ಪೊಲೀಸ್ ಅಧಿಕಾರಿಗಳು ಜನರ ಗೌರವ ಕಾಪಾಡಲಿ: ಯು.ಟಿ.ಖಾದರ್

ಬೆಂಗಳೂರು, ಫೆ.22: ಹಿಜಾಬ್ ಧರಿಸಿಕೊಂಡು ಬರುವ ವಿದ್ಯಾರ್ಥಿನಿಯರನ್ನು ಕಾಲೇಜು ಗೇಟ್ ಬಳಿ ನಿಲ್ಲಿಸಿ ಲಾಠಿ ತೋರಿಸಿ ಬೆದರಿಕೆ ಹಾಕುವ ಪೊಲೀಸ್ ಅಧಿಕಾರಿಗಳು, ನಿನ್ನೆ ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಪಾರ್ಥಿವ ಶರೀರದ ಮೆರವಣಿಗೆ ನಡೆಸಲು ಅವಕಾಶ ನೀಡಿದ್ದೇಕೆ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್ ಪ್ರಶ್ನಿಸಿದ್ದಾರೆ.
‘ವಾರ್ತಾಭಾರತಿಯೊಂದಿಗೆ ಮಾತನಾಡಿದ ಅವರು, ಶಾಂತಿ, ಸುವ್ಯವಸ್ಥೆಯನ್ನು ಕಾಪಾಡುವುದು ಪೊಲೀಸರ ಆದ್ಯ ಕರ್ತವ್ಯ. ಸೋಮವಾರ ಶಿವಮೊಗ್ಗದಲ್ಲಿ ಪರಿಸ್ಥಿತಿ ಪ್ರಕ್ಷುಬ್ಧಗೊಂಡಿರುವುದನ್ನು ತಿಳಿದು ನಿಷೇಧಾಜ್ಞೆ ಹಾಕಲಾಗಿತ್ತು. ಆದರೂ, ಪಾರ್ಥಿವ ಶರೀರದ ಮೆರವಣಿಗೆ ನಡೆಸಲು ಅವಕಾಶ ನೀಡಿದ್ದಲ್ಲದೆ, ಅದರಲ್ಲಿ ಸಚಿವ ಈಶ್ವರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಭಾಗವಹಿಸಲು ಅನುವು ಮಾಡಿಕೊಟ್ಟಿದ್ದು ಏಕೆ? ಎಂದು ಪ್ರಶ್ನಿಸಿದರು.
ಜನಸಾಮಾನ್ಯರು ಪೊಲೀಸರ ಮೇಲೆ ವಿಶ್ವಾಸ ಇರಿಸಿದ್ದಾರೆ. ಅವರ ಗೌರವ ಕಾಪಾಡುವ ಕೆಲಸವನ್ನು ಪೊಲೀಸರು ಮಾಡಲಿ. ಪಾರ್ಥಿವ ಶರೀರದ ಮೆರವಣಿಗೆ ಸಂದರ್ಭದಲ್ಲಿ ಪೊಲೀಸರ ಎದುರೇ ಕಿಡಿಗೇಡಿಗಳು ಕೆಲವು ನಿರ್ದಿಷ್ಟ ಬಡಾವಣೆಗಳಲ್ಲಿ, ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ವಾಹನಗಳಿಗೆ ಜಖಂ ಮಾಡಿದ್ದಾರೆ. ಕಿಡಿಗೇಡಿಗಳನ್ನು ತಡೆಯಲು ಪೊಲೀಸರ ಬಳಿ ಲಾಠಿ ಇಲ್ಲ ಎಂದು ಖಾದರ್ ಆಕ್ರೋಶ ವ್ಯಕ್ತಪಡಿಸಿದರು.
ಹರ್ಷ ಕೊಲೆ ಆರೋಪಿಗಳು ಯಾರೇ ಆಗಿದ್ದರೂ ಅವರನ್ನು ಬಂಧಿಸಿ, ಕಾನೂನು ರೀತಿ ಕಠಿಣ ಶಿಕ್ಷೆಗೆ ಒಳಪಡಿಸಲಿ. ಆದರೆ, ಅಮಾಯಕರ ಆಸ್ತಿಪಾಸ್ತಿಗಳಿಗೆ ಹಾನಿಯನ್ನುಂಟು ಮಾಡಲು ಪೊಲೀಸರು ಯಾರಿಗೂ ಅವಕಾಶ ಮಾಡಿಕೊಡಬಾರದು ಎಂದು ಖಾದರ್ ಆಗ್ರಹಿಸಿದರು.







