ಕರಾವಳಿ ಕಾಲೇಜು ಮಾಲಕರಿಗಾಗಿ ಹೆದ್ದಾರಿ ಕಾಮಗಾರಿ ತಿರುವು: ಸಿಪಿಎಂ ಆರೋಪ

ಮಂಗಳೂರು, ಫೆ.20: ನಗರ ಹೊರವಲಯದ ಬಂಗ್ರ ಕೂಳೂರು ಬಳಿಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಬೃಹತ್ ಚರಂಡಿಗೆ ತಡೆಗೋಡೆ ಹಾಗೂ ಸರ್ವೀಸ್ ರಸ್ತೆ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಕರಾವಳಿ ಕಾಲೇಜು ಬಳಿ ಹೆದ್ದಾರಿ ಕಡೆಗೆ ತಿರುಗಿಸಲಾಗುತ್ತಿದೆ ಎಂದು ಸಿಪಿಎಂ ಮಂಗಳೂರು ಉತ್ತರ ವಲಯ ಆರೋಪಿಸಿದೆ.
ಕೆಲವು ವರ್ಷಗಳಿಂದ ನಿರಂತರ ಮಳೆ ಸುರಿದರೆ ಕೊಟ್ಟಾರ ಕೊಟ್ಟಾರ ಮುಳುಗಡೆಯಾಗುತ್ತದೆ. ಒಮ್ಮೆ ಬಂಗ್ರ ಕೂಳೂರು ಹೆದ್ದಾರಿವರೆಗೂ ಜಲಾವೃತಗೊಂಡಿತ್ತು. ಕರಾವಳಿ ಕಾಲೇಜು ಬಳಿ ರಾಜಕಾಲುವೆ ಕಿರಿದಾಗಿದ್ದುದರಿಂದ ನೀರು ಹರಿವಿಗೆ ಅಡಚಣೆ ಇತ್ತು. ಇದನ್ನು ತೆರವುಗೊಳಿಸಲು ನಗರ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದರು. ಆದರೆ ಅದಕ್ಕೆ ತಡೆ ಒಡ್ಡಲಾಗಿತ್ತು ಎಂದು ಸಿಪಿಎಂ ಹೇಳಿಕೆಯಲ್ಲಿ ತಿಳಿಸಿದೆ.
ಇದೀಗ ಹೆದ್ದಾರಿ ಇಲಾಖೆಯು ಕೂಡ ಚರಂಡಿ ಅಗಲಗೊಳಿಸದೆ ಚರಂಡಿಯಿರುವ ಪ್ರದೇಶವನ್ನು ಬಿಟ್ಟು ಹೆದ್ದಾರಿ ಪಕ್ಕದಲ್ಲೇ ಅಂಡರ್ ಪಾಸ್ ಚರಂಡಿ ನಿರ್ಮಿಸುತ್ತಿದೆ. ಕರಾವಳಿ ಕಾಲೇಜು ಮಂಭಾಗದ ಈ ಕಾಮಗಾರಿಯಿಂದ ನಗರದ ನಾನಾ ಕಡೆಯಿರುವ ಸರ್ವೀಸ್ ರಸ್ತೆ ರೀತಿಯೇ ಇಲ್ಲಿಯೂ ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿದ್ದು, ಕಾಟಾಚಾರಕ್ಕೆ ಸರ್ವಿಸ್ ರಸ್ತೆ ಹಾಗೂ ಚರಂಡಿ ನಿರ್ಮಿಸಲಾಗುತ್ತಿದೆ. ಕರಾವಳಿ ಕಾಲೇಜು ಮಾಲಕರ ಅಕ್ರಮ ಅಂಗಡಿ ಕಟ್ಟಡ, ಜಾಗ ಉಳಿಸಲು ಈ ಕಾಮಗಾರಿಯನ್ನು ಹೆದ್ದಾರಿ ಇಲಾಖೆ ನಡೆಸುತ್ತಿದೆ. ಇದೊಂದು ಹಗರಣದಂತೆ ಭಾಸವಾಗುತ್ತಿದ್ದು, ಸಂಸದರು, ಶಾಸಕರು, ಕಾರ್ಪೊರೇಟರ್ ಕೂಡ ಮೌನ ವಹಿಸಿರುವುದು ಖಂಡನೀಯ. ಕೊಟ್ಟಾರ ಚೌಕಿ, ಮಾಲೆಮಾರ್ ಪ್ರದೇಶದ ಜನರು ಮಳೆಗಾಲದಲ್ಲಿ ನೆರೆ ಪ್ರಮಾಣ ಹೆಚ್ಚುವ ಆತಂಕದಲ್ಲಿದ್ದಾರೆ. ಹಾಗಾಗಿ ತಕ್ಷಣ ಈ ಅವೈಜ್ಞಾನಿಕ ಕಾಮಗಾರಿಯನ್ನು ನಿಲ್ಲಿಸಬೇಕು ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ ಮತ್ತು ಸಿಪಿಎಂ ಮಂಗಳೂರು ನಗರ ಉತ್ತರ ಸಮಿತಿಯ ಕಾರ್ಯದರ್ಶಿ ಅಹಮ್ಮದ್ ಬಶೀರ್ ಎಚ್ಚರಿಸಿದ್ದಾರೆ.







