ಲಾಲು ಪ್ರಸಾದ್‌ಗೆ 5 ವರ್ಷಗಳ ಜೈಲು ಶಿಕ್ಷೆ,60 ಲ.ರೂ.ದಂಡ

ರಾಂಚಿ,21: ಇಲ್ಲಿಯ ಸಿಬಿಐ ವಿಶೇಷ ನ್ಯಾಯಾಲಯವು ಸೋಮವಾರ ಮೇವು ಹಗರಣದ ಐದನೇ ಪ್ರಕರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 60 ಲ.ರೂ.ದಂಡವನ್ನು ವಿಧಿಸಿದೆ.
ಪ್ರಕರಣದಲ್ಲಿ ಲಾಲು ಪ್ರಸಾದ್ ಮತ್ತು ಇತರ 39 ಜನರು ದೋಷಿಗಳು ಎಂದು ನ್ಯಾಯಾಲಯವು ಕಳೆದ ವಾರ ಘೋಷಿಸಿತ್ತು. 1990ರ ದಶಕದಲ್ಲಿ ಲಾಲು ಪ್ರಸಾದ್ ಮುಖ್ಯಮಂತ್ರಿಯಾಗಿದ್ದಾಗ ನಡೆದಿದ್ದ ಮೇವು ಹಗರಣದಲ್ಲಿ ಡೋರಾಂಡ ಖಜಾನೆಯಿಂದ 139.5 ಕೋ.ರೂ.ಗಳನ್ನು ಕಾನೂನುಬಾಹಿರವಾಗಿ ಹಿಂಪಡೆದುಕೊಂಡಿದ್ದಕ್ಕೆ ಈ ಪ್ರಕರಣವು ಸಂಬಂಧಿಸಿದೆ.
‘ಒಡಕುಗಳನ್ನು ಸೃಷ್ಟಿಸುವವರ ವಿರುದ್ಧ ನಾನು ಹೋರಾಡುತ್ತೇನೆ. ಅವರಿಗೆ ನಮ್ಮನ್ನು ಸೋಲಿಸಲು ಸಾಧ್ಯವಾಗುತ್ತಿಲ್ಲ,ಹೀಗಾಗಿ ನಮ್ಮನ್ನು ಸಂಚುಗಳಲ್ಲಿ ಸಿಕ್ಕಿಸಲು ಪ್ರಯತ್ನಿಸುತ್ತಿದ್ದಾರೆ. ನಾನು ಎಂದಿಗೂ ಹೆದರಿಲ್ಲ,ಯಾರ ಎದುರಿಗೂ ಬಗ್ಗಿಲ್ಲ. ನಾನು ಹೋರಾಟವನ್ನು ಮುಂದುವರಿಸುತ್ತೇನೆ. ಹೇಡಿಗಳಿಗೆ ಇಂತಹ ಹೋರಾಟಗಳು ಎಂದಿಗೂ ಅರ್ಥವಾಗುವುದಿಲ್ಲ’ ಎಂದು ಲಾಲು ಪ್ರಸಾದ್ ಟ್ವೀಟಿಸಿದ್ದಾರೆ.
ಅನಾರೋಗ್ಯದಿಂದಾಗಿ ಜಾಮೀನಿನಲ್ಲಿರುವ ಅವರು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು.
ಫೆ.15ರಂದು ದೋಷಿ ಎಂದು ನ್ಯಾಯಾಲಯವು ಘೋಷಿಸಿದ ಬಳಿಕ ಲಾಲು ಪ್ರಸಾದ್‌ರನ್ನು ರಾಂಚಿಯ ಜೈಲು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರು ಈಗಾಗಲೇ ಮೂರೂವರೆ ವರ್ಷಕ್ಕೂ ಹೆಚ್ಚು ಕಾಲ ಜೈಲುಶಿಕ್ಷೆಯನ್ನು ಅನುಭವಿಸಿರುವುದರಿಂದ ಶೀಘ್ರವೇ ಬಿಡುಗಡೆಗೊಳ್ಳಬಹುದು.
ಮೇವು ಹಗರಣಕ್ಕೆ ಸಂಬಂಧಿಸಿದ ಇನ್ನೊಂದು ಪ್ರಕರಣವು ಪಾಟ್ನಾದ ಸಿಬಿಐ ನ್ಯಾಯಾಲಯದಲ್ಲಿ ಬಾಕಿಯಿದೆ. ಬ್ಯಾಂಕು ಮತ್ತು ಭಾಗಲ್ಪುರ ಖಜಾನೆಯಿಂದ ಕಾನೂನುಬಾಹಿರವಾಗಿ ಹಣವನ್ನು ಹಿಂದೆಗೆದುಕೊಂಡಿದ್ದಕ್ಕೆ ಈ ಪ್ರಕರಣವು ಸಂಬಂಧಿಸಿದೆ.







