ರಶ್ಯಾ ಪರ ಬಂಡುಗೋರರ ಮೂಲಕ ಉಕ್ರೇನ್ ವಿರುದ್ಧದ ಸಂಘರ್ಷಕ್ಕೆ ಯೋಜನೆ: ವರದಿ

ಉಕ್ರೇನ್
ಮಾಸ್ಕೊ, ಫೆ.20: ಉಕ್ರೇನ್ನ ಪೂರ್ವಪ್ರಾಂತದ ಮೇಲೆ ನಿಯಂತ್ರಣ ಸಾಧಿಸಿರುವ ರಶ್ಯಾ ಪರ ಬಂಡುಗೋರರ ಮೂಲಕ ಉಕ್ರೇನ್ ಮೇಲಿನ ಸಂಘರ್ಷಕ್ಕೆ ವೇದಿಕೆ ರೂಪಿಸಲು ರಶ್ಯಾ ಯೋಜನೆ ರೂಪಿಸಿದೆ ಎಂದು ಪಾಶ್ಚಿಮಾತ್ಯ ದೇಶಗಳು ಆತಂಕ ವ್ಯಕ್ತಪಡಿಸಿವೆ.
ಈ ಮಧ್ಯೆ, ತಮ್ಮ ನಿಯಂತ್ರಣದಲ್ಲಿರುವ ಪ್ರದೇಶವನ್ನು ಬಲಪ್ರಯೋಗದ ಮೂಲಕ ವಶಪಡಿಸಿಕೊಳ್ಳುವ ಉಕ್ರೇನ್ನ ಯೋಜನೆಯನ್ನು ಬಯಲಿಗೆಳೆದಿದ್ದು ಉಕ್ರೇನ್ನ ಓರ್ವ ಗೂಢಚಾರನನ್ನು ಬಂಧಿಸಿರುವುದಾಗಿ ರಶ್ಯಾ ಪರ ಪ್ರತ್ಯೇಕತಾವಾದಿಗಳು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ತಿರಸ್ಕರಿಸಿರುವ ಉಕ್ರೇನ್, ಇಂತಹ ಸುಳ್ಳು ಹೇಳಿಕೆಗಳು ಉದ್ವಿಗ್ನತೆಯನ್ನು ಪ್ರಚೋದಿಸುತ್ತವೆ ಎಂದಿದೆ.
ಶನಿವಾರ ಉಕ್ರೇನ್ ಗಡಿಭಾಗದಲ್ಲಿ ನಡೆದ ಶೆಲ್ ದಾಳಿ ಈ ಯೋಜನೆಯ ಒಂದು ಭಾಗವಾಗಿದೆ. ಇತರರ ಮೇಲೆ ತಪ್ಪು ಹೊರಿಸಿ ಸಂಘರ್ಷಕ್ಕೆ ವೇದಿಕೆ ರೂಪಿಸಿಕೊಳ್ಳುವ ತಂತ್ರವನ್ನು ರಶ್ಯಾ ಹೆಣೆದಿದೆ ಎಂದು ಉಕ್ರೇನ್ ಹಾಗೂ ಪಾಶ್ಚಿಮಾತ್ಯ ದೇಶಗಳು ಆತಂಕ ಸೂಚಿಸಿವೆ. ಆದರೆ ಇದನ್ನು ನಿರಾಕರಿಸಿರುವ ರಶ್ಯಾ, ಪೂರ್ವ ಉಕ್ರೇನ್ನಲ್ಲಿ ತೀವ್ರಗೊಂಡಿರುವ ಪ್ರತ್ಯೇಕತಾ ಅಭಿಯಾನದಿಂದ ಸಾಮೂಹಿಕ ಸ್ಥಳಾಂತರದ ಬಿಕ್ಕಟ್ಟು ಎದುರಾಗಲಿದೆ. ಆ ಭಾಗದ ಜನರಲ್ಲಿ ಉಕ್ರೇನ್ ಅಧಿಕಾರಿಗಳಿಂದ ಕಠಿಣ ಕ್ರಮದ ಭೀತಿ ನೆಲೆಸಿದೆ ಎಂದು ಹೇಳಿದೆ.
ರಶ್ಯಾ ಪರ ಇರುವ ಪ್ರದೇಶವನ್ನು ಬಲಪ್ರಯೋಗದಿಂದ ವಶಪಡಿಸುವ ಪಿತೂರಿಯನ್ನು ಬಯಲಿಗೆಳೆದಿರುವುದಾಗಿ ಪೂರ್ವ ಉಕ್ರೇನ್ನ ಸ್ವಯಂ ಘೋಷಿತ ಡೊನೆಸ್ಕ್ ಪೀಪಲ್ಸ್ ರಿಪಬ್ಲಿಕ್ನ ಪ್ರತ್ಯೇಕತಾವಾದಿಗಳ ಮುಖಂಡರು ಹೇಳಿಕೆ ನೀಡಿದ್ದಾರೆ. ರಶ್ಯಾದ ಸರಕಾರಿ ಸ್ವಾಮ್ಯದ ಟಿವಿ ಚಾನೆಲ್ನಲ್ಲಿ ಪ್ರಸಾರವಾದ ಸುದ್ಧಿಯಲ್ಲಿ ಓರ್ವ ಉಕ್ರೇನ್ ಪ್ರಜೆಯನ್ನು ಬಂಧಿಸಿರುವ ವೀಡಿಯೊ ತೋರಿಸಲಾಗಿದೆ. ಪ್ರತ್ಯೇಕತಾವಾದಿ ಪಡೆಯ ಕಮಾಂಡರ್ನ ಜೀಪಿನಲ್ಲಿ ಸ್ಫೋಟಕ ಇರಿಸಿ ಅದನ್ನು ಸ್ಫೋಟಿಸಲು ತಾನು ನೆರವಾಗಿರುವುದಾಗಿ ಆ ವ್ಯಕ್ತಿ ಹೇಳಿಕೆ ನೀಡಿದ್ದಾನೆ. 2018ರಿಂದಲೂ ಡೊನೆಸ್ಕ್ ಪ್ರಾಂತದಲ್ಲಿ ಉಕ್ರೇನ್ ಪರವಾಗಿ ಗೂಢಚಾರಿಕೆ ನಡೆಸುತ್ತಿದ್ದು, ಶೀಘ್ರದಲ್ಲೇ ಈ ನಗರವನ್ನು ಗುರಿಯಾಗಿಸಿ ದಾಳಿ ಆರಂಭವಾಗುವ ಹಿನ್ನೆಲೆಯಲ್ಲಿ ನಗರದಿಂದ ತೆರಳುವಂತೆ ತನಗೆ ಸೂಚಿಸಲಾಗಿದೆ ಎಂದು ಬಂಧಿತ ವ್ಯಕ್ತಿ ನೀಡಿರುವ ಹೇಳಿಕೆ ಪ್ರಸಾರವಾಗಿದೆ.





