ಉಕ್ರೇನ್ ಪ್ರತ್ಯೇಕತಾವಾದಿಗಳಿಗೆ ರಶ್ಯ ಮನ್ನಣೆ: ನಿರ್ಬಂಧ ಘೋಷಿಸಿದ ಅಮೆರಿಕ

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹಾಗೂ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (File Photo: PTI)
ವಾಷಿಂಗ್ಟನ್, ಫೆ.22: ರಶ್ಯದಿಂದ ಮಾನ್ಯತೆ ಪಡೆದ ಪೂರ್ವ ಉಕ್ರೇನ್ ಬಂಡುಕೋರ ಉಗ್ರಗಾಮಿಗಳ ವಿರುದ್ಧ ಅಮೆರಿಕ ಸೋಮವಾರ ಹಣಕಾಸು ನಿರ್ಬಂಧವನ್ನು ಘೋಷಿಸಿದೆ. ಅಗತ್ಯ ಬಿದ್ದರೆ ಇನ್ನಷ್ಟು ನಿರ್ಬಂಧ ಹೇರುವುದಾಗಿ ಎಚ್ಚರಿಕೆ ನೀಡಿದೆ.
ಅಧ್ಯಕ್ಷ ಜೋ ಬೈಡೆನ್ ಈ ಸಂಬಂಧ ಆದೇಶ ಹೊರಡಿಸಲಿದ್ದು, "ಉಕ್ರೇನ್ ನ ಡಿಎನ್ಆರ್ ಮತ್ತು ಎಲ್ಎನ್ಆರ್ ಎಂದು ಕರೆಯಲ್ಪಡುವ ಡೊನಸ್ಕ್ ಮತ್ತು ಲಂಗಸ್ಕ್ ಪ್ರದೇಶದಲ್ಲಿ ಅಮೆರಿಕದ ಪ್ರಜೆಗಳು ಯಾವುದೇ ಹೊಸ ಹೂಡಿಕೆ, ವ್ಯಾಪಾರ ಮತ್ತು ಹಣಕಾಸು ನೆರವು ನೀಡುವುದನ್ನು ನಿಷೇಧಿಸಲಾಗುವುದು" ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪಾಕಿ ಹೇಳಿದ್ದಾರೆ.
"ಉಕ್ರೇನ್ ನ ಈ ಪ್ರದೇಶಗಳಲ್ಲಿ ಕಾರ್ಯಾಚರಣೆ ನಿರ್ವಹಿಸುವ ನಿರ್ಧಾರ ಕೈಗೊಳ್ಳುವ ಯಾವುದೇ ವ್ಯಕ್ತಿಗಳ ಮೇಲೆ ದಿಗ್ಬಂಧನ ಹೇರಲು ಈ ಆದೇಶ ಅಧಿಕಾರ ನೀಡಲಿದೆ. ಉಕ್ರೇನ್ ಮೇಲೆ ರಶ್ಯ ದಾಳಿ ನಡೆಸಿದರೆ ಪಾಶ್ಚಿಮಾತ್ಯ ದೇಶಗಳು ಹೇರಲು ಸಜ್ಜಾಗಿರುವ ವಿಸ್ತೃತ ನಿರ್ಬಂಧ ಕ್ರಮಗಳಿಗಿಂತ ಇದು ಪ್ರತ್ಯೇಕ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಎರಡು ಸ್ವಯಂಘೋಷಿತ ಪ್ರಜಾಪ್ರಭುತ್ವಗಳು ಈಗಾಗಲೇ ಅಮೆರಿಕ ಜನತೆಯ ಜತೆ ತೀರಾ ಸೀಮಿತ ವ್ಯವಹಾರಗಳನ್ನು ಹೊಂದಿವೆ. ಆದಾಗ್ಯೂ ಈ ನಿರ್ಬಂಧಗಳು ಸೋವಿಯತ್ ಒಕ್ಕೂಟದ ಪತನದ ಬಳಿಕ ಅತ್ಯಂತ ಅಪಾಯಕಾರಿ ಎನಿಸಲಿರುವ ಪೂರ್ವ- ಪಶ್ಚಿಮ ಸಂಘರ್ಷದಲ್ಲಿ ಇದು ಹೊಸ ಯುಗಕ್ಕೆ ನಾಂದಿಯಾಗಲಿದೆ.
ಈ ನಡುವೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆಂತೋನಿ ಬ್ಲಿಂಕೆನ್ ರಶ್ಯದ ಮೇಲೆ ವಾಗ್ದಾಳಿ ನಡೆಸಿ, ಪ್ರತ್ಯೇಕತಾವಾದಿ ಪ್ರದೇಶಗಳಿಗೆ ಮಾನ್ಯತೆ ನೀಡಿರುವ ಕ್ರಮವನ್ನು ಖಂಡಿಸಿದ್ದರೆ. ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗೆ ರಾಜತಾಂತ್ರಿಕತೆಯಲ್ಲಿ ಯಾವುದೇ ಆಸಕ್ತಿ ಇದ್ದಂತಿಲ್ಲ ಎಂದು ಅವರು ಹೇಳಿದ್ದಾರೆ.







