ಬಿಜೆಪಿ ಮೊಂಡುತನ, ಹಠಮಾರಿ ಧೋರಣೆ ಹೊಂದಿದೆ: ಪ್ರಕಾಶ್ ರಾಥೋಡ್

ಪ್ರಕಾಶ್ ರಾಥೋಡ್
ಬೆಂಗಳೂರು, ಫೆ.21: ಸುಗಮ ಕಲಾಪ ನಡೆಯಬೇಕೆನ್ನುವುದು ಕಾಂಗ್ರೆಸ್ ಪಕ್ಷದ ಆಶಯವಾಗಿದೆ. ಆದರೆ, ಆಡಳಿತರೂಢ ಬಿಜೆಪಿ ಪಕ್ಷ ಮೊಂಡುತನ, ಹಠಮಾರಿ ಧೋರಣೆ ಪ್ರದರ್ಶಿಸುತ್ತಿದೆ ಎಂದು ವಿಧಾನಪರಿಷತ್ನ ಪ್ರತಿಪಕ್ಷದ ಮುಖ್ಯ ಸಚೇತಕ ಪ್ರಕಾಶ್ ಕೆ. ರಾಥೋಡ್ ಟೀಕಿಸಿದ್ದಾರೆ.
ಸೋಮವಾರ ಈ ಕುರಿತು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಪತ್ರ ಬರೆದಿರುವ ಅವರು, ನಮ್ಮ ಜೀವ ಸ್ವರೂಪವಾದ ಸಂವಿಧಾನ, ರಾಷ್ಟ್ರ ಧ್ವಜ, ರಾಷ್ಟ್ರಗೀತೆ ಉಳಿವಿಗಾಗಿ ಕಾಂಗ್ರೆಸ್ ಪಕ್ಷ ಹೋರಾಟ ಮಾಡುತ್ತಿದೆ. ಇದನ್ನು ನೀವು ಅರ್ಥ ಮಾಡಿಕೊಳ್ಳುತ್ತೀರಿ ಎನ್ನುವ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಸುಗಮ ಕಲಾಪಕ್ಕೆ ಸಹಕಾರ ನೀಡುವಂತೆ ಸಭಾಪತಿಗಳು ಬರೆದಿರುವ ಪತ್ರಕ್ಕೆ ಪ್ರತಿಯಾಗಿ ಬರೆದಿರುವ ಪತ್ರದಲ್ಲಿ ಈ ವಿಷಯ ತಿಳಿಸಿದ್ದು, ಪ್ರತಿಕ್ಷಣವೂ ನಮ್ಮ ಉಸಿರಿರುವವರೆಗೂ ತ್ಯಾಗ ಮಾಡಿಯಾದರೂ ಸಂವಿಧಾನ ಹಾಗೂ ರಾಷ್ಟ್ರಧ್ವಜ, ರಾಷ್ಟ್ರಗೀತೆಯನ್ನು ಉಳಿಸಿಕೊಳ್ಳಲೆಬೇಕು. ಸಂವಿಧಾನದ ಆರ್ಟಿಕಲ್ 51(ಎ) ಮತ್ತು(ಬಿ) ಕೂಡಾ ಇದನ್ನೇ ಹೇಳುತ್ತದೆ. ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆಯನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಆದರೆ ಇಂದು ಅದನ್ನು ಗಾಳಿಗೆ ತೂರಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಂವಿಧಾನವನ್ನು ಧಿಕ್ಕರಿಸಿ, ಮನುವಾದವನ್ನು ಹೇರುವ ಹುನ್ನಾರ ನಡೆಯುತ್ತಿದೆ. ಇದನ್ನು ನೋಡಿದರೆ ನಾವು ನಿಮ್ಮಂತೆ ಮನುಷ್ಯರೇ, ನಮಗೂ ಇಲ್ಲಿನ ನೆಲ, ಜಲ, ಗಾಳಿ, ಉದ್ಯೋಗ, ವಿದ್ಯೆಗಳಲ್ಲಿ ಹಕ್ಕಿವೆ. ನಮ್ಮೆಲ್ಲರ ಇಂತಹ ಸ್ಥಿತಿಯು ಕೆಲವರ ಹೊಟ್ಟೆಗೆ ಬೆಂಕಿ ಬಿದ್ದಂತಾಗಿದೆ. ನಮ್ಮದೇ ಸೋದರ ಜಾತಿಗಳ ನಾಯಕರಿಂದ ಮಾತುಗಳನ್ನು ಆಡಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳುವ ರಾಷ್ಟ್ರದ್ರೋಹಿಗಳು ಸರಕಾರದಲ್ಲಿದ್ದಾರೆ. ಸರಕಾರ ಇಂತಹವರಿಗೆ ಯಾವ ಶಿಕ್ಷೆಯನ್ನು ನೀಡದೆ ಕಾಪಾಡುತ್ತಿದೆ. ರಾಷ್ಟ್ರದ್ರೋಹಕ್ಕೆ ಸಮಾನವಾದ ತಪ್ಪೆಸಗುವ ಮಂತ್ರಿಯನ್ನು ರಕ್ಷಿಸುತ್ತಿರುವ ಸರಕಾರವೂ ಅಪರಾಧದಲ್ಲಿ ಭಾಗಿಯಾಗಿದೆ.
ಅದು ಅಲ್ಲದೆ, ಸಚಿವರು ಸಂಪೂರ್ಣ ತಿಳಿಯದೆ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ ನಂತರವೂ ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಏನನ್ನಬೇಕೋ ಅರ್ಥವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ನಾಡಿನ ಸಾವಿರಾರು ಜನರು ಸಂಕಷ್ಟದಲ್ಲಿರುವಾಗ ಅವುಗಳನ್ನು ವೇದಿಕೆಯಲ್ಲಿ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಬೇಕು ಎನ್ನುವುದು ನಮ್ಮ ಉದ್ದೇಶವೂ ಕೂಡಾ ಎಂದಿರುವ ಅವರು, ಆಡಳಿತರೂಢ ಸರಕಾರ ಬಡವರು, ದಲಿತರು, ರೈತರು, ಮಧ್ಯಮ ವರ್ಗದವರು ಹಾಗೂ ವಿದ್ಯಾವಂತ ಯುವಜನರು, ಕಾರ್ಮಿಕರು, ಮಹಿಳೆಯರು, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಯ ಹಿತಾಸಕ್ತಿಗಳಿಗೆ ವಿರುದ್ಧವಾದ ಕಾನೂನು ಜಾರಿಗೆ ತಂದಾಗಲೂ ನಾವು ಪ್ರತಿಭಟನೆ ನಡೆಸಿದ್ದೇವೆ. ಈಗಲೂ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಅವರು ಪ್ರಕಟನೆಯಲ್ಲಿ ಹೇಳಿದ್ದಾರೆ.







