ಹಿಜಾಬ್ ವಿವಾದ ವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಹುನ್ನಾರ: ಸುನ್ನಿ ಉಲಮಾ ಒಕ್ಕೂಟ

ಮಂಗಳೂರು, ಫೆ.22: ಶಾಲಾ-ಕಾಲೇಜುಗಳಲ್ಲಿ ಸಮುದಾಯದ ವಿದ್ಯಾರ್ಥಿನಿಯರು ಸಮವಸ್ತ್ರದ ಶಾಲಾದರೂ ಶಿರವಸ್ತ್ರವಾಗಿ ಬಳಸುವುದರಲ್ಲಿ ಅಭ್ಯಂತರವಿಲ್ಲ. ಸಂವಿಧಾನಬದ್ದ ಹಕ್ಕನ್ನು ನ್ಯಾಯಾಲಯ ಮಾನ್ಯ ಮಾಡುವ ವಿಶ್ವಾಸವಿದೆ ಎಂದು ಸುನ್ನಿ ಉಲಮಾ ಒಕ್ಕೂಟ ಹೇಳಿದೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಸುನ್ನಿ ಜಂಇಯ್ಯತುಲ್ ಉಲಮಾ ಕೇಂದ್ರ ಸಮಿತಿಯ ಕಾರ್ಯದರ್ಶಿ ಎಸ್.ಪಿ.ಹಂಝ ಸಖಾಫಿ, ಉಡುಪಿ ಜಿಲ್ಲೆಯಲ್ಲಿ ಆರಂಭಗೊಂಡ ಹಿಜಾಬ್ ವಿವಾದವು ಉಡುಗೆ ತೊಡುಗೆಗಳ ವಿಚಾರದಲ್ಲಿ ವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಹುನ್ನಾರವಾಗಿದೆ ಎಂದು ಹೇಳಿದ್ದಾರೆ.
ಸಮವಸ್ತ್ರ ಸಂಹಿತೆ ಜಾರಿಯಲ್ಲಿದ್ದು, ವಿವಾದಕ್ಕೊಳಗಾಗಿರುವ ಪಿಯು ಕಾಲೇಜುಗಳಿಗೆ ಅನ್ವಯವಾಗುವಂತೆ ನ್ಯಾಯಾಲಯ ಹೊರಡಿಸಿರುವ ಮಧ್ಯಂತರ ಆದೇಶವನ್ನು ಅಪಾರ್ಥಗೊಳಿಸಿ, ಎಲ್ಲ ಶಿಕ್ಷಣಾಲಯಗಳಿಂದ ಹಿಜಾಬ್ ಧರಿಸುವ ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಹೊರನಿಲ್ಲಿಸುವ ಪ್ರಯತ್ನ ಹಲವೆಡೆ ನಡೆಯುತ್ತಿದೆ. ಇವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.
ಹಿಜಾಬ್ ವಿಚಾರ ಸಮುದಾಯವೊಂದಕ್ಕೆ ಸಂವಿಧಾನ ನೀಡಿರುವ ಹಕ್ಕನ್ನು ನಿಷೇಧಿಸುವ ಷಡ್ಯಂತ್ರವಾಗಿದೆ. ವಿವಾದಕ್ಕೆ ಬೆಂಕಿಕೊಟ್ಟ ಸಂದರ್ಭದ ಲಾಭ ಪಡೆಯಲು ಕೆಲವು ರಾಜಕೀಯ ಹಿತಾಸಕ್ತಿಗಳು ಯತ್ನಿಸಿರುವುದು ಇದರ ಹಿಂದೆ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ ಎಂದರು.
ವಿವಿಧ ಪ್ರದೇಶಗಳಲ್ಲಿ ವಿವಿಧ ಧರ್ಮಗಳ ಮಹಿಳೆಯರು ತಮ್ಮ ಉಡುಗೆಯ ಭಾಗವೆಂಬಂತೆ ಸೆರಗಿನ ತುದಿಯಿಂದ ಶಿರವನ್ನು ಮುಚ್ಚಿಕೊಳ್ಳುವ ರೂಢಿ ಹಿಂದಿನಿಂದಲೂ ಇದೆ. ಇಸ್ಲಾಮ್ ಶಿರವಸ್ತ್ರವನ್ನು ಮಹಿಳೆಯ ಕಡ್ಡಾಯ ವಸ್ತ್ರಧಾರಣೆಯಾಗಿ ಪರಿಗಣಿಸುತ್ತಿದ್ದು, ಶಿಕ್ಷಣಾಲಯಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ನಿರಾತಂಕವಾಗಿ ಇದನ್ನು ಪಾಲಿಸುತ್ತಾ ಬಂದಿದ್ದಾರೆ. ಈಗ ಏಕಾಏಕಿ ಈ ಬಗ್ಗೆ ವಿವಾದಗಳನ್ನು ಹುಟ್ಟು ಹಾಕಿ ಶಿಕ್ಷಣಾಲಯಗಳಲ್ಲಿ ಅನ್ನೋನ್ಯತೆಯಿಂದ ಕಲಿಯುತ್ತಿರುವ ವಿದ್ಯಾರ್ಥಿಗಳ ನಡುವೆ ವೈಷಮ್ಯ ಉಂಟು ಮಾಡುವ ಇಂತಹ ಪ್ರಯತ್ನ ಖಂಡನಾರ್ಹ ಎಂದರು.
ಶಿಕ್ಷಣಾಲಯಗಳಲ್ಲಿ ವಿವಿಧ ಭಾಷೆ, ಕುಲ, ಜಾತಿ, ಸಂಸ್ಕೃತಿಯವರು ಕಲಿಯುತ್ತಿದ್ದು, ಅವರ ಹೆಸರು ಸಹಿತ ಪ್ರತಿಯೊಂದು ಅವರ ನಡುವಿನ ವೈವಿಧ್ಯವನ್ನು ಎತ್ತಿ ತೋರಿಸುತ್ತದೆ. ಈ ಎಲ್ಲ ವೈವಿಧ್ಯಗಳ ನಡುವೆ ಸಮಾನತೆಯನ್ನು ಪಾಲಿಸಲು ಸಾಧ್ಯವಾಗಿರುವಾಗ ಶಿರವಸ್ತ್ರವೊಂದು ಮಾತ್ರ ಸಮಾನತೆಗೆ ಅಡ್ಡಿ ಎಂಬ ವಾದವ ಬಾಲಿಶವಾಗಿದೆ. ಸಾಮಾಜಿಕ ಬದುಕಿನ ಹತ್ತಾರು ಮಜಲುಗಳಲ್ಲಿ ವಿವಿಧ ಧರ್ಮೀಯರು ತಮ್ಮ ಧಾರ್ಮಿಕ ಸಂಕೇತಗಳನ್ನು ಸೌಹಾರ್ದದೊಂದಿಗೆ ಪರಸ್ಪರ ಅರಿತು ಬೆರೆತು ಬಾಳುತ್ತಿದ್ದು, ಈ ಎಲ್ಲ ಕ್ಷೇತ್ರಗಳಲ್ಲಿ ಯಾವ ತೊಡುಗೆಗಳ ಸೌಹಾರ್ದಯುತ ವಾತಾವರಣಕ್ಕೆ
ಧಕ್ಕೆಯಲ್ಲದಿರುವಾಗ ಶಿಕ್ಷಣಾಲಯಗಳಲ್ಲಿ ಶಿರವಸ್ತ್ರವೊಂದು ಮಾತ್ರ ವಿದ್ಯಾರ್ಥಿಗಳನ್ನು ಪರಸ್ಪರ ಬೇರ್ಪಡಿಸುವಂತೆ ಮಾಡುತ್ತದೆ ಎನ್ನುವ ವಾದವು ಆರ್ಥಹೀನವಾಗಿದೆ. ನ್ಯಾಯಾಲಯದಲ್ಲಿರುವ ಪ್ರಕರಣವು ಸಾಂವಿಧಾನಿಕ ಹಕ್ಕನ್ನು ಕೊಡಮಾಡುವ ರೀತಿಯಲ್ಲಿ ಇತ್ಯರ್ಥವಾಗುವುದನ್ನು ಸುನ್ನಿ ಉಲಮಾ ಒಕ್ಕೂಟ ಬಯಸುತ್ತದೆ ಮತ್ತು ನ್ಯಾಯಾಲಯದ ಮೇಲೆ ವಿಶ್ವಾಸವನ್ನು ಹೊಂದಿದೆ. ಈ ಅನಗತ್ಯ ವಿವಾದ ಶಿಕ್ಷಣಾಲಯಗಳಲ್ಲಿ ವಿದ್ಯಾರ್ಥಿಗಳ ನಡುವೆ ಉಂಟಾಗಿರುವ ಬಿರುಕನ್ನು ಹೋಗಲಾಡಿಸಲು ಮತ್ತು ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಲು ಪ್ರಜ್ಞಾವಂತ ನಾಗರಿಕರೆಲ್ಲರೂ ಕೈಜೋಡಿಸಬೇಕೆಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸುನ್ನಿ ಜಂಇಯ್ಯತುಲ್ ಉಲಮಾ ಕೇಂದ್ರ ಸಮಿತಿಯ ಅಧ್ಯಕ್ಷ ಖಾಝಿ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ದ.ಕ. ಜಿಲ್ಲಾ ಸಮಿತಿಯ ಅಧ್ಯಕ್ಷ ಖಾಸಿಂ ಮದನಿ ಕರಾಯ, ಸದಸ್ಯ ಪಿ.ಎಂ.ಉಸ್ಮಾನ್ ಸಅದಿ ಪಟ್ಟೋರಿ, ಹೈದರ್ ಮದನಿ ಉಪಸ್ಥಿತರಿದ್ದರು.