ಮುಸ್ಲಿಂ ಹೆಣ್ಣು ಮಕ್ಕಳಿಗೆ ಹಿಜಾಬ್ ಸಹಿತ ಶಿಕ್ಷಣಕ್ಕೆ ಬೆಂಬಲಿಸಿ ಉಪವಾಸ ಸತ್ಯಾಗ್ರಹ: ಪಿ.ವಿ.ಮೋಹನ್

ಮಂಗಳೂರು: ಮುಸ್ಲಿಂ ಹೆಣ್ಣು ಮಕ್ಕಳಿಗೆ ಹಿಜಾಬ್ ಸಹಿತ ಶಾಲೆಗಳಲ್ಲಿ ಪ್ರವೇಶ ನೀಡಬೇಕು. ಈ ನಿಟ್ಟಿನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲಿಸಿ ಅವರೊಂದಿಗೆ ನಾವಿದ್ದೇವೆ ಎನ್ನುವ ಸಂದೇಶದೊಂದಿಗೆ ಶೀಘ್ರದಲ್ಲೇ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸುವುದಾಗಿ ಎಐಸಿಸಿ ಕಾರ್ಯದರ್ಶಿ ಪಿ.ವಿ.ಮೋಹನ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಹಿಜಾಬ್ ಈ ನಾಡಿನ ಸಂಸ್ಕೃತಿಯ ಭಾಗ. ಅದನ್ನು ಧರಿಸುವುದು ಅವರ ಹಕ್ಕು. ಹಿಜಾಬ್ ಹೆಸರಿನಲ್ಲಿ ಮುಸ್ಲಿಂ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಕೃತ್ಯಕ್ಕೆ ಯಾರು ಕೈ ಹಾಕಬಾರದು ಎಂದು ಪಿ.ವಿ.ಮೋಹನ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಈ ಸಮಸ್ಯೆಯನ್ನು ಪರಿಹರಿಸುವ ಬದಲು ಬಿಗಡಾಯಿಸಿದೆ. ಬಿಜೆಪಿಯಲ್ಲಿ ಈ ರೀತಿಯ ಸಮಸ್ಯೆಯನ್ನು ಬಗೆಹರಿಸಲು ಸಮರ್ಥ ನಾಯಕರ ಕೊರತೆ ಇದೆ. ಉಡುಪಿಯ ದಿ.ವಿ.ಎಸ್. ಆಚಾರ್ಯರಂತಹ ನಾಯಕರು ಇದ್ದಿದ್ದರೆ ಈ ಸಮಸ್ಯೆ ವಿಸ್ತರಣೆಯಾಗುತ್ತಿರಲಿಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಂತಹ ಬಿಜೆಪಿ ನಾಯಕರು ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿ ಇಲ್ಲದೆ ಇರುವುದು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಈಶ್ವರಪ್ಪ ರಾಜ್ಯದ ಪಾಲಿಗೆ ಭಸ್ಮಾಸುರ ಆಗಿದ್ದಾರೆ. ರಾಷ್ಟಧ್ವಜಕ್ಕೆ ಅವಮಾನ ಮಾಡಿ ಅದರ ತಲೆ ದಂಡ ತಪ್ಪಿಸಲು ಶಿವಮೊಗ್ಗದ ಘಟನೆಯನ್ನು ಒಂದು ಸಮುದಾಯದ ತಲೆಗೆ ಕಟ್ಟುವ ಪ್ರಯತ್ನ ನಡೆಯುತ್ತಿದೆ. ಇಲ್ಲಿನ ಸಂಸದರು ಇಲ್ಲಿನ ಸಮಸ್ಯೆ ಪರಿಹರಿಸುವ ಪ್ರಯತ್ನ ನಡೆಸುತ್ತಿಲ್ಲ ಎಂದು ಪಿ.ವಿ. ಮೋಹನ್ ತಿಳಿಸಿದ್ದಾರೆ.
ದೇಶದ ಪ್ರಧಾನಿ ಹಕ್ಕುಗಳ ಮಾತನಾಡಬೇಡಿ, ಕರ್ತವ್ಯ ಮಾತ್ರ ಮಾಡಿ ಎನ್ನುತ್ತಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಗಳು, ಅಂಬೇಡ್ಕರ್ ಗೆ ಅವಮಾನವಾಗುವ ಘಟನೆಗಳ ಜೊತೆ ರಾಜ್ಯದಲ್ಲೂ ರಾಷ್ಟ್ರ ಧ್ವಜವನ್ನು ಅವಮಾನಿಸುವ ಹೇಳಿಕೆ ಸಚಿವ ಈಶ್ವರಪ್ಪ ನೀಡಿದ್ದಾರೆ ಎಂದು ಪಿ.ವಿ.ಮೋಹನ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪದಾಧಿಕಾರಿಗಳಾದ ಶಾಹುಲ್ ಹಮೀದ್, ಶುಭೋದಯ ಆಳ್ವ, ಗಣೇಶ್ ಪೂಜಾರಿ, ದುರ್ಗಾ ಪ್ರಸಾದ್, ಪದ್ಮ ಪ್ರಸಾದ್ ಜೈನ್, ರಮಾನಂದ ಪೂಜಾರಿ, ಸೌಹಾನ್ ,ಆರಿಫ್ ಮೊದಲಾದವರು ಉಪಸ್ಥಿತರಿದ್ದರು.
