ಅತ್ಯಾಚಾರ ಆರೋಪಿ ಡೇರಾ ಮುಖ್ಯಸ್ಥ ಗುರ್ಮೀತ್ ಸಿಂಗ್ ಗೆ ಝಡ್ -ಪ್ಲಸ್ ಭದ್ರತೆ: ವರದಿ

ಹೊಸದಿಲ್ಲಿ: ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆ ಎದುರಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ ಗೆ ಹರ್ಯಾಣ ಸರಕಾರವು ಝಡ್ ಪ್ಲಸ್ ಭದ್ರತೆಯನ್ನು ನೀಡಿದೆ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ.
ಈ ತಿಂಗಳ ಆರಂಭದಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳ ಮುಂಚಿತವಾಗಿ 21 ದಿನಗಳ ಫರ್ಲೋ ಮೇಲೆ ಸಿಂಗ್ ಜೈಲಿನಿಂದ ಹೊರಬಂದಿದ್ದ.
ಝಡ್- ಪ್ಲಸ್ ವರ್ಗದಲ್ಲಿರುವವರು ಮೊಬೈಲ್ ಭದ್ರತೆಗಾಗಿ 10 ಭದ್ರತಾ ಸಿಬ್ಬಂದಿಯನ್ನು ಮತ್ತು ನಿವಾಸದ ಭದ್ರತೆಗಾಗಿ ಇಬ್ಬರನ್ನು ಪಡೆಯುತ್ತಾರೆ. ಝಡ್- ಪ್ಲಸ್ ಮಟ್ಟದ ಭದ್ರತೆಯನ್ನು ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಕಮಾಂಡೋಗಳು ಒದಗಿಸುತ್ತಾರೆ.
ಡೇರಾದ ಪ್ರಧಾನ ಕಛೇರಿ ಇರುವ ಸಿರ್ಸಾದಲ್ಲಿರುವ ತನ್ನ ಆಶ್ರಮದಲ್ಲಿ ಇಬ್ಬರು ಮಹಿಳಾ ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ 20 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ. ಆಗಸ್ಟ್ 2017 ರಲ್ಲಿ ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯವು ಅವರನ್ನು ದೋಷಿ ಎಂದು ಘೋಷಿಸಿತ್ತು.





