ಹಿಜಾಬ್ ಗೊಂದಲ ಶೀಘ್ರ ನಿವಾರಣೆಯಾಗಲಿ: ಕೂರ್ನಡ್ಕ ರೇಂಜ್ ಜಂಇಯತುಲ್ ಮುಅಲ್ಲಿಮೀನ್ ಆಗ್ರಹ
ಪುತ್ತೂರು, ಫೆ.20: ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಮತ್ತು ಪೋಷಕರು ಗೊಂದಲದಲ್ಲಿದ್ದು, ಇದರ ಶೀಘ್ರ ಇತ್ಯರ್ಥಕ್ಕೆ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ ಮುಂಗಾಬೇಕು ಎಂದು ಕೂರ್ನಡ್ಕ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಸಂಗಮವು ಆಗ್ರಹಿಸಿದೆ.
ಕೂರ್ನಡ್ಕ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಶಾಫಿ ದಾರಿಮಿ ಸಂಗಮದ ಅಧ್ಯಕ್ಷತೆ ವಹಿಸಿದ್ದರು.
ಸಂಗಮವನ್ನು ಉದ್ಘಾಟಿಸಿ ಮಾತನಾಡಿದ ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಹೈಕೋರ್ಟ್ ಮಧ್ಯಂತರ ತೀರ್ಪಿಗೆ ಅಪಾರ್ಥ ಕಲ್ಪಿಸುವುದು, ಶಿರವಸ್ತ್ರ ಧರಿಸಿದ ವಿದ್ಯಾರ್ಥಿನಿಯರನ್ನು ತರಗತಿಗೆ ಪ್ರವೇಶಿಸದಂತೆ ಅನೈತಿಕ ಪೊಲೀಸ್‌ಗಿರಿ ಪ್ರದರ್ಶಿಸುವುದರಿಂದ ವಿದ್ಯಾರ್ಥಿಗಳು ಮಾನಸಿಕ ಕಿರುಕುಳಗಳನ್ನೂ ಅನುಭವಿಸುತ್ತಿದ್ದಾರೆ. ಪರೀಕ್ಷೆಗಳ ತಯಾರಿಯಲ್ಲಿರುವ ವೇಳೆ ವಿದ್ಯಾರ್ಥಿಗಳ ಸಂವಿಧಾನಾತ್ಮಕ ಹಕ್ಕುಗಳನ್ನು ನಿರಾಕರಿಸುವುದು ಮತ್ತು ಹಕ್ಕುಗಳ ಸಂರಕ್ಷಣೆಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧವಾಗಿರಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳಲ್ಲಿ ಉಂಟಾಗಿರುವುದು ವಿದ್ಯಾರ್ಥಿಗಳ ಅತ್ಯಮೂಲ್ಯ ಸಮಯವನ್ನು ವ್ಯರ್ಥಗೊಳಿಸುತ್ತಿವೆ. ಶೈಕ್ಷಣಿಕ ಅಭಿವೃದ್ಧಿಗಾಗಿ ಸ್ಥಾಪಿತವಾದ ವಿದ್ಯಾಕೇಂದ್ರಗಳ ಆವರಣದಲ್ಲಿಯೇ ಅನಗತ್ಯವಾದ ವಾದ-ವಿವಾದಗಳು ನಡೆಯುತ್ತಿರುವುದು ಗುರು ಶಿಷ್ಯ ಸಂಬಂಧ ಮತ್ತು ಅಧ್ಯಾಪಕರೊಂದಿಗೆ ಇರುವ ಗೌರವ ಘನತೆಗಳು ನಾಶವಾಗಲು ಕಾರಣವಾಗುತ್ತಿದೆ. ಇದು ಪರಿಹರಿಸಲಾಗದ ಸುದೀರ್ಘ ದುಷ್ಪರಿಣಾಮವನ್ನು ಬೀರಲಿದೆ ಎಂದು ಖೇದ ವ್ಯಕ್ತಪಡಿಸಿದರು.
ಹಿಜಾಬ್ ಮತ್ತು ಶಿಕ್ಷಣ ಎರಡು ಕೂಡ ಧಾರ್ಮಿಕ ಮತ್ತು ಸಾಂವಿಧಾನಿಕವಾದ ಹಕ್ಕಾಗಿದೆ. ಶಾಲೆ ಕಾಲೇಜುಗಳಲ್ಲಿ ಆರಂಭವಾದ ಈ ಗೊಂದಲ ಮದ್ರಸ ಶಿಕ್ಷಣದಲ್ಲೂ ಪ್ರಭಾವ ಬೀರತೊಡಗಿರುವುದರಿಂದ ಮದ್ರಸ ಶಿಕ್ಷಕರು ರಂಗಪ್ರವೇಶ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹೈಕೋರ್ಟಿನಲ್ಲಿ ನಮಗೆ ವಿಶ್ವಾಸವಿದೆ. ಆದರೆ ತೀರ್ಪುಗಳು ವಿಳಂಬವಾಗುತ್ತಿರುವುದು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಉಂಟುಮಾಡುತ್ತಿದೆ. ಸಮಸ್ಯೆಗಳು ಜಟಿಲವಾಗುವ ಮುಂಚೆ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಉಮರ್ ದಾರಿಮಿ ಮನವಿ ಮಾಡಿದರು.
ಅಧ್ಯಾಪಕ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಆಸಿಫ್ ಅಝಹರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಮನ್ಸೂರ್ ಮೌಲವಿ ಸ್ವಾಗತಿಸಿದರು. ಪರೀಕ್ಷಾ ಬೋರ್ಡ್ ಅಧ್ಯಕ್ಷ ಸಿದ್ದೀಕ್ ಮುಸ್ಲಿಯಾರ್ ವಂದಿಸಿದರು.