ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವಕ್ಕೆ ಚಾಲನೆ
ಕಾರ್ಕಳ, ಫೆ.20: ಕೊರೋನ ಕಾರಣದಿಂದ ಮುಂದೂಡಲ್ಪಟ್ಟಿದ್ದ ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ಐದು ದಿನಗಳ ಮಹೋತ್ಸವಕ್ಕೆ ರವಿವಾರ ಅದ್ದೂರಿ ಚಾಲನೆ ನೀಡಲಾಯಿತು.
ಬೆಳಗ್ಗೆ ಪುಣ್ಯಕ್ಷೇತ್ರದ ಮುಖ್ಯ ಗುರು ವಂ.ಅಲ್ಬನ್ ಡಿಸೋಜ ಧ್ವಜಾರೋಹಣ ನೆರವೇರಿಸುವ ಮೂಲಕ ಮಹೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಅವರು ಸಂತ ಲಾರೆನ್ಸರ ಪವಿತ್ರ ಅವಶೇಷವನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಸಾರ್ವ ಜನಿಕರ ದರ್ಶನಕ್ಕಾಗಿ ಮಂಟಪದಲ್ಲಿ ಪ್ರತಿಷ್ಠಾಪಿಸಿದರು.
ದಿನದ ಪ್ರಮುಖ ಸಾಂಭ್ರಮಿಕ ಬಲಿಪೂಜೆಗಳನ್ನು ಶಿವಮೊಗ್ಗದ ಧರ್ಮಾಧ್ಯಕ್ಷ ಅತಿ ವಂ.ಡಾ.ಫ್ರಾನ್ಸಿಸ್ ಸೆರಾವೊ ಮತ್ತು ಮಂಗಳೂರಿನ ಧರ್ಮಾಧ್ಯಕ್ಷ ಅತಿ ವಂ.ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ನೆರವೇರಿಸಿ ಪ್ರಬೋಧನೆ ನೀಡಿದರು.
ಮಹೋತ್ಸವದ ಮೊದಲ ದಿನ ಮಕ್ಕಳಿಗಾಗಿ ಮೀಸಲಿಟ್ಟು, ವಿಶೇಷ ಪ್ರಾರ್ಥನೆ ಗಳನ್ನು ನಡೆಸಲಾಯಿತು. ಅದೇ ರೀತಿ ತಮ್ಮ ತಮ್ಮ ಪುಟಾಣಿ ಮಕ್ಕಳೊಂದಿಗೆ ನೂರಾರು ಮಾತೆಯಂದಿರು ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು. ದಿನದ ಇತರ ಬಲಿಪೂಜೆಗಳನ್ನು ವಂ.ರೊಯ್ ಡಿಸೋಜ ಕಲ್ಮಾಡಿ, ವಂ.ಜೇಸನ್ ಪಿಂಟೊ ಶಿರ್ವ ಮತ್ತು ವಂ.ಅನಿಲ್ ಕಿರಣ್ ಮುಲ್ಕಿ ನೆರವೇರಿಸಿದರು. ದಿನದ ಏಕೈಕ ಕನ್ನಡ ಬಲಿಪೂಜೆಯನ್ನು ಚಿಕ್ಕಮಗಳೂರಿನ ವಂ.ಜಾರ್ಜ್ ಮೊನಿಸರ್ ನೆರವೇರಿಸಿದರು.
ದಿನದ ಅಂತಿಮ ಬಲಿಪೂಜೆಯನ್ನು ಸಂಜೆ 7 ಗಂಟೆಗೆ ನೆರವೇರಿಸಿ ಮಹೋತ್ಸವದ ಪ್ರಥಮ ದಿನದ ಕಾರ್ಯಕ್ರಮಗಳನ್ನು ಸಂಪನ್ನಗೊಳಿಸಲಾಯಿತು. ಮಹೋತ್ಸವದ ಮುಂದಿನ ನಾಲ್ಕು ದಿನಗಳಲ್ಲಿ(ಸೋಮವಾರದಿಂದ ಗುರುವಾರ) ಬೆಳಿಗ್ಗೆ 8,10,12 ಹಾಗೂ ಮಧ್ಯಾಹ್ನ 2, 4 ಮತ್ತು 7 ಗಂಟೆಗೆ ಬಲಿಪೂಜೆಗಳು ನೆರವೇರಲಿವೆ.