್ಯತ್ವ ಮೀಸಲಿಟ್ಟು ವಿಶೇಷವಾಗಿ ಹೆಚ್ಚಿನ ಅನುದಾನ ನೀಡಬೇಕು. ಮಹಿಳಾ ಸ್ವಸಹಾಯ ಸಂಘಗಳಿಗೆ ಇದರ ಜೊತೆಯಲ್ಲಿ ಸೇರಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.







