ಬಿ.ಎಸ್.ಯಡಿಯೂರಪ್ಪಗೆ ಕೆಳದಿ ಶಿವಪ್ಪ ನಾಯಕ ಪ್ರಶಸ್ತಿ

ಶಿವಮೊಗ್ಗ, ಫೆ.21: ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಕೊಡ ಮಾಡುವ ಕೆಳದಿ ಶಿವಪ್ಪನಾಯಕ ಪ್ರಶಸ್ತಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಜನರಾಗಿದ್ದಾರೆ.
ಕಳೆದ 8 ವರ್ಷಗಳಿಂದ ಮಹಾಸಭಾ ಜಿಲ್ಲಾ ಘಟಕ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ಸಿವಪ್ಪನಾಯಕ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.
ಈ ಪ್ರಶಸ್ತಿಯನ್ನು ಪ್ರಥಮ ಬಾರಿಗೆ ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್‌ರವರಿಗೆ ನೀಡಲಾಗಿತ್ತು. ಲಂಡನ್‌ನಲ್ಲಿ ಮೇಯರ್ ಆಗಿದ್ದ ಕನ್ನಡಿಗ ಹಾಗೂ ಲಂಡನ್‌ನಲ್ಲಿ ಬಸವಣ್ಣನವರ ಪುತ್ಥಳಿಯನ್ನು ಪ್ರತಿಷ್ಠಾಪಿಸಿ ಶಿವಮೊಗ್ಗ ನಗರದಲ್ಲಿಯೂ ಪ್ರತಿಷ್ಠಾಪಿಸಲು ಬಸವಣ್ಣನ ಪುತ್ಥಳಿ ನೀಡಿದ್ದ ನೀರಜ್ ಪಾಟೀಲ್‌ರವರಿಗೆ ನಂತರ ಆರು ಸಾವಿರ ಮಕ್ಕಳಿಗೆ ಹೃದಯದ ಶಸ್ತ್ರ ಚಿಕಿತ್ಸೆ ಮಾಡಿದ್ದ ಹಾಗೂ 23ಬಂಗಾರದ ಪದಕಗಳ ವಿಜೇತರಾಗಿದ್ದ ಹೆಸರಾಂತ ಮಕ್ಕಳ ಹೃದಯ ತಜ್ಞೆ ಡಾ. ವಿಜಯಲಕ್ಷ್ಮೀ ಬಾಳೆ ಕುಂದ್ರಿ ಅವರಿಗೆ ನೀಡಲಾಗಿತ್ತು. ಇವರ ನಂತರ ಸಾಹಿತಿ ಚಿದಾನಂದ ಮೂರ್ತಿ ಅವರಿಗೆ ನೀಡಲಾಯಿತು. ಇವರ ನಂತರ ಮೂವರು ರಾಷ್ಟ್ರಪತಿಗಳಜಿಂದ ಪದಕ ಪಡೆದ ಹಾಗೂ ಪ್ರಧಾನ ಮಂತ್ರಿಗಳಿಂದಲೂ ಕೂಡಾ ಪದಕ ಪಡೆದುಕೊಂಡ ಗೌರವಕ್ಕೆ ಪಾತ್ರರಾಗಿದ್ದ ಬಾದಾಮಿಯ ರಮೇಶ್ ಅವರಿಗೆ ನೀಡಲಾಯಿತು.
ಕಳೆದೆರಡು ವರ್ಷಗಳ ಕಾಲ ಕೋವಿಡ್ ಬಂದಿದ್ದರಿಂದ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿರಲಿಲ್ಲ. 2019-20ನೇ ಸಾಲಿನ ಪ್ರಶಸ್ತಿಯನ್ನು ಮಾಜಿ ಮುಖ್ಯಮಂತ್ರಿಗಳಿಗೆ ಪ್ರದಾನ ಮಾಡಲಾಗುತ್ತಿದೆ.
ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ, ರಾಜ್ಯದ ಎಲ್ಲಾ ಸಮುದಾಯದ ನಾಯಕರಾಗಿ ಹೊರಹೊಮ್ಮಿರುವ ಶಿವಮೊಗ್ಗ ಜಿಲ್ಲೆಯವರೇ ಆದ ಯಡಿಯೂರಪ್ಪನವರಿಗೆ ಶಿಸ್ತಿನ ನಾಯಕ ಕೆಳದಿ ಶಿವಪ್ಪನಾಯಕ ಪ್ರಶಸ್ತಿಯನ್ನು ನೀಡುವ ಮೂಲಕ ಅವರನ್ನು ಗೌರವಿಸಲಾಗುತ್ತಿದೆ.
ಮಾ.6ರಂದು ನಗರದ ಕುವೆಂಪು ರಂಗಮಂದಿರದಲ್ಲಿ ಬೆಳಿಗ್ಗೆ 10.30 ಕ್ಕೆ ನಡೆಯುವ ಕಾರ್ಯಕ್ರಮವನ್ನು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಉದ್ಘಾಟಿಸಲಿದ್ದಾರೆ. ಗೊ.ರು. ಚನ್ನಬಸಪ್ಪ ಅವರು ಆಶಯ ಭಾಷಣ ಮಾಡಲಿದ್ದು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬೆಕ್ಕಿನ ಕಲ್ಮಠದ ಡಾ. ಮಲ್ಲಿ ಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಕೋಡಿಮಠದ ಶ್ರೀಗಳು ಹಾಗೂ ಬಸವಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ವಹಿಸಲಿದ್ದಾರೆ.







