ಬಲೂಚಿಸ್ತಾನ: ಮೂವರು ಉಗ್ರರ ಹತ್ಯೆ

ಬಲೂಚಿಸ್ತಾನ
ಇಸ್ಲಮಾಬಾದ್, ಫೆ.21: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಹತರಾಗಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಬಲೂಚಿಸ್ತಾನದ ಸಿಬಿ ಜಿಲ್ಲೆಯ ತುಲಿ ಪ್ರದೇಶದಲ್ಲಿ ಸಂಶಯಾಸ್ಪದ ವ್ಯಕ್ತಿಗಳ ಚಲನವಲನದ ಬಗ್ಗೆ ದೊರೆತ ಮಾಹಿತಿಯಂತೆ ಭದ್ರತಾ ಪಡೆ ಹಾಗೂ ಗುಪ್ತಚರ ತಂಡ ಜಂಟಿ ಕಾರ್ಯಾಚರಣೆ ಆರಂಭಿಸಿದೆ. ಈ ಹಂತದಲ್ಲಿ ಉಗ್ರರು ಹಾಗೂ ಭದ್ರತಾ ಪಡೆಗಳ ಮಧ್ಯೆ ಗುಂಡಿನ ಚಕಮಕಿ ಆರಂಭವಾಗಿದೆ. ಭದ್ರತಾ ಪಡೆಗಳ ಗುಂಡೇಟಿನಿಂದ ಮೂವರು ಉಗ್ರರು ಹತರಾಗಿದ್ದು ಅವರ ಬಳಿಯಿದ್ದ ಶಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಭದ್ರತಾ ಪಡೆಗಳನ್ನು ಉಲ್ಲೇಖಿಸಿ ಸಮಾ ಟಿವಿ ವರದಿ ಮಾಡಿದೆ.
ರವಿವಾರ, ಉತ್ತರದ ವಝೀರಿಸ್ತಾನದಲ್ಲಿ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ 5 ಉಗ್ರರು ಹತರಾಗಿದ್ದರು. ಬಲೂಚಿಸ್ತಾನದಲ್ಲಿರುವ ಪ್ರತ್ಯೇಕತಾವಾದಿ ಗುಂಪು ಬಲೂಚಿಸ್ತಾನ್ ಲಿಬರೇಷನ್ ಆರ್ಮಿ ಈ ಪ್ರಾಂತದಲ್ಲಿ ಸಕ್ರಿಯವಾಗಿದ್ದು ಭದ್ರತಾ ಪಡೆಯನ್ನು ಗುರಿಯಾಗಿಸಿ ಹಲವು ದಾಳಿಗಳನ್ನು ನಡೆಸುತ್ತಿದೆ ಎಂದು ವರದಿ ಹೇಳಿದೆ.





