ಸುರತ್ಕಲ್: ಪೊಲೀಸರ ವಶಕ್ಕೊಳಗಾಗಿದ್ದ ಆಸಿಫ್ ಆಪತ್ಬಾಂಧವ ಬಿಡುಗಡೆ
ಆಸೀಫ್ ವಿರುದ್ಧ ಜಾಮೀನುರಹಿತ ಪ್ರಕರಣ ದಾಖಲಾಗಿಲ್ಲ: ಕಮಿಷನರ್ ಸ್ಪಷ್ಟನೆ

ಸುರತ್ಕಲ್, ಫೆ,21: ಎನ್‌ಐಟಿಕೆ ಟೋಲ್ಗೇಟ್ ವಿರುದ್ಧ ಕಳೆದ 15 ದಿನಗಳಿಂದ ಆಹೋರಾತ್ರಿ ಧರಣಿ ಕುಳಿತಿದ್ದ ಸಾಮಾಜಿಕ ಕಾರ್ಯಕರ್ತ ಆಸಿಫ್ ಆಪದ್ಬಾಂಧವ ಹಾಗೂ ಸ್ಥಳದಲ್ಲಿದ್ದ ಇತರ ಮೂವರನ್ನು ಸುರತ್ಕಲ್ ಠಾಣಾ ಪೊಲೀಸರು ಸೋಮವಾರ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ರಾತ್ರಿಯ ವೇಳೆ ಬಿಡುಗಡೆಗೊಳಿಸಿದ್ದಾರೆ.
ಮೊನ್ನೆ ತಡರಾತ್ರಿ ಧರಣಿ ನಿರತ ಸ್ಥಳಕ್ಕೆ ನುಗ್ಗಿದ ಮಂಗಳಮುಖಿಯರು ಅವಾಚ್ಯ ಶಬ್ದಗಳಿಂದ ಬೈದು ವಿಕೃತಿ ತೋರಿಸಿ ಆಸಿಫ್ ಆಪತ್ಭಾಂಧವರ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಈ ಬಗ್ಗೆ ಆಸಿಫ್ ನೀಡಿದ ದೂರಿನಂತೆ ಸುರತ್ಕಲ್ ಪೊಲೀಸರು ಆರು ಮಂದಿ ಮಂಗಳಮುಖಿಯರನ್ನು ಬಂಧಿಸಿದ್ದರು. ಈ ಮಧ್ಯೆ ಮಂಗಳಮುಖಿಯರು ಕೂಡ ಆಸಿಫ್ ರ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಗೆ ಪ್ರತಿದೂರು ನೀಡಿದ್ದರು.
ಸೋಮವಾರ ಪ್ರತಿಭಟನೆ ನಿರತರಾಗಿದ್ದ ಆಸಿಫ್ ಆಪತ್ಬಾಂಧವ ಮತ್ತವರ ಬೆಂಬಲಿಗರಾದ ಅಶೀರ್ ಮತ್ತು ಶಾಹಿದ್ ಹಾಗೂ ಸಂತೋಷ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅಲ್ಲದೆ ಸ್ಥಳದಲ್ಲಿದ್ದ ವಾಹನ ಮತ್ತಿತರ ವಸ್ತುಗಳನ್ನು ಪೊಲೀಸರು ಮುಟ್ಟುಗೋಲು ಹಾಕಿದ್ದರು.ಪೊಲೀಸರು ವಶಪಡಿಸುವ ವೇಳೆಗೆ 'ಇದು ನನ್ನ ಮುಂದಿನ ಹೋರಾಟದ ಪ್ರಾರಂಭ. ಸಾರ್ವಜನಿಕರು ಸಹಕಾರ ನೀಡಬೇಕು' ಎಂದು ಆಸೀಫ್ ಮನವಿ ಮಾಡಿದ್ದರು.
ಆಸೀಫ್‌ರನ್ನು ಪೊಲೀಸರು ವಶಪಡಿಸಿಕೊಂಡ ಬಗ್ಗೆ ಸುದ್ದಿಯಾಗುತ್ತಲೇ ಎಸ್‌ಡಿಪಿಐ ಜಿಲ್ಲಾ ನಿಯೋಗವು ಸಂಜೆಯ ವೇಳೆಗೆ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಿತ್ತು. ರಾತ್ರಿಯಾಗುತ್ತಲೇ ಪೊಲೀಸರ ವಶದಿಂದ ಬಿಡುಗಡೆಗೊಂಡ ಆಸೀಫ್‌ರನ್ನು ಎಸ್‌ಡಿಪಿಐ ಮುಖಂಡರಾದ ಅಬೂಬಕ್ಕರ್ ಕುಳಾಯಿ, ಅನ್ವರ್ ಸಾದತ್ ಬಜತ್ತೂರು, ಜಮಾಲ್ ಜೋಕಟ್ಟೆ, ಯಾಸೀನ್ ಅರ್ಕುಳ, ದಾವೂದ್, ತೌಸೀಫ್ ಮತ್ತಿತರರು ಬರಮಾಡಿಕೊಂಡರು.
ಬಂಧಿಸಿಲ್ಲ, ಜಾಮೀನು ರಹಿತ ಎಫ್‌ಐಆರ್ ದಾಖಲಿಸಿಲ್ಲ: ಪೊಲೀಸ್ ಕಮಿಷನರ್
ಆಸೀಫ್ ಆಪತ್ಭಾಂಧವರ ವಿರುದ್ಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ದೂರು ನೀಡಿದ್ದಾರೆ. ಅದರಂತೆ ಅವರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆಯ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇನ್ನು ಅವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದು ಸುಳ್ಳು. ಅವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಿಲ್ಲ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.







