ಕೊರಗ ಸಮುದಾಯಕ್ಕೆ ವಸತಿ ಸೌಲಭ್ಯ: ಕಂದಾಯ ಸಚಿವರ ಗಮನಕ್ಕೆ ತಂದು ಕ್ರಮ; ಸಚಿವ ಮಾಧುಸ್ವಾಮಿ

ಬೆಂಗಳೂರು, ಫೆ. 21: ‘ಕೊರಗ ಸಮುದಾಯದವರಿಗೆ ವಸತಿ ಯೋಜನೆಯಡಿ ಮನೆಗಳನ್ನು ಹಂಚಿಕೆ ಮಾಡುತ್ತಿದ್ದರೂ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಮಾನದಂಡಗಳನ್ನು ಸರಳೀಕರಿಸುವುದು ಹಾಗೂ ಕಂದಾಯ ಇಲಾಖೆಯಿಂದ ಅನುಷ್ಠಾನಗೊಳಿಸುವ ಸಂಬಂಧ ಕಂದಾಯ ಸಚಿವರೊಂದಿಗೆ ಸಮಾಲೋಚಿಸಿ ಕ್ರಮ ಕೈಗೊಳ್ಳಲಾಗುವುದು' ಎಂದು ವಸತಿ ಸಚಿವರ ಪರವಾಗಿ ಸಚಿವ ಮಾಧುಸ್ವಾಮಿ ಭರವಸೆ ನೀಡಿದ್ದಾರೆ.
ಸೋಮವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ರಘುಪತಿ ಭಟ್ ಕೆ. ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಜೇನು ಕುರುಬ ಹಾಗೂ ಕೊರಜ ಜನಾಂಗದವರ ಸಮಗ್ರ ಅಭಿವೃದ್ಧಿಗೆ 437 ಮನೆಗಳನ್ನು ಮಂಜೂರು ಮಾಡಿ ವಸತಿ ಇಲಾಖೆ ಸಹಯೋಗದಲ್ಲಿ ಅನುಷ್ಠಾನಗೊಳಿಸಲು ತಿಳಿಸಿರುತ್ತದೆ.
ಉಡುಪಿ-149, ಕುಂದಾಪುರ-142, ಕಾರ್ಕಳ-34, ಮಂಗಳೂರು-71, ಪುತ್ತೂರು-22, ಬಂಟ್ವಾಳ-16, ಸುಳ್ಯ-3 ಸೇರಿದಂತೆ ಒಟ್ಟು 437 ಕೊರಗ ಸಮುದಾಯದ ಮನೆಗಳು. ಪ್ರತಿ ಮನೆಗೆ 3.50 ಲಕ್ಷ ರೂ.ನಂತೆ ಹಣವನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ವಸತಿ ಇಲಾಖೆಯಿಂದ ಅಂಬೇಡ್ಕರ್ ನಿವಾಸ್ ಯೋಜನೆಯಡಿ ಹಣ ನೀಡಲಾಗಿದ್ದು, ಫಲಾನುಭವಿಗಳ ಪಟ್ಟಿಯನ್ನು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಸಲ್ಲಿಸಲಾಗಿದ್ದು, ಪರಿಶೀಲನೆ ಹಂತದಲ್ಲಿದೆ ಎಂದರು.
ಇದಕ್ಕೆ ಆಕ್ಷೇಪಿಸಿದ ಶಾಸಕ ರಘುಪತಿ ಭಟ್, ಮೇಲ್ಕಂಡ ಯೋಜನೆಯಡಿ ಕೊರಗ ಸಮುದಾಯಕ್ಕೆ ವಸತಿ ಸೌಲಭ್ಯ ಕಲ್ಪಿಸಲು ತೊಂದರೆಯಾಗುತ್ತಿದ್ದು, ಮಾನದಂಡ ಸರಳೀಕರಿಸಿ ಕಂದಾಯ ಇಲಾಖೆಯ ಐಟಿಡಿಎಫ್ ಅಡಿಯಲ್ಲಿ ವಸತಿ ಸೌಲಭ್ಯ ಒದಗಿಸಲು ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಈ ಸಂಬಂಧ ಕಂದಾಯ ಸಚಿವರ ಗಮನಕ್ಕೆ ತಂದು ಸೂಕ್ತ ಕ್ರಮ ವಹಿಸಲಾಗುವುದು ಎಂದು ಸರಕಾರದ ಪರವಾಗಿ ಸಚಿವ ಮಾಧುಸ್ವಾಮಿ ಭರವಸೆ ನೀಡಿದರು.







