ಆರೆಸೆಸ್ಸ್ ಅನ್ನು ಸದನದಲ್ಲಿ ತರಬೇಡಿ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು, ಫೆ. 21: ‘ರಾಷ್ಟ್ರೀಯ ಸ್ವಯಂ ಸೇವಕ(ಆರೆಸೆಸ್ಸ್)ವನ್ನು ನಿಮ್ಮ ರಾಜಕೀಯ ಕಾರಣಕ್ಕೆ ಸದನದಲ್ಲೇಕೆ ತರುತ್ತೀರಿ' ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ವಿರುದ್ಧ ಇಂದಿಲ್ಲಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷ ಕಾಂಗ್ರೆಸ್ ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದ ಧರಣಿ ನಡೆಸುತ್ತಿದ್ದ ವೇಳೆ, ‘ಕೈಗೊಂಬೆ ಕೈಗೊಂಬೆ ಆರೆಸೆಸ್ಸ್ ಕೈಗೊಂಬೆ' ಎಂದು ಆರೆಸೆಸ್ಸ್ ವಿರುದ್ಧ ಕಾಂಗ್ರೆಸ್ ಸದಸ್ಯರು ಧಿಕ್ಕಾರದ ಘೋಷಣೆ ಕೂಗಿದರು. ಇದರಿಂದ ಕೆರಳಿದ ಸ್ಪೀಕರ್ ಕಾಗೇರಿ, ‘ಆರೆಸೆಸ್ಸ್ ಅನ್ನು ಸದನದಲ್ಲಿ ಚರ್ಚೆಗೆ ತರಬೇಡಿ' ಎಂದು ಹೇಳಿದರು.
‘ಆರೆಸೆಸ್ಸ್ ಹೆಸರು ಹೇಳಿ ಏಕೆ ಧಿಕ್ಕಾರ ಹಾಕುತ್ತೀರಾ, ಆರೆಸೆಸ್ಸ್ ಒಂದು ರಾಷ್ಟ್ರೀಯ ಸಂಘಟನೆ. ಅವರ ಸಂಘಟನೆ ಕಾರ್ಯಗಳಿಗೆ ನೀವೆಲ್ಲರೂ ಬೆಂಬಲ ನೀಡಬೇಕೇ ಹೊರತು ಆರೆಸೆಸ್ಸ್ ವಿರುದ್ಧ ಮಾತನಾಡಬಾರದು. ನಿಮ್ಮ ರಾಜಕೀಯಕ್ಕೆ ಆರೆಸೆಸ್ಸ್ ಹೆಸರು ಬಳಸಬೇಡಿ' ಎಂದು ಕಾಂಗ್ರೆಸ್ ಸದಸ್ಯರ ವಿರುದ್ಧ ಸ್ಪೀಕರ್ ಕಿಡಿಕಾರಿದರು.
ಆದರೆ, ಇದಕ್ಕೆ ಸೊಪ್ಪು ಹಾಕದ ಕಾಂಗ್ರೆಸ್ ಸದಸ್ಯರು, ಆರೆಸೆಸ್ಸ್, ಬಿಜೆಪಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಇದೇ ವೇಳೆ ಪ್ರತಿಪಕ್ಷ ಸದಸ್ಯರು ತಮ್ಮ ಧರಣಿ ಕೈಬಿಟ್ಟು ಆಸನಗಳಲ್ಲಿ ಕೂರುವಂತೆ ಶಾಸಕರನ್ನು ಮತ್ತೆ ಮತ್ತೆ ಮನವಿ ಮಾಡಿದರು. ಆದರೆ, ಕಾಂಗ್ರೆಸ್ ಸದಸ್ಯರು ಸ್ಪೀಕರ್ ಮನವಿಗೆ ಸ್ಪಂದಿಸಲಿಲ್ಲ.
ನಮಗೂ ಚರ್ಚೆಗೆ ಅವಕಾಶ ಕೊಡಿ: ಇದೇ ವೇಳೆ ಮಾತನಾಡಿದ ಜೆಡಿಎಸ್ ಉಪ ನಾಯಕ ಬಂಡೆಪ್ಪ ಕಾಶೆಂಪೂರ್, ‘ರಾಜ್ಯದ ನಮಗೆ ಜನರ ಸಮಸ್ಯೆಗಳನ್ನು ಚರ್ಚೆ ಮಾಡಲು ನಮಗೂ ಅವಕಾಶ ನೀಡಿ. ನಾವು 35 ಮಂದಿ ಶಾಸಕರು ಇದ್ದೇವೆ. ನಮಗೂ ಜವಾಬ್ದಾರಿ ಇದೆ ಎಂದು ಸ್ಪೀಕರ್‍ಗೆ ಮನವಿ ಮಾಡಿದರು. ಇಂತಹ ಗದ್ದಲ ಮಧ್ಯೆ ಚರ್ಚೆ ಮಾಡಲು ಸಾಧ್ಯವಿಲ್ಲ ಎಂದ ಸ್ಪೀಕರ್, ಸದನವನ್ನು ನಾಳೆ(ಪೆ.22) ಬೆಳಗ್ಗೆ 11ಗಂಟೆಗೆ ಸೇರುವಂತೆ ಮುಂದೂಡಿದರು.







