ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲದ ಮಧ್ಯೆ ಕೆಪಿಎಸ್ಸಿ ಸಹಿತ ನಾಲ್ಕು ಮಹತ್ವದ ವಿಧೇಯಕಗಳ ಅಂಗೀಕಾರ

ಬೆಂಗಳೂರು, ಫೆ. 21: ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ಧರಣಿ, ಗದ್ದಲದ ಮಧ್ಯೆ 2022ನೆ ಸಾಲಿನ ಕರ್ನಾಟಕ ಸಿವಿಲ್ ಸೇವೆಗಳ(2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರರ (ಕೆಎಎಸ್) ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ವಿಧೇಯಕ ಸೇರಿದಂತೆ ನಾಲ್ಕು ಮಹತ್ವದ ವಿಧೇಯಕಗಳಿಗೆ ಅನುಮೋದನೆ ನೀಡಲಾಯಿತು.
ಸೋಮವಾರ ವಿಧಾನಸಭೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಧರಣಿಯಲ್ಲಿದ್ದ ವೇಳೆ ಶಾಸನ ರಚನೆ ಕಲಾಪ ಕೈಗೆತ್ತಿಕೊಂಡ ಸ್ಪೀಕರ್ ಕಾಗೇರಿ, ವಿಧೇಯಕಗಳ ಮೇಲೆ ಚರ್ಚೆ ನಡೆಸಲು ಬನ್ನಿ, ಸಹಕರಿಸಿ ಎಂದು ಕೋರಿದರೂ ಸ್ಪಂದಿಸಲಿಲ್ಲ. ಹೀಗಾಗಿ ವಿಧೇಯಕ ಪರ್ಯಾಲೋಚನೆಗೆ ಅವಕಾಶ ಕಲ್ಪಿಸಿದರು. ಈ ವೇಳೆ ಸಿಎಂ ಪರವಾಗಿ ಕಾನೂನು ಸಚಿವ ಮಾಧುಸ್ವಾಮಿ ಕೆಪಿಎಸ್ಸಿ ವಿಧೇಯಕ ಪರ್ಯಾಲೋಚನೆಗೆ ಕೋರಿದರು. ಕೆಎಎಸ್ ಹುದ್ದೆಗಳ ಭರ್ತಿಗೆ 2011ರಲ್ಲಿ ಕೆಪಿಎಸ್ಸಿ ಪರೀಕ್ಷೆಯಲ್ಲಿ ಅಂತಿಮ ಪಟ್ಟಿಗೆ ಆಯ್ಕೆಯಾಗಿ ರದ್ದಾಗಿದ್ದ 362 ಅಭ್ಯರ್ಥಿಗಳ ಆಯ್ಕೆಯನ್ನು ಸಿಂಧುಗೊಳಿಸಿ ನೇಮಕಾತಿ ಆದೇಶ ನೀಡಲು ತೀರ್ಮಾನಿಸಿ ಮಂಡಿಸಿದ್ದ ವಿಧೇಯಕಕ್ಕೆ ಚರ್ಚೆ ಇಲ್ಲದೆ ಅಂಗೀಕಾರ ನೀಡಲಾಯಿತು.
ಇದೇ ವೇಳೆ ಗೃಹ ನಿರ್ಮಾಣ ಸಹಕಾರ ಸಂಘಗಳಿಂದ ನಿವೇಶನ ಖರೀದಿಸುವ ಗ್ರಾಹಕರಿಗೆ ಆಸ್ತಿ ನೋಂದಣಿ ಸುಲಭವಾಗಿ ಮಾಡಿಕೊಡುವ ನಿಟ್ಟಿನಲ್ಲಿ ‘2022ನೆ ಸಾಲಿನ ಕರ್ನಾಟಕ ಸ್ಟಾಂಪು (ತಿದ್ದುಪಡಿ) ವಿಧೇಯಕ' ಹಾಗೂ ರಾಜ್ಯದಲ್ಲಿ ಕಂಪೆನಿಗಳ ವಿಲೀನ, ಮೂಲ ಕಂಪೆನಿ ಜತೆ ವಿಲೀನ ಅಥವಾ ಪುನರ್‍ಸ್ಥಾಪನೆ ವೇಳೆ ನೋಂದಣಿಗೆ ಗರಿಷ್ಠ ಮುಂದ್ರಾಂಕ ಶುಲ್ಕವನ್ನು 25 ಕೋಟಿ ರೂ.ಗಳಿಗೆಗೆ ಮಿತಿಗೊಳಿಸುವ ‘2022ನೆ ಸಾಲಿನ ಕರ್ನಾಟಕ ಮುದ್ರಾಂಕ (ಎರಡನೇ ತಿದ್ದುಪಡಿ) ವಿಧೇಯಕ'ಕ್ಕೆ ಅನುಮೋದನೇ ನೀಡಲಾಯಿತು.
ಆರ್ಥಿಕ ಅಪರಾಧ ಪ್ರಕರಣಗಳಲ್ಲಿ ಆಪಾದಿತರ ಆಸ್ತಿ ಜಪ್ತಿ ಮಾಡಿದ ವಸ್ತುಗಳನ್ನು ರಾಜ್ಯಕ್ಕೆ ವಶಪಡಿಸಿಕೊಳ್ಳುವ ಸಂಬಂಧ ‘ಕ್ರಿಮಿನಲ್ ಕಾನೂನು ತಿದ್ದುಪಡಿ ಅಧ್ಯಾದೇಶ (ಕರ್ನಾಟಕ ತಿದ್ದುಪಡಿ) ವಿಧೇಯಕ-2022'ನ್ನು ಯಾವುದೇ ಚರ್ಚೆ ಇಲ್ಲದೆ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.







