ಗದ್ದಲದ ನಡುವೆಯೇ ಮುಖ್ಯಮಂತ್ರಿ, ಸಚಿವರು-ಶಾಸಕರ ವೇತನ, ಭತ್ಯೆಗಳನ್ನು ಹೆಚ್ಚಿಸುವ ಮಸೂದೆಗೆ ಅಂಗೀಕಾರ
ಯಾರ್ಯಾರಿಗೆ ಎಷ್ಟೆಷ್ಟು?

ಬೆಂಗಳೂರು, ಫೆ.22: ಸಚಿವ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಳೆದ ಐದು ದಿನಗಳಿಂದ ಕಾಂಗ್ರೆಸ್ ಧರಣಿ ನಡೆಸುತ್ತಿರುವ ನಡುವೆಯೇ ಮಂಗಳವಾರ ವಿಧಾನಸಭೆಯಲ್ಲಿ ಸ್ಪೀಕರ್, ಉಪ ಸಭಾಧ್ಯಕ್ಷ, ಸಚಿವರು, ಶಾಸಕರು ಹಾಗೂ ವಿಧಾನಪರಿಷತ್ತಿನ ಸದಸ್ಯರ ವೇತನ, ಭತ್ತೆ, ನಿವೃತ್ತಿ ವೇತನ ಹೆಚ್ಚಳಕ್ಕೆ ಸಂಬಂಧಿಸಿದ ಎರಡು ವಿಧೇಯಕಗಳಿಗೆ ಧ್ವನಿಮತದ ಅಂಗೀಕಾರ ಲಭಿಸಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಂಡಿಸಿದ ‘2022ನೆ ಸಾಲಿನ ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ತೆ ತಿದ್ದುಪಡಿ ವಿಧೇಯಕ ಹಾಗೂ 2022ನೆ ಸಾಲಿನ ಕರ್ನಾಟಕ ವಿಧಾನಮಂಡಲದ ಸದಸ್ಯರ ವೇತನ, ನಿವೃತ್ತಿ ವೇತನ ಮತ್ತು ಭತ್ತೆಗಳ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ಲಭಿಸಿತು.
2022ನೆ ಸಾಲಿನ ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ತೆ ತಿದ್ದುಪಡಿ ವಿಧೇಯಕದ ಕುರಿತು ತಿಳಿಸಿದ ಸಚಿವ ಮಾಧುಸ್ವಾಮಿ, 2015ನೆ ಇಸವಿಯಿಂದ ಈವರೆಗೆ ಸಚಿವರು, ಸ್ಪೀಕರ್, ಉಪಸಭಾಧ್ಯಕ್ಷರ ಸಂಬಳ, ಭತ್ತೆಗಳನ್ನು ಪರಿಷ್ಕರಣೆ ಮಾಡಿರಲಿಲ್ಲ. ಇದೀಗ ಡಿಸೇಲ್, ಪೆಟ್ರೋಲ್, ಆರೋಗ್ಯ ಸೇವೆಗಳು, ಮನೆಗಳ ಬಾಡಿಗೆ ಎಲ್ಲವೂ ಹೆಚ್ಚಾಗಿದೆ. ಇದನ್ನೆಲ್ಲ ಪರಿಗಣನೆಗೆ ತೆಗೆದುಕೊಂಡು ಸಂಬಳ ಹಾಗೂ ಭತ್ತೆಗಳನ್ನು ಹೆಚ್ಚಿಸಲು ಈ ವಿಧೇಯಕ ಮಂಡಿಸಲಾಗಿದೆ ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪೂರ್, ಕೋವಿಡ್ ಹಿನ್ನೆಲೆಯಲ್ಲಿ ಶಾಸಕರು ಸಹ ಕಡಿತಗೊಂಡಿದ್ದ ಸಂಬಳವನ್ನೆ ತೆಗೆದುಕೊಂಡಿದ್ದಾರೆ. ಆದುದರಿಂದ, ಸರಕಾರ ಮಂತ್ರಿಗಳು, ಸ್ಪೀಕರ್, ಉಪಸಭಾಧ್ಯಕ್ಷರ ವೇತನ ಹೆಚ್ಚಳ ಮಾಡುವುದರ ಜೊತೆಗೆ ಶಾಸಕರನ್ನು ಅದರಲ್ಲಿ ಸೇರಿಸಿಕೊಳ್ಳಬೇಕು ಎಂದರು. ಬಳಿಕ ವಿಧೇಯಕವನ್ನು ಸ್ಪೀಕರ್ ಮತಕ್ಕೆ ಹಾಕಿದರು. ಧ್ವನಿಮತದ ಮೂಲಕ ವಿಧೇಯಕಕ್ಕೆ ಅಂಗೀಕಾರ ಸಿಕ್ಕಿತು.
ಸಂಬಳ ಹೆಚ್ಚಳ: ಮುಖ್ಯಮಂತ್ರಿಯ ವೇತನ ಪ್ರತಿ ತಿಂಗಳು 50 ಸಾವಿರೂ.ಗಳಿಂದ 75 ಸಾವಿರ ರೂ.ಗಳಿಗೆ ಹೆಚ್ಚಳ, ಸಂಪುಟ ದರ್ಜೆ ಸಚಿವರಿಗೆ 40 ಸಾವಿರ ರೂ.ಗಳಿಂದ 60 ಸಾವಿರ ರೂ., ಸಂಪುಟ ದರ್ಜೆ ಸಚಿವರಿಗೆ ಪ್ರತಿ ವರ್ಷಕ್ಕೆ ಆತಿಥ್ಯ ಭತ್ತೆ 3 ಲಕ್ಷ ರೂ.ಗಳಿಂದ 4.50 ಲಕ್ಷ ರೂ.ಗಳಿಗೆ ಹೆಚ್ಚಳ, ಮನೆ ಬಾಡಿಗೆ 80 ಸಾವಿರ ರೂ.ಗಳಿಂದ 1.20 ಲಕ್ಷ ರೂ.ಗಳಿಗೆ ಹೆಚ್ಚಳ, ಮನೆ ನಿರ್ವಹಣೆ ವೆಚ್ಚ 20 ಸಾವಿರ ರೂ.ಗಳಿಂದ 30 ಸಾವಿರ ರೂ.ಗಳಿಗೆ ಹೆಚ್ಚಳವಾಗಲಿದೆ.
2023ರಿಂದ ಐದು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ: ಅದೇ ರೀತಿ 2015ರಿಂದ ಶಾಸಕರ ವೇತನ, ಭತ್ತೆ ಹೆಚ್ಚಳ ಮಾಡಿರಲಿಲ್ಲ. ಕೇಂದ್ರ ಸರಕಾರದ ಕಾನೂನಿನಂತೆ ಪ್ರತಿ ಐದು ವರ್ಷಕ್ಕೊಮ್ಮೆ ವೇತನ, ಭತ್ತೆಗಳನ್ನು ಸಾಮಾನ್ಯವಾಗಿ ಹೆಚ್ಚಳ ಮಾಡಬೇಕು. 2023ರಿಂದ ಪ್ರತಿ ಐದು ವರ್ಷಕ್ಕೊಮ್ಮೆ ಮಾರುಕಟ್ಟೆಯ ಸೂಚ್ಯಂಕ ವೆಚ್ಚ(ಕಾಸ್ಟ್ ಆಫ್ ಇಂಡೆಕ್ಸ್) ಆಧಾರದಲ್ಲಿ ಪರಿಷ್ಕರಣೆ ಮಾಡಲು ವೈಜ್ಞಾನಿಕವಾಗಿ ಈ ವಿಧೇಯಕವನ್ನು ತಂದಿದ್ದೇವೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದರು. ಈ ವಿಧೇಯಕಕ್ಕೂ ವಿಧಾನಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕಾರ ಲಭಿಸಿತು.







